ಅಕ್ಷಯ ಬುಟ್ಟಿಗೆ ಅಕ್ಷರ ದಾಸೋಹ, ಆರತಿ ಸ್ವಾಗತ

KannadaprabhaNewsNetwork |  
Published : Jun 04, 2026, 02:45 AM IST
ಅಕ್ಷಯ ಬುಟ್ಟಿಗೆ ಅಕ್ಷರದಾಸೋಹ, ಪುಟಾಣಿಗಳಿಗೆ ಆರತಿ ಸ್ವಾಗತ: ಮಜಿ ವೀರಕಂಭ ಶಾಲಾ ಪ್ರಾರಂಭೋತ್ಸವ ವಿಶೇಷತೆ | Kannada Prabha

ಸಾರಾಂಶ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ವಿಶಿಷ್ಟ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯಿತು.

ಬಂಟ್ವಾಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ವಿಶಿಷ್ಟ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯಿತು. ವಿಶೇಷವಾಗಿ ‘ಅಕ್ಷಯ ಬುಟ್ಟಿ’ಯಲ್ಲಿ ಅಕ್ಷರ ದಾಸೋಹ ಸಾಮಗ್ರಿಗಳ ಸಂಗ್ರಹ ಹಾಗೂ ಮಕ್ಕಳಿಗೆ ಆರತಿ ಬೆಳಗಿ ಸ್ವಾಗತಿಸಿದ ಸಂಪ್ರದಾಯಬದ್ಧ ಕಾರ್ಯಕ್ರಮ ಎಲ್ಲರ ಮನ ಗೆದ್ದಿತು.

ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಎಲ್ಲ ಮಕ್ಕಳನ್ನು ಮೆರವಣಿಗೆ ಮೂಲಕ ಶಾಲೆಗೆ ಕರೆತಂದು, ಹೂವು ಸಿಂಪಡಿಸಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಬಳಿಕ ಹೊಸದಾಗಿ ದಾಖಲಾತಿ ಪಡೆದ ಮಕ್ಕಳಿಗೆ ಹಾಗೂ ಇತರ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಹೂ ಸಮರ್ಪಿಸಿ, ಪನ್ನೀರು ಸಿಂಪಡಿಸುವ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಶಾಲೆಯ ಮೊದಲ ದಿನವೇ ಮನೆತನದ ವಾತಾವರಣ ನಿರ್ಮಾಣಗೊಂಡು ಮಕ್ಕಳಲ್ಲಿ ಸಂತಸ ಮೂಡಿಸಿತು.

ಈ ಸಂದರ್ಭ ಶಾಲೆಯಲ್ಲಿ ಸಿದ್ಧಪಡಿಸಿದ್ದ “ಅಕ್ಷಯ ಬುಟ್ಟಿ” ವಿಶೇಷ ಆಕರ್ಷಣೆಯಾಗಿತ್ತು. ಅಕ್ಷಯ ಬುಟ್ಟಿಗೆ ಆರತಿ ಬೆಳಗಿದ ಗಣ್ಯರು, ಪೋಷಕರು ಹಾಗೂ ಶಾಲಾಭಿಮಾನಿಗಳು ತಾವು ತಂದ ವಿವಿಧ ಅಕ್ಷರ ದಾಸೋಹ ಸಾಮಗ್ರಿಗಳನ್ನು ಬುಟ್ಟಿಯಲ್ಲಿ ಹಾಕುವ ಮೂಲಕ ಶಿಕ್ಷಣ ಸೇವೆಗೆ ಕೈಜೋಡಿಸಿದರು. ಅಗತ್ಯವಿರುವ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಆರಂಭಿಸಲಾದ ಈ ಅಕ್ಷರ ದಾಸೋಹ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೀರಕಂಭ ಗ್ರಾಪಂ ಆಡಳಿತಾಧಿಕಾರಿ ದಿನೇಶ್, ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣದೊಂದಿಗೆ ಮೌಲ್ಯ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಜೀವನ ಕೌಶಲ್ಯಗಳಿಗೂ ಹೆಚ್ಚಿನ ಆದ್ಯತೆ ನೀಡುತ್ತಿವೆ ಎಂದು ಹೇಳಿದರು.

ವೇದಿಕೆಯಲ್ಲಿ ರೋಟರಿ ಕ್ಲಬ್ ಬಿಸಿ ರೋಡ್ ಸಿಟಿಯ ವಲಯ ಸೇನಾನಿ ಗಣೇಶ್ ಶೆಟ್ಟಿ, ಜೆಸಿಐ ಬಿಸಿರೋಡ್ ಅಧ್ಯಕ್ಷ ಕಿಶೋರ್ ಆಚಾರ್ಯ, ವೀರಕಂಭ ಗ್ರಾಪಂ ನಿಕಟಪೂರ್ವ ಉಪಾಧ್ಯಕ್ಷ ಜನಾರ್ದನ ಪೂಜಾರಿ, ಹಿರಿಯ ವಿದ್ಯಾರ್ಥಿ ಹಾಗೂ ಪ್ರಗತಿಪರ ಕೃಷಿಕ ಜಯಪ್ರಕಾಶ್ ತೆಕ್ಕಿಪಾಪು, ಶಾಲೆಗೆ ಉಚಿತವಾಗಿ ತರಕಾರಿ ಪೂರೈಸುತ್ತಿರುವ ಚಂದ್ರಿಕಾ ವೆಜಿಟೇಬಲ್ಸ್ ಮೆಲ್ಕಾರ್‌ನ ಮಾಲಕ ಮಹಮದ್ ಶರೀಫ್, ಯುವ ವಾಹಿನಿ ಮಾಣಿ ಘಟಕದ ಅಧ್ಯಕ್ಷ ಹಾಗೂ ಶ್ರೀ ಸಾಯಿ ಇಂಜಿನಿಯರಿಂಗ್ ವರ್ಕ್ಸ್‌ನ ಮಾಲೀಕ ಗಣೇಶ್ ಹಾಗೂ ಎಸ್ ಡಿಎಂಸಿ ಅಧ್ಯಕ್ಷ ಕೊರಕೊಪ್ಪ ನಾಯ್ಕ ಉಪಸ್ಥಿತರಿದ್ದರು.

ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮಕ್ಕಳ ಪೋಷಕರು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು. ಶಾಲೆಯನ್ನು ತಳಿರು ತೋರಣ ಹಾಗೂ ಬೆಲೂನುಗಳಿಂದ ಅಲಂಕರಿಸಲಾಗಿತ್ತು.

ಶಾಲಾ ಮಕ್ಕಳು ಪ್ರಾರ್ಥನೆ ನೆರವೇರಿಸಿದರು. ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮೆಂಡೋನ್ಸ ಸ್ವಾಗತಿಸಿದರು. ಶಿಕ್ಷಕ ತೌಸೀಫ್ ಅಹ್ಮದ್ ಶಾಲಾ ನೀತಿ-ನಿಯಮಗಳ ಕುರಿತು ಮಾಹಿತಿ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕ ಇಂದುಶೇಖರ್ ವಂದಿಸಿದರು. ಹಿರಿಯ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ. ನಿರೂಪಿಸಿದರು. ಶಾಲಾ ಶಿಕ್ಷಕಿಯರು ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲಂಪಿಯಡ್ ಪರೀಕ್ಷೆ ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್
ಜಿಲ್ಲಾ ವೀರಶೈವ ಜಂಗಮ ಅರ್ಚಕ, ಪುರೋಹಿತರ ಸಂಘದ ವಾರ್ಷಿಕ ಮಹಾಸಭೆ