ಕೋಟೆಕಾರು ಬ್ಯಾಂಕ್‌ ಲೂಟಿ: ಎರಡು ಕಾರುಗಳಲ್ಲಿ ಪರಾರಿಯಾದ ದರೋಡೆಕೋರರು

KannadaprabhaNewsNetwork |  
Published : Jan 19, 2025, 02:17 AM IST
ತಲಪಾಡಿ ಟೋಲ್‌ಗೇಟ್‌ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದರೋಡೆಕೋರರ ಕಾರು. | Kannada Prabha

ಸಾರಾಂಶ

ದರೋಡೆಕೋರರನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆಯಿಂದ ಐದು ತನಿಖಾ ತಂಡಗಳನ್ನು ರಚಿಸಲಾಗಿದೆ. ಮಂಗಳೂರು ದಕ್ಷಿಣ ಎಸಿಪಿ, ಸುರತ್ಕಲ್, ಕಾವೂರು, ಉಳ್ಳಾಲ ಮತ್ತು ಸಿಸಿಬಿ ಪೊಲೀಸ್ ತಂಡಗಳು ದರೋಡೆಕಾರರ ಹಿಂದೆ ಬಿದ್ದಿದೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ಕೆ.ಸಿ. ರೋಡ್ ಶಾಖೆ ದರೋಡೆ ಪ್ರಕರಣದ ಆರೋಪಿಗಳು ಎರಡು ತಂಡಗಳಾಗಿ ಒಂದು ಕಾರು ಕೇರಳ ಕಡೆಗೆ ಹಾಗೂ ಇನ್ನೊಂದು ಕಾರು ಮಂಗಳೂರು ಮಾರ್ಗವಾಗಿ ಬಿ.ಸಿ.ರೋಡ್ ತೆರಳಿರುವ ಶಂಕೆ ತನಿಖಾ ತಂಡಗಳಿಂದ ವ್ಯಕ್ತವಾಗಿದೆ.

ಸಿಸಿಟಿವಿಯಲ್ಲಿ ಬ್ಯಾಂಕ್ ಎದುರುಗಡೆ ಸಿಕ್ಕ ದೃಶ್ಯದಲ್ಲಿ ಐದು ಮಂದಿಯೂ ನಗದು-ಚಿನ್ನಾಭರಣ ಸಮೇತ ಕಾರಿನಲ್ಲಿ ಪರಾರಿಯಾಗುವುದು ಪತ್ತೆಯಾದರೆ, ತಲಪಾಡಿ ಟೋಲ್‌ನಲ್ಲಿ ಸಿಕ್ಕ ದೃಶ್ಯದಲ್ಲಿ ಕಾರಿನಲ್ಲಿ ಓರ್ವನೇ ಇರುವುದು ಕಂಡುಬಂದಿದೆ.ದರೋಡೆ ತಂಡದ ಕಾರಿನಿಂದ ಸುಂಕ ಪಡೆದಿರುವ ಟೋಲ್ ಸಿಬ್ಬಂದಿ ಪ್ರಕಾರ ಕಾರಿನಲ್ಲಿ ಓರ್ವ ಹಿಂದುಗಡೆ ಕುಳಿತಿದ್ದರೆ, ಇನ್ನೋರ್ವ ಚಲಾಯಿಸುತ್ತಿದ್ದಿರುವುದನ್ನು ಗಮನಿಸಿದ್ದಾರೆ. ಹಾಗಾಗಿ ಒಂದು ಕಾರು ತಲಪಾಡಿ ಮಾರ್ಗವಾಗಿ ಕೇರಳ ಹೊಸಂಗಡಿಯತ್ತ ತೆರಳಿ ಅಲ್ಲಿಂದ ಎಡಕ್ಕೆ ತಿರುಗಿರುವುದು ಪೊಲೀಸ್ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಎಡ ರಸ್ತೆಯಿಂದ ಸಾಗಿದಲ್ಲಿ ವಿಟ್ಲ ಮಾರ್ಗವಾಗಿ ಪುತ್ತೂರು, ಸುಳ್ಯ, ಮೈಸೂರು ಕಡೆಗೂ ತೆರಳಿರಬಹುದು. ಇಲ್ಲವೆಂದಲ್ಲಿ ಪೆರ್ಲ, ಬದಿಯಡ್ಕ ಮಾರ್ಗವಾಗಿ ಕೇರಳಕ್ಕೂ ತೆರಳಿರುವ ಸಾಧ್ಯವಿದೆ. ಇನ್ನೂ ನಾಲ್ವರು ಆರೋಪಿಗಳು ರಾ.ಹೆ. 66ರಲ್ಲಿ ಕೆ.ಸಿ.ರೋಡ್‌ನಿಂದ ತಲಪಾಡಿ ವರೆಗೆ ಸಿಸಿಟಿವಿ ಇಲ್ಲದ ಕಡೆ ಕಾರಿನಿಂದ ಬೇರೊಂದು ಕಾರಿಗೆ ಸ್ಥಳಾಂತರಗೊಂಡು ಚಿನ್ನದೊಂದಿಗೆ ಮಂಗಳೂರು ಮಾರ್ಗವಾಗಿ ಬಿ.ಸಿ. ರೋಡ್ ಮೂಲಕ ತೆರಳಿರುವ ಶಂಕೆಯೂ ಇದೆ.ವಿಟ್ಲ ನಕಲಿ ಇಡಿ ದಾಳಿಗೆ ಲಿಂಕ್‌?ವಿಟ್ಲದ ಬೋಳಂತೂರು ಬೀಡಿ ಕಂಪನಿ ಮಾಲೀಕನಿಗೆ ನಕಲಿ ‘ಇಡಿ’ ದಾಳಿ ನಡೆಸಿದ ತಂಡಕ್ಕೂ ಕೋಟೆಕಾರು ಬ್ಯಾಂಕ್ ದರೋಡೆ ಟೀಂಗೂ ಲಿಂಕ್ ಇದೆ ಅನ್ನುವ ಅನುಮಾನ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಎರಡೂ ಪ್ರಕರಣಗಳಲ್ಲಿ ಕೇರಳ ಗಡಿ ಭಾಗದ ಗ್ರಾಮಗಳನ್ನೇ ತಂಡ ಟಾರ್ಗೆಟ್ ನಡೆಸಿರುವುದು ಇಲ್ಲಿ ಕಂಡುಬಂದಿದೆ. ಜ.4ರಂದು ಬಂಟ್ವಾಳ ತಾಲೂಕಿನ ವಿಟ್ಲದ ಬೋಳಂತೂರು ಬಳಿಯ ಸಿಂಗಾರಿ ಬೀಡಿ ಮಾಲೀಕನ ಮನೆಗೆ ಇಡಿ ಹೆಸರಲ್ಲಿ ದಾಳಿ ನಡೆಸಿ ಕೋಟಿ ರು.ಗೂ ಅಧಿಕ ನಗದು ಲೂಟಿ ನಡೆಸಿತ್ತು. ಎರಡೂ ಪ್ರಕರಣದಲ್ಲಿ ಆರು ಜನರ ತಂಡವೇ ಇದ್ದು, ಅಲ್ಲಿಯೂ ಹಿಂದಿ, ಕನ್ನಡ ಭಾಷೆಯನ್ನು ಆಗಂತುಕರು ಮಾತನಾಡುತ್ತಿದ್ದರು. ಎರಡು ಪ್ರಕರಣಗಳಲ್ಲಿ ಸಾಮ್ಯತೆ ಕಂಡುಬಂದಿದೆ. ಬೋಳಂತೂರು ಮತ್ತು ಕೋಟೆಕಾರು ಬ್ಯಾಂಕ್ ಇರುವ ಕೆ.ಸಿ.ರೋಡ್ ಪ್ರದೇಶ ಕೇರಳ ಗಡಿ ಭಾಗದಲ್ಲಿದೆ. ಈ ಎರಡೂ ಪ್ರದೇಶಗಳಿಂದ 2-3 ಕಿ.ಮೀ. ಪ್ರಯಾಣಿಸಿದರೆ ಕೇರಳ ತಲುಪಬಹುದಾಗಿದೆ. ಬೀಡಿ ಮಾಲೀಕನ ಮೇಲೆ ನಕಲಿ ಇಡಿ ರೈಡ್‌ನ 15 ದಿನಗಳಲ್ಲೇ ಕೋಟೆಕಾರು ಬ್ಯಾಂಕ್ ದರೋಡೆಯಾಗಿದೆ. ಈವರೆಗೂ ನಕಲಿ ಇಡಿ ರೈಡ್ ತಂಡವನ್ನು ಪೊಲೀಸರು ಬಂಧಿಸಿಲ್ಲ. ದರೋಡೆಕೋರರು ಕೇರಳ ಕಡೆಗೆ ತಲೆಮರೆಸಿಕೊಳ್ಳುತ್ತಿರುವುದರಿಂದ ಪೊಲೀಸರ ತನಿಖೆಗೆ ಹಿನ್ನಡೆಯಾಗುತ್ತಿದೆ ಅನ್ನುವ ಅನುಮಾನವೂ ಇದೆ. ಕಳೆದ ವರ್ಷ ಕೇರಳ ಗಡಿ ಭಾಗದ ಅಡ್ಯನಡ್ಕ ಎಂಬಲ್ಲಿ ನಡೆದಿದ್ದ ಬ್ಯಾಂಕ್ ದರೋಡೆ, ಬಂಟ್ವಾಳ ತಾಲೂಕಿನ ಉಳಾಯಿಬೆಟ್ಟು ಎಂಬಲ್ಲಿಯೂ ಉದ್ಯಮಿ ಮನೆ ದರೋಡೆ ನಡೆಸಿದ ದರೋಡೆಕೋರರು, ಕೇರಳ ಕಡೆಗೆ ತಲೆಮರೆಸಿಕೊಂಡು ಕಣ್ಮರೆಯಾಗಿ ಈವರೆಗೆ ಸೆರೆಸಿಕ್ಕಿಲ್ಲ.* ಮಂಗಳೂರು ಭಾಗದಿಂದಲೇ ಬಂದಿದ್ದ ತಂಡಮಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ಶುಕ್ರವಾರ ಬೆಳಗ್ಗೆ 11.30ರ ಹೊತ್ತಿಗೆ ಕೃತ್ಯವೆಸಗಿರುವ ಕಾರು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೆದ್ದಾರಿ ಮೂಲಕವೇ ಸಂಚರಿಸಿ ಕೆ.ಸಿ.ರೋಡ್ ತಲುಪಿದ್ದ ಆಗಂತುಕರು, ಮುಸಲ್ಮಾನ ವ್ಯಾಪಾರಿಗಳು ಮಸೀದಿ ತೆರಳುವ ಹೊತ್ತು ಕಾದು ದಾಳಿ ನಡೆಸಿದ್ದಾರೆ.

* ಬ್ಯಾಂಕ್‌ಗೆ ಆಗಮಿಸಿದ ಗ್ರಾಹಕರು:ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟಿರುವ ಮಹಿಳೆಯರು ಹಾಗೂ ಗ್ರಾಹಕರು ಬೆಳಗ್ಗಿನ ಸಮಯದಲ್ಲಿ ಬ್ಯಾಂಕ್‌ ಹೊರಗಡೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಬ್ಯಾಂಕ್ ಎದುರಲ್ಲಿ ಕೆಲವು ಗ್ರಾಹಕರ ಮಧ್ಯೆ ಗಲಾಟೆಯೂ ನಡೆಯಿತು. ಕೆಲ ಗ್ರಾಹಕರ ಗುಂಪುಗಳ ಮಧ್ಯೆ ವಾಗ್ವಾದ ನಡೆದಿದ್ದು, ಪೊಲೀಸರು ಮಧ್ಯಪ್ರವೇಶ ಮಾಡಿದ್ದರು. ನಮ್ಮ ಚಿನ್ನ ನಮಗೆ ವಾಪಾಸ್‌ ಕೊಡಿ ಅಂತ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.ಮಕ್ಕಳನ್ನು ವಿದೇಶಕ್ಕೆ ಕಳುಹಿಸಲು, ಮನೆ ಖರೀದಿ ಹೀಗೆ ವಿವಿಧ ಕಾರಣಗಳಿಗಾಗಿ ಚಿನ್ನ ಅಡವಿಟ್ಟು ಹಣ ಪಡೆದಿದ್ದೇವೆ ಎಂದ ಗ್ರಾಹಕರು, ಕಳೆದ ಬಾರಿ ಇದೇ ಬ್ಯಾಂಕಿನಲ್ಲಿ ಚಿನ್ನ ಕಳೆದುಕೊಂಡಾಗ ಬ್ಯಾಂಕ್ ಪರಿಹಾರ ನೀಡಿಲ್ಲ. ಈ ಬಾರಿ ಅದೇ ರೀತಿ ಆಗಬಾರದು, ನಮ್ಮ ಚಿನ್ನ ಹಿಂದಿರುಗಿಸಿ ಕೊಡಿ. ಬ್ಯಾಂಕ್‌ನಲ್ಲಿ ಏಕೆ ಭದ್ರತೆ ಕೈಗೊಂಡಿಲ್ಲ ಎಂದು ಚಿನ್ನ ಕಳೆದುಕೊಂಡ ಗ್ರಾಹಕ ಮಹಿಳೆಯರು ಅಳಲು ವ್ಯಕ್ತಪಡಿಸಿದರು.* 10-12 ಕೋಟಿ ಚಿನ್ನ ದರೋಡೆಯಾಗಿರುವುದು ಸ್ಪಷ್ಟ: ಬ್ಯಾಂಕ್ ಅಧ್ಯಕ್ಷ

ಮಂಗಳೂರು ಪೊಲೀಸ್‌ ಕಮೀಷನರ್ 4 ಕೋಟಿಗಿಂತ ಹೆಚ್ಚು ಹೋಗಿರಬಹುದು ಅಂದಿದ್ದಾರೆ. ಆದರೆ ಈವರೆಗೆ ನಮ್ಮ ಪ್ರಕಾರ 10-12 ಕೋಟಿ ರು. ಮೌಲ್ಯದ ಚಿನ್ನ ದರೋಡೆಯಾಗಿದೆ. ಇದರಲ್ಲಿ ನಮಗೆ ಯಾವುದೇ ಗೊಂದಲ ಇಲ್ಲ. ಆದರೆ ನಿಖರವಾದ ಲೆಕ್ಕ ಮಹಜರು ಆದ ನಂತರ ಸಿಗಲಿದೆ. ಇದರಲ್ಲಿ ನಮ್ಮ ಯಾವುದೇ ಸಿಬ್ಬಂದಿ ಭಾಗಿಯಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ನಾವು ಗ್ರಾಹಕರ ಚಿನ್ನ ವಾಪಸ್ ಕೊಡುತ್ತೇವೆ.ಚಿನ್ನ ಅಡವಿಟ್ಟು ಅದರ ಶೇ.80 ಹಣ ಗ್ರಾಹಕರ ಬಳಿಯೇ ಇದೆ. ಇನ್ನು ಶೇ.20 ಅಂದರೆ ಎರಡು ಕೋಟಿಯಷ್ಟು ನಾವು ಅವರಿಗೆ ವಾಪಸ್ ಕೊಡಲು ಇರಬಹುದು ಎಂದು ಬ್ಯಾಂಕ್ ಆಡಳಿತ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನಕೋಟೆಕಾರುಗುತ್ತು ತಿಳಿಸಿದ್ದಾರೆ.

* ಹಿಂದಿನ ದರೋಡೆಕೋರರ ಮೇಲೆ ಅನುಮಾನ2017ರಲ್ಲಿ ದರೋಡೆ ನಡೆಸಿದ ತಂಡದ ಮೇಲೆ ಅನುಮಾನ ಇದೆ ಎಂದು ಬ್ಯಾಂಕ್‌ ಅಧ್ಯಕ್ಷ ಕೃಷ್ಣ ಶೆಟ್ಟಿ ಹೇಳಿದ್ದಾರೆ.

2017ರಲ್ಲಿ ಬ್ಯಾಂಕ್ ನಿರ್ದೇಶಕಿ ಒಬ್ಬರ ಪತಿ ದರೋಡೆ ಮಾಡಿದ್ದರು. ಆದರೆ ಅವರನ್ನು ಆಗಲೇ ಮಂಗಳೂರು ಪೊಲೀಸರು ಬಂಧಿಸಿದ್ದರು. ಸದ್ಯ ನಮಗೆ ಅವರ ಮೇಲೂ ಅನುಮಾನ ಇದೆ. ಈ ಬಗ್ಗೆ ನಾವು ಪೊಲೀಸರಿಗೆ ಸೂಕ್ತ ಮಾಹಿತಿ ನೀಡಿದ್ದೇವೆ. ಉಳ್ಳಾಲ ಇನ್‌ಸ್ಪೆಕ್ಟರ್‌, ಅವರನ್ನು ವಿಚಾರಣೆ ನಡೆಸುತ್ತೇವೆ ಅಂದಿದ್ದಾರೆ. ಅವರ ತನಿಖೆ ನಡೆಸಿದಲ್ಲಿ ವಿಚಾರ ಮತ್ತಷ್ಟು ಗೊತ್ತಾಗಬಹುದು. ಆದರೆ ಇದರಲ್ಲಿ ನಮ್ಮ ಈಗಿನ ಬ್ಯಾಂಕ್ ಆಡಳಿತ, ಸಿಬ್ಬಂದಿ ಕೈವಾಡ ಇಲ್ಲ. ಸಿಸಿ ಟಿವಿ ಕ್ಯಾಮರಾ ಕೆಟ್ಟು ಹೋಗಿರುವುದು ಕಾಕತಾಳೀಯ ಅಷ್ಟೇ. ಅದಕ್ಕೂ ಈ ದರೋಡೆಗೂ ಯಾವುದೇ ಸಂಬಂಧ ಇಲ್ಲ. ನಾವು ರಾತ್ರಿ ಹೊತ್ತು ಸೆಕ್ಯೂರಿಟಿ ಇಟ್ಟಿದ್ದೇವೆ, ಹಗಲು ಅಗತ್ಯ ಇಲ್ಲ ಅನಿಸಿತ್ತು ಎಂದು ಅಧ್ಯಕ್ಷರು ಕೃಷ್ಣ ಶೆಟ್ಟಿ ಅನುಮಾನಗಳಿಗೆ ಸ್ಪಷ್ಟನೆ ನೀಡಿದ್ದಾರೆ.

* ಸಿಬ್ಬಂದಿ ಮೊಬೈಲ್ ಪತ್ತೆದರೋಡೆಕೋರರು ಬ್ಯಾಂಕ್ ಸಿಬ್ಬಂದಿ ಕೈಯಲ್ಲಿದ್ದ ಮೊಬೈಲ್‌ಗಳನ್ನು ಪಡೆದು ಮೂರು ಮೊಬೈಲ್‌ಗಳನ್ನು ಬ್ಯಾಂಕ್ ಕೆಳಗಿನ ಮೆಟ್ಟಿಲುಗಳಲ್ಲಿ ಎಸೆದು ಪರಾರಿಯಾಗಿದ್ದರು. ಬ್ಯಾಂಕ್ ವ್ಯವಸ್ಥಾಪಕರ ಮೊಬೈಲನ್ನು ದರೋಡೆಕೋರರು ತಮ್ಮ ಬಳಿಯೇ ಇರಿಸಿಕೊಂಡಿದ್ದರು. ಆದರೆ ಆ ಮೊಬೈಲ್ ತಲಪಾಡಿ ಹೆದ್ದಾರಿ ಬದಿ ಪತ್ತೆಯಾಗಿದ್ದು, ಮೊಬೈಲ್‌ ಗಮನಿಸಿದ ವಾಹನ ಸವಾರ ಅದನ್ನು ಕದ್ರಿ ಪೊಲೀಸರಿಗೆ ಒಪ್ಪಿಸಿದ್ದಾನೆ.

* ತಮಿಳುನಾಡಿಗೆ ಪರಾರಿಯಾದರೇ?ಕೇರಳ ತಲುಪಿದ ದರೋಡೆಕೋರರು ಅಲ್ಲಿ ಅಜ್ಞಾತ ಸ್ಥಳದಿಂದ ಕಣ್ಮರೆಯಾಗಿರುವ ಅನುಮಾನವೂ ವ್ಯಕ್ತವಾಗಿದೆ.ಕೇರಳ ನದಿ ತೀರದಿಂದ ತಮಿಳುನಾಡಿನ ಕಡೆ ಬೋಟ್‌ನಲ್ಲಿ ಹೋಗಿರುವ ಶಂಕೆಯಿದೆ. ಕಾರನ್ನು ಅಡಗಿಸಿಟ್ಟಿರುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಕೇರಳದಲ್ಲಿ ಸುತ್ತಾಡಿದ ಪೊಲೀಸರು ಪ್ರಾಥಮಿಕ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಸತ್ಯಾಸತ್ಯತೆಗಳು ಇನ್ನು ತಿಳಿದುಬರಬೇಕಿದೆ.

* ತನಿಖೆ ಹಾದಿ ತಪ್ಪಿಸುವ ಪ್ಲ್ಯಾನ್ಒಂದು ಕಾರನ್ನು ರಾಷ್ಟ್ರೀಯ ಹೆದ್ದಾರಿ ಬಳಿ ನಿಲ್ಲಿಸಿ ಒಂದೇ ಕಾರಿನಲ್ಲಿ ಕೆ.ಸಿ.ರೋಡ್ ಗೆ ತೆರಳಿದ್ದ ತಂಡ, ಕೃತ್ಯ ಮುಗಿಸಿ ನಾಲ್ವರನ್ನು ತಲಪಾಡಿ ಬಳಿ ಪಾರ್ಕ್ ಮಾಡಿದ್ದ ಕಾರಿನ ಬಳಿ ಇಳಿಸಿರುವ ಶಂಕೆಯಿದೆ. ಬಳಿಕ ಚಿನ್ನದ ಮೂಟೆ ಹೊಂದಿದ್ದ ಗೋಣಿಗಳ ಸಹಿತ ಇಬ್ಬರು ತಲಪಾಡಿ ಟೋಲ್ ಮೂಲಕ ಕೇರಳಕ್ಕೆ ತೆರಳಿರುವ ಸಾಧ್ಯತೆಗಳಿದ್ದು, ಪೊಲೀಸರ ತನಿಖೆ ದಾರಿ ತಪ್ಪಿಸಲೆಂದೇ ಇಂತಹ ಚಿತ್ರಣ ಸೃಷ್ಟಿಸಿದ್ದಾರೆ ಎನ್ನಲಾಗಿದೆ.

* ಐದು ತನಿಖಾ ತಂಡಗಳಿಂದ ಕಾರ‍್ಯಾಚರಣೆ

ದರೋಡೆಕೋರರನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆಯಿಂದ ಐದು ತನಿಖಾ ತಂಡಗಳನ್ನು ರಚಿಸಲಾಗಿದೆ. ಮಂಗಳೂರು ದಕ್ಷಿಣ ಎಸಿಪಿ, ಸುರತ್ಕಲ್, ಕಾವೂರು, ಉಳ್ಳಾಲ ಮತ್ತು ಸಿಸಿಬಿ ಪೊಲೀಸ್ ತಂಡಗಳು ದರೋಡೆಕಾರರ ಹಿಂದೆ ಬಿದ್ದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ