ಈಶ್ವರ ಶೆಟ್ಟರ ಕನ್ನಡಪ್ರಭ ವಾರ್ತೆ ಬಾಗಲಕೋಟೆಡಿ.ಕೆ.ಶಿವಕುಮಾರ ಅವರ ನೇತೃತ್ವದ ಹೊಸ ಸರ್ಕಾರದಲ್ಲಿ ಮೊದಲ ಹಂತದ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಇಲ್ಲದೆ ಇರುವ ಬಾಗಲಕೋಟೆ ಜಿಲ್ಲೆಗೆ ಬರುವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ಒಲಿಯಬಹುದು ಎಂಬ ನಿರೀಕ್ಷೆ ಇದೆಯಾದರೂ ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳ ಜೊತೆಗೆ ಬದಲಾದ ರಾಜ್ಯ ನಾಯಕತ್ವ ಎಷ್ಟರ ಮಟ್ಟಿಗೆ ಜಿಲ್ಲೆಯ ಶಾಸಕರಿಗೆ ಆದ್ಯತೆ ನೀಡಲಿದೆ ಎಂಬ ಸಹಜ ಕುತೂಹಲ ಆರಂಭಗೊಂಡಿದೆ.
ಈಶ್ವರ ಶೆಟ್ಟರ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಡಿ.ಕೆ.ಶಿವಕುಮಾರ ಅವರ ನೇತೃತ್ವದ ಹೊಸ ಸರ್ಕಾರದಲ್ಲಿ ಮೊದಲ ಹಂತದ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಇಲ್ಲದೆ ಇರುವ ಬಾಗಲಕೋಟೆ ಜಿಲ್ಲೆಗೆ ಬರುವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ಒಲಿಯಬಹುದು ಎಂಬ ನಿರೀಕ್ಷೆ ಇದೆಯಾದರೂ ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳ ಜೊತೆಗೆ ಬದಲಾದ ರಾಜ್ಯ ನಾಯಕತ್ವ ಎಷ್ಟರ ಮಟ್ಟಿಗೆ ಜಿಲ್ಲೆಯ ಶಾಸಕರಿಗೆ ಆದ್ಯತೆ ನೀಡಲಿದೆ ಎಂಬ ಸಹಜ ಕುತೂಹಲ ಆರಂಭಗೊಂಡಿದೆ.
ಯಾವುದೆ ಸರ್ಕಾರ ರಾಜ್ಯದಲ್ಲಿ ಬಂದರು ಸಹ ಬಾಗಲಕೋಟೆ ಜಿಲ್ಲೆ ರಾಜ್ಯರಾಜಕಾರಣದ ಶಕ್ತಿ ಕೇಂದ್ರದಂತೆ ಅಧಿಕಾರಯುತ ರಾಜಕಾರಣದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗೆ ಈ ಬಾರಿ ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರದಲ್ಲಿ ಮೊದಲ ಹಂತದಲ್ಲಿ ಅವಕಾಶ ಸಿಗದಿರಲು ಹಲವು ಕಾರಣಗಳು ಕಾಣುತ್ತಿವೆ. ಆದರೂ ಸಹ ಪ್ರಬಲ ಆಕಾಂಕ್ಷಿಗಳ ಭಾವನೆಗಳಿಗೆ ಪಕ್ಷದ ಹೈಕಮಾಂಡ್ ನಿರೀಕ್ಷಿತ ಬೆಂಬಲ ನೀಡಿಲ್ಲ ಎಂಬುದು ಸಹ ಸ್ಪಷ್ಟವಾಗಿದೆ.
ಸಿದ್ದು ಬೆಂಬಲಿಗರೆ ಹೆಚ್ಚು:
ಬಾಗಲಕೋಟೆ ಜಿಲ್ಲೆಯ 7 ವಿಧಾನಸಭಾ ಸ್ಥಾನಗಳಲ್ಲಿ 5 ಸ್ಥಾನ ಪಡೆದಿರುವ ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರು ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಲಿಗರೆ ಅಂದರೆ ತಪ್ಪಾಗಲಾರದು. ಜಿಲ್ಲೆಯಲ್ಲಿನ ಬಲವಾದ ಅಹಿಂದ ಬಲ, ಶಾಸಕರುಗಳ ಕ್ಷೇತ್ರದಲ್ಲಿನ ನಿರ್ಣಾಯಕ ಮತಗಳ ಅವಲಂಬನೆ, ಸಿದ್ದರಾಮಯ್ಯ ಅವರ ಗಟ್ಟಿನಾಯಕತ್ವವನ್ನು ಬೆಂಬಲಿಸುವ ಮತದಾರ ಪ್ರಭುಗಳ ನಿರ್ಣಯವೂ ನಮ್ಮ ಶಾಸಕರು ಸಿದ್ದರಾಮಯ್ಯ ಅವರನ್ನು ನಾಯಕ ಎಂದು ಒಪ್ಪಿಕೊಂಡಿದ್ದರಿಂದ ರಾಜ್ಯರಾಜಕಾರಣದಲ್ಲಿ ಜಿಲ್ಲೆಯ ರಾಜಕೀಯ ನಿರ್ಣಯಗಳಿಗೆ ಇದುವರೆಗೆ ಸಿದ್ದರಾಮಯ್ಯ ಅವರ ತೀರ್ಮಾನವೆ ಅಂತಿಮವಾಗುತ್ತಿತ್ತು. ಆದರೆ, ಬದಲಾದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಬರುವ ದಿನಗಳಲ್ಲಿ ನಮ್ಮ ಜಿಲ್ಲೆಯ ರಾಜಕಾರಣ ಯಾವ ತಿರುವನ್ನು ಪಡೆಯುತ್ತದೆ ಎಂಬುದು ಸಹ ಪ್ರಾಮುಖ್ಯತೆ ಪಡೆಯುತ್ತದೆ.
ಮುಂದೆ ಯಾರಿಗೆ ಒಲಿಯಬಹುದು ಸಚಿವ ಸ್ಥಾನ?:
ಬಾಗಲಕೋಟೆ ಜಿಲ್ಲೆಯಲ್ಲಿ ಜಾತಿ ಹಾಗೂ ಹಿರಿತನದ ಪ್ರಶ್ನೆ ಬಂದಾಗ ಯಾವುದೆ ಪಕ್ಷವಿದ್ದರು ಸಹ ಮುಧೋಳ ಮೀಸಲು ಕ್ಷೇತ್ರದ ಪ್ರತಿನಿಧಿಗಳಿಗೆ ಸಚಿವ ಸ್ಥಾನ ನಿಶ್ಚಿತ ಎಂಬ ಭಾವನೆ 1999 ರ ಈಚೆಗೆ ಅನಿವಾರ್ಯವಾಗಿದೆ. ಮೂರು ಬಾರಿ ಶಾಸಕರಾಗಿ ಒಂದು ಬಾರಿ ಪರಿಷತ್ ಸದಸ್ಯರಾಗಿ ಸದ್ಯ ಸಿದ್ಧರಾಮಯ್ಯ ಸರ್ಕಾರದಲ್ಲಿ ಮೂರು ವರ್ಷಗಳ ಕಾಲ ಸಚಿವ ಸ್ಥಾನ ಅನುಭವಿಸಿದ ಶಾಸಕ ಆರ್.ಬಿ.ತಿಮ್ಮಾಪೂರ 1999ರಲ್ಲಿ. 2017ರಲ್ಲಿ, 2019ರಲ್ಲಿ, 2023ರಿಂದ ಈವರೆಗೆ 4 ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಪ್ರತಿನಿಧಿಸುವ ಕ್ಷೇತ್ರ ಮೀಸಲು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಮಾದಿಗ ಸಮುದಾಯದ ಶಾಸಕರು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲದೆ ಇರುವುದು ಸಹ ವರವಾಗಿ ಪರಿಣಮಿಸಿದೆ. ಹೀಗಾಗಿ ಬರುವ ಸಂಪುಟ ವಿಸ್ತರಣೆಯಲ್ಲಿ ಮತ್ತೆ ಪ್ರಾದೇಶಿಕ ಸಮತೋಲನ ಅವರ ಕೈಹಿಡಿಯಬಹುದು ಎಂಬ ಮಾತಿದೆ.
ಉಳಿದಂತೆ ಹಿರಿಯರಾದ ಬೀಳಗಿ ಕ್ಷೇತ್ರದ ಶಾಸಕರಾಗಿರುವ ಜೆ.ಟಿ.ಪಾಟೀಲ ಸಹ 1994 ರಿಂದ ನಾಲ್ಕು ಬಾರಿ ಶಾಸಕರಾಗಿ ಪ್ರಸ್ತುತ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಸ್ತುಬದ್ಧ ಜೀವನ, ಕ್ಷೇತ್ರದ ಅಭಿವೃದ್ಧಿಗೆ ಅವರಿಗಿರುವ ಕಳಕಳಿ ಪರಿಗಣಿಸಿದರೆ ಸಚಿವ ಸ್ಥಾನ ನೀಡುವುದು ಕಷ್ಟವಲ್ಲ ಆದರೆ ಜಾತಿ ಸಮೀಕರಣದಲ್ಲಿ ಅವರಿಗೆ ಇರುವ ಅವಕಾಶಗಳನ್ನು ಕಾಲವೆ ನಿರ್ಣಯಿಸಬೇಕು.
ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಕುಟುಂಬ ಕಳೆದ ನಾಲ್ಕು ದಶಕಗಳಿಂದಲೂ ಕಾಂಗ್ರೆಸ್ಸಿನ ಭಾಗವಾಗಿದೆ. ತಂದೆ ಎಸ್.ಆರ್.ಕಾಶಪ್ಪನವರ ಮೂರು ಬಾರಿ ಶಾಸಕರಾಗಿ ಅಲ್ಪ ಅವಧಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅವರ ಅಕಾಲಿಕ ಮರಣದ ನಂತರ ಅವರ ಮಡದಿ ಗೌರಮ್ಮ ಕಾಶಪ್ಪನವರ, ನಂತರದ ದಿನಗಳಲ್ಲಿ ವಿಜಯಾನಂದ ಕಾಶಪ್ಪನವರ ಎರಡನೆ ಅವಧಿಗೆ ಶಾಸಕರಾಗಿದ್ದಾರೆ. ಲಿಂಗಾಯತ ಸಮುದಾಯದ ಪಂಚಮಸಾಲಿ ವರ್ಗಕ್ಕೆ ಸೇರಿರುವ ಇವರನ್ನು ಸಚಿವರನ್ನಾಗಿ ಮಾಡಬೇಕೆಂಬ ಕೂಗು ಪ್ರಬಲವಾಗಿದೆ.
ಒಟ್ಟಾರೆ ಬಾಗಲಕೋಟೆ ಜಿಲ್ಲೆಯ ಪ್ರಾತಿನಿಧ್ಯಕ್ಕಾಗಿ ನಡೆದಿರುವ ಶಾಸಕರು ಪೈಪೋಟಿಯನ್ನು ಪಕ್ಷ ಹಾಗೂ ಹೊಸ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಹೇಗೆ ಪರಿಗಣಿಸುತ್ತಾರೆ ಎಂಬುದು ಸಹ ಸದ್ಯದ ಪ್ರಶ್ನೆಯಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.