ಉಡುಪಿ: ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯವರ ಕಚೇರಿಯ ಆವರಣದಲ್ಲಿ ಬುಡಕಟ್ಟು ಜನಾಂಗವಾದ ಕೊರಗ ಸಮುದಾಯದವರು ತಮ್ಮ ಉದ್ಯೋಗ ಮತ್ತು ಮೂಲಭೂತ ಸೌಕರ್ಯಕ್ಕಾಗಿ ನಿರಂತರ ಪ್ರತಿಭಟನೆ ಮಾಡುತ್ತಿದ್ದು, ಇವರಿಗೆ ಕೂಡಲೇ ನ್ಯಾಯ ಒದಗಿಸುವಂತೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಕೊರಗರು ಬುಡಕಟ್ಟು ಜನಾಂಗದವರಾಗಿದ್ದು, ಶಿಕ್ಷಣ, ಆರೋಗ್ಯ, ಉದ್ಯೋಗದಲ್ಲಿ ಪ್ರಾಶಸ್ತ್ಯವಿಲ್ಲದೆ ಸಮುದಾಯ ನಶಿಸಿ ಹೋಗುವ ಭೀತಿಯಲ್ಲಿದೆ. ಕಷ್ಟಪಟ್ಟು ಶಿಕ್ಷಣ ಪಡೆದಿದ್ದರೂ ಉದ್ಯೋಗವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರಕಾರ ೨೦೨೪-೨೫ ಬಜೆಟ್‌ನಲ್ಲಿ ಬುಡಕಟ್ಟು ಸಮುದಾಯದ ಅರ್ಹ ವಿದ್ಯಾವಂತ ಯುವಕ, ಯುವತಿಯರಿಗೆ ನೇರ ನೇಮಕಾತಿ ನೀಡಿ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿದ್ದು, ಇಲ್ಲಿಯವರೆಗೆ ಭರವಸೆ ಈಡೇರಿಲ್ಲ. ಅವರನ್ನು ಆರೋಗ್ಯ, ಶಿಕ್ಷಣ, ಅರಣ್ಯ, ಪಂಚಾಯತ್ ರಾಜ್ ಯಂತಹ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಅವಕಾಶ ಕಲ್ಪಿಸಬೇಕು.
ಉಡುಪಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಿಲ್ಲಾಧಿಕಾರಿಗಳ ಮೂಲಕ ಧರಣಿ ನಿರತ ಕೊರಗರನ್ನು ಭೇಟಿ ಮಾಡಿ ತಮ್ಮ ಸಮಕ್ಷಮ ಸಭೆಯೊಂದನ್ನು ಏರ್ಪಡಿಸಿ, ನಿಜಕ್ಕೂ ಬಡವರಾದ ಕೊರಗರಿಗೆ ನ್ಯಾಯ ನೀಡಬೇಕೆಂದು ಸಂಸದರು ಮುಖ್ಯಮಂತ್ರಿಗಳಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.