ಕೋಟೆಕಲ್ಲ ಗ್ರಾಪಂ ಲೋಕಾರ್ಪಣೆಗೆ ಕೂಡಿ ಬಾರದ ಕಾಲ

KannadaprabhaNewsNetwork |  
Published : Sep 03, 2024, 01:38 AM IST
ಫೋಟೋ: 27ಜಿಎಲ್‌ಡಿ1-  ಉದ್ಘಾಟನೆಗೆ ಸಿದ್ಧಗೊಂಡ  ಕೋಟೆಕಲ್ ಗ್ರಾಪಂ ನೂತನ ಕಟ್ಟಡ | Kannada Prabha

ಸಾರಾಂಶ

ಸದ್ಯ ಇರುವ ಕಟ್ಟಡ ಒಂದಿಬ್ಬರೇ ಕುಳಿತುಕೊಂಡು ಕೆಲಸ ಮಾಡುವಷ್ಟು ಸ್ಥಳಾವಕಾಶವಿದ್ದರೂ ಸದಸ್ಯರ ಮಧ್ಯೆ ಹೊಂದಾಣಿಕೆ ಇಲ್ಲದ ಕಾರಣ ₹42 ಲಕ್ಷ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡರೂ ಕೋಟೆಕಲ್ಲ ಗ್ರಾಪಂ ನೂತನ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ದೊರೆತಿಲ್ಲ. ಇದರಿಂದ ಸಾರ್ವಜನಿಕರು ಗ್ರಾಪಂ ಒಳಗೆ ಕಾಲಿಡಲು ಆಗದೇ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಡಾ.ಸಿ.ಎಂ.ಜೋಶಿ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸದ್ಯ ಇರುವ ಕಟ್ಟಡ ಒಂದಿಬ್ಬರೇ ಕುಳಿತುಕೊಂಡು ಕೆಲಸ ಮಾಡುವಷ್ಟು ಸ್ಥಳಾವಕಾಶವಿದ್ದರೂ ಸದಸ್ಯರ ಮಧ್ಯೆ ಹೊಂದಾಣಿಕೆ ಇಲ್ಲದ ಕಾರಣ ₹42 ಲಕ್ಷ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡರೂ ಕೋಟೆಕಲ್ಲ ಗ್ರಾಪಂ ನೂತನ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ದೊರೆತಿಲ್ಲ. ಇದರಿಂದ ಸಾರ್ವಜನಿಕರು ಗ್ರಾಪಂ ಒಳಗೆ ಕಾಲಿಡಲು ಆಗದೇ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಹೌದು, ಲಕ್ಷಾಂತರ ರುಪಾಯಿ ಅನುದಾನ ಖರ್ಚು ಮಾಡಿ ಕಟ್ಟಿಸಿದ ಹೈಟೆಕ್ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದ್ದರೂ ಶಾಸಕರ ಸಹಮತಿ ಸಿಗದ ಹಿನ್ನೆಲೆಯಲ್ಲಿ ಲೋಕಾರ್ಪಣೆಗೊಳ್ಳದೇ ದಿನದಿಂದ ದಿನಕ್ಕೆ ಪಾಳು ಬೀಳುತ್ತಿದೆ.

ವರ್ಷಗಳಿಂದ ಸಭೆಯೇ ನಡೆದಿಲ್ಲ:

ಕೋಟೆಕಲ್ ಗ್ರಾಪಂಗೆ ಕೋಟೆಕಲ್, ತೋಗುಣಸಿ ಮತ್ತು ತೋಗುಣಸಿ ತಾಂಡಾ ಗ್ರಾಮಗಳು ವ್ಯಾಪ್ತಿಯಲ್ಲಿ ಬರುತ್ತವೆ. ಕೋಟೆಕಲ್ ಗ್ರಾಮದಿಂದ 8 ಜನ, ತೋಗುಣಸಿ ಗ್ರಾಮದಿಂದ 5 ಜನ ಮತ್ತು ತೋಗುಣಸಿ ತಾಂಡಾದಿಂದ ಒಬ್ಬರು. ಒಟ್ಟು 14 ಜನ ಸದಸ್ಯ ಬಲ ಹೊಂದಿರುವ ಕೋಟೆಕಲ್ ಗ್ರಾಪಂ ಸದಸ್ಯರಲ್ಲಿ ಒಗ್ಗಟ್ಟಿಲ್ಲದ ಕಾರಣ ಕಳೆದ ಸುಮಾರು ದಿನಗಳಿಂದ ಸಭೆಗಳೇ ನಡೆದಿಲ್ಲ.

ಚಿಕ್ಕ ಕೋಣೆಯಲ್ಲಿ ಗ್ರಾಪಂ:

ಹೊಸ ಕಟ್ಟಡ ಮುಗಿಯುವ ಹಂತದಲ್ಲಿದ್ದಾಗಲೇ ಹಳೆ ಪಂಚಾಯತಿ ಕಟ್ಟಡವನ್ನು ಗ್ರಂಥಾಲಯಕ್ಕೆ ಬಿಟ್ಟುಕೊಟ್ಟು ಚಿಕ್ಕದೊಂದು ಕೊಠಡಿಯಲ್ಲಿ ಪಿಡಿಒ ಮತ್ತು ಕಂಪ್ಯೂಟರ್ ಆಪ್‌ರೇಟರ್‌ ತಮ್ಮ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮಸ್ಥರು ಸಮಸ್ಯೆಯನ್ನು ಹೇಳಿಕೊಂಡು ಬಂದರೆ ಚಿಕ್ಕ ಕೊಠಡಿಯಲ್ಲಿ ನಿಲ್ಲಲೂ ಸ್ಥಳವಿಲ್ಲ. ಕುಳಿತುಕೊಳ್ಳಲು ನಾಲ್ಕಾರು ಕುರ್ಚಿಗಳ ಸ್ಥಳವಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿ ಇದ್ದರೂ ಚುನಾಯಿತ ಸದಸ್ಯರು ಮಾತ್ರ ಪಕ್ಕದ ಹೊಸ ಕಟ್ಟಡ ಉದ್ಘಾಟನೆ ಮಾಡಲು ಮುಂದೆ ಬರುತ್ತಿಲ್ಲ.

₹42 ಲಕ್ಷ ಕಟ್ಟಡ:

ಸದ್ಯದ ಒಂದು ಚಿಕ್ಕ ಕೋಣೆಯಲ್ಲಿ ಪಂಚಾಯತಿ ಕಾರ್ಯಾಲಯ ಇದೆ. ಹೊಸ ಕಟ್ಟಡ ಹೈಟೆಕ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ನರೇಗಾ ಅನುದಾನದಲ್ಲಿ ಕೆಳಗಿನ ಕಟ್ಟಡ ₹16 ಲಕ್ಷ, ಮೇಲಿನ ಕಟ್ಟಡಕ್ಕೆ ₹16 ಲಕ್ಷ, ವರ್ಗ 1 ರಲ್ಲಿ ₹10 ಲಕ್ಷ ಬಳಸಿ ಫರ್ನಿಚರ್ ಕಾಮಗಾರಿ ಮಾಡಲಾಗಿದೆ. ಅಂದರೆ ಒಟ್ಟು ₹42 ಲಕ್ಷ ಅನುದಾನದಲ್ಲಿ ಹೈಟೆಕ್ ಗ್ರಾಪಂ ಕಟ್ಟಡ ಪೂರ್ಣಗೊಂಡಿದೆ. ಆದರೂ ಚುನಾಯಿತ ಸದಸ್ಯರು ಹಾಗೂ ಪಿಡಿಒ ಉದ್ಘಾಟನೆಗೆ ದಿನ ನಿಗದಿ ಮಾಡಲಾಗುತ್ತಿಲ್ಲ. ಹೀಗೆ ಹೊಂದಾಣಿಕೆ ಕೊರತೆ, ತಿಕ್ಕಾಟದಿಂದ ನೂತನ ಕಟ್ಟಡ ಪಾಳು ಬಿದ್ದು ಹಾಳಾಗಬಾರದು ಎಂದು ಜನರ ಆಗ್ರಹವಾಗಿದೆ.

ನೂತನವಾಗಿ ನಿರ್ಮಾಣವಾದ ಗ್ರಾಪಂ ಕಟ್ಟಡದ ಉದ್ಘಾಟನೆಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿಯವರೇ ಮುತುವರ್ಜಿ ವಹಿಸಬೇಕು. ವ್ಯರ್ಥ ಕಾಲಹರಣ ಮಾಡದೇ ನೂತನ ಕಟ್ಟಡದಲ್ಲಿ ಗ್ರಾಪಂ ಕಚೇರಿ ಕೆಲಸಗಳು ಆರಂಭವಾಗಬೇಕು ಎಂದು ಗ್ರಾಮಸ್ಥರು ಶಾಸಕರನ್ನು ಆಗ್ರಹಿಸಿದ್ದಾರೆ.

----

ಕೋಟ್‌

ನೂತನ ಗ್ರಾಪಂ ಕಟ್ಟಡ ಬಹಳ ಸುಂದರವಾಗಿ ನಿರ್ಮಾಣವಾಗಿದೆ. ಎಲ್ಲ ಸದಸ್ಯರು ನೂತನ ಕಟ್ಟಡದ ಉದ್ಘಾಟನೆಗೆ ದಿನ ನಿಗದಿಪಡಿಸಬೇಕು. ಈಗ ಒಂದೇ ಚಿಕ್ಕ ಕೋಣೆಯಲ್ಲಿ ಕಚೇರಿ ಕೆಲಸಗಳಿಗೆ, ಸಾರ್ವಜನಿಕರ ಸಂಪರ್ಕಕ್ಕೆ ಅನಾನುಕೂಲವಾಗಿದೆ.

-ಆರತಿ ಕ್ಷತ್ರಿ, ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂ ಕೋಟೆಕಲ್.

----

ಹಳೆಯ ಕೋಣೆಯಲ್ಲಿ ಗ್ರಾಪಂ ಕಾರ್ಯ ಕಲಾಪಗಳು ನಡೆಯಲು ತೊಂದರೆಯಾಗಿದೆ. ಸದಸ್ಯರಲ್ಲಿಯ ಭಿನ್ನಾಭಿಪ್ರಾಯಗಳಿಂದ ಉದ್ಘಾಟನೆಗೆ ತಡವಾಗಿದೆ. ಮತ್ತೆ ಎಲ್ಲ ಸದಸ್ಯರ ಸಭೆ ಕರೆದು ಈ ತಿಂಗಳೊಳಗೆ ನೂತನ ಗ್ರಾಪಂ ಕಟ್ಟಡವನ್ನು ಉದ್ಘಾಟನೆ ಮಾಡುತ್ತೇವೆ.

-ಪಾರ್ವತಿ ಮೇಟಿ, ಅಧ್ಯಕ್ಷರು ಗ್ರಾಪಂ ಕೋಟೆಕಲ್.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ