ಬಳ್ಳಾರಿ: ನಗರದ ಆರಾಧ್ಯ ದೈವ ಕೋಟೆ ಮಲ್ಲೇಶ್ವರಸ್ವಾಮಿಯ ಮಹಾರಥೋತ್ಸವ ಬುಧವಾರ ಸಂಜೆ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ಎದುರು ಬಸವಣ್ಣನಿಗೆ ಪೂಜೆ ಸಲ್ಲಿಸಿದ ಬಳಿಕ ಮತ್ತೆ ರಥೋತ್ಸವ ತಿರುಗಿ ತೇರುಬೀದಿಯ ಮಾರ್ಗದಲ್ಲಿ ಬಂದು ನಿರ್ದಿಷ್ಟ ಸ್ಥಳದಲ್ಲಿ ನಿಂತಿತು. ರಥೋತ್ಸವ ಅಂಗವಾಗಿ ಬುಧವಾರ ಬೆಳಗಿನಜಾವ 4 ಗಂಟೆಗೆ ನಗರದ ತೇರುಬೀದಿ ಪ್ರದೇಶದಲ್ಲಿನ ರಥಕ್ಕೆ ಪೂಜೆ ಸಲ್ಲಿಸಿ, ಬ್ರಹ್ಮರಥೋತ್ಸವ (ಮಡಿತೇರು) ಎಳೆಯಲಾಯಿತು.
ಸಾವಿರಾರು ಭಕ್ತರು ಮಡಿತೇರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತಗೊಂಡರು. ಬೆಳಗಿನಜಾವದಿಂದಲೂ ಮಧ್ಯಾಹ್ನದವರೆಗೆ ತೇರುಬೀದಿಯಲ್ಲಿರುವ ಮಹಾರಥಕ್ಕೆ ಪೂಜೆ ಸಲ್ಲಿಸಿ, ಹೂವು, ಹಣ್ಣು, ಕಾಯಿ, ಕರ್ಪುರ ಮಾಡಿಸುವ ದೃಶ್ಯಗಳು ಕಂಡು ಬಂದವು.ರಥೋತ್ಸವ ಹಿನ್ನೆಲೆಯಲ್ಲಿ ಕೋಟೆ ಮಲ್ಲೇಶ್ವರಸ್ವಾಮಿಗೆ ಪಂಚಾಭಿಷೇಕ, ರುದ್ರಾಭಿಷೇಕ ಹಾಗೂ ವಿವಿಧ ಪೂಜಾ ವಿಧಿ ವಿಧಾನಗಳು ಜರುಗಿದವು. ಮಲ್ಲೇಶ್ವರಸ್ವಾಮಿ ಮೂರ್ತಿಯನ್ನು ವಿವಿಧ ಪುಷ್ಪಗಳು ಹಾಗೂ ಚಿನ್ನದ ಆಭರಣಗಳಿಂದ ಅಲಂಕೃತಗೊಳಿಸಲಾಗಿತ್ತು.
ನಗರ ಶಾಸಕ ನಾರಾ ಭರತ್ ರೆಡ್ಡಿ, ಮೇಯರ್ ಮುಲ್ಲಂಗಿ ನಂದೀಶ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಪಾಲಿಕೆ ಸದಸ್ಯರು ಹಾಗೂ ನಗರದ ಗಣ್ಯರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ವಿಶೇಷವೆಂದರೆ ಕೋಟೆ ಮಲ್ಲೇಶ್ವರಸ್ವಾಮಿ ದೇವಸ್ಥಾನವು ಕೋಟೆ ಪ್ರದೇಶದಲ್ಲಿದ್ದು, ರಥೋತ್ಸವವು ಬ್ರಾಹ್ಮಣಬೀದಿಯ ಬಳಿಯ ತೇರುಬೀದಿಯಲ್ಲಿ ಜರುಗುತ್ತದೆ. ಒಂದು ವಾರಗಳ ಕಾಲ ಕೋಟೆಯಲ್ಲಿರುವ ದೇವಸ್ಥಾನ ಬಳಿ ಜಾತ್ರೆ ಇರಲಿದೆ. ಕನಕ ದುರ್ಗಮ್ಮ ಬಳ್ಳಾರಿಯ ಅಧಿದೇವತೆಯಾದರೆ, ಕೋಟೆ ಮಲ್ಲೇಶ್ವರಸ್ವಾಮಿ ಬಳ್ಳಾರಿಯ ಆರಾಧ್ಯದೈವವಾಗಿದ್ದಾರೆ.