ಕನ್ನಡಪ್ರಭ ವಾರ್ತೆ ಮೇಲುಕೋಟೆ
ಜ.14ರಂದು ಮುಕ್ತಾಯವಾಗಲಿರುವ ಕೊಠಾರೋತ್ಸವದಲ್ಲಿ 12ನೇ ಆಳ್ವಾರುಗಳಿಗೆ ಮಾಲೆಮರ್ಯಾಧೆ ಮಾಡಿ ಅರೆಯರ್ ಪಾಟ್ಟು, ಸಂಗೀತ ರಾಮಾಯಣ ನಂತರ ಮಂಗಳವಾದ್ಯದ ಪ್ರದಕ್ಷಿಣೆಯೊಂದಿಗೆ ಮಹೋತ್ಸವ ಪ್ರತಿದಿನದಂತೆ ನೆರವೇರಿತು.
4ನೇ ಉತ್ಸವದಂದು ವಿದ್ವಾನ್ ಆಯಿನರಸಿಂಹನ್ ತಮಿಳುನಾಡಿನಿಂದ ಗಿಳಿಮಾಲೆ ತರಿಸಿ ಚೆಲುವನಾರಾಯಣನಿಗೆ ಅರ್ಪಿಸಿದರೆ ನೇಮಿ ಸೇವೆಯಿರುವ ಪ್ರತಿಕೈಂಕರ್ಯಪರರು ವಿಭಿನ್ನವಾದ ಪುಷ್ಪಹಾರಗಳಿಂದ ಕೈಂಕರ್ಯ ನೆರವೇರಿಸಿದ್ದು ಭಕ್ತರನ್ನು ಪುಳಕಿತಗೊಳಿಸಿತು.ಕೊಠಾರೋತ್ಸವದ ಕೊನೆ ದಿನವಾದ ಜ.14ರಂದು ರಾತ್ರಿ ‘ನಮ್ಮಾಳ್ವಾರ್ ಪರಮಪದ’ ಉತ್ಸವ ಪರಿಚಾರಕರಾದ ಪಾರ್ಥಸಾರಥಿಯವ ಅನುವಂಶಿಕ ಸೇವೆಯಲ್ಲಿ ಶಾಸ್ರ್ತೋಕ್ತವಾಗಿ ನಡೆಯಲಿದೆ.
ರೈತಾಪಿ ವರ್ಗದ ಒಕ್ಕಲಿಗ ಜನಾಂಗದವರಾದ ನಮ್ಮಾಳ್ವಾರ್ ಹುಣಿಸೇಮರದ ಬಳಿಯಲ್ಲಿ ಜನ್ಮ ತಳೆದು ಬೆಳೆಯುವ ಮೂಲಕ ತಮಿಳಿನ ಅಪೂರ್ವವಾದ ನಾಲ್ಕುಸಾವಿರ ದಿವ್ಯಪ್ರಬಂಧಗಳನ್ನು ರಚಿಸಿ ಭಗವಂತನ ಪಾದಾರವಿಂದದಲ್ಲಿ ಲೀನರಾದ ಪ್ರತೀಕವಾಗಿ ನಡೆಯುವ ಪರಮಪದ ಉತ್ಸವ ದೇವಾಲಯದಲ್ಲಿ ವಿಶಿಷ್ಟವಾಗಿ ನೆರವೇರುತ್ತಾ ಬಂದಿದೆ.ಅಂದು ರಾತ್ರಿ ನಮ್ಮಾಳ್ವಾರ್ ದಿವ್ಯಮೂರ್ತಿಯನ್ನು ಚೆಲುವನಾರಾಯಣಸ್ವಾಮಿ ಪಾದಾರವಿಂದದಲ್ಲಿಟ್ಟು ತುಳಸಿಯಿಂದ ಸಂಪೂರ್ಣ ಮುಚ್ಚಿ ದಿವ್ಯಪ್ರಬಂಧಗಳಿಂದ ಆರಾಧಿಸಲಾಗುತ್ತದೆ.ಮಕರ ಸಂಕ್ರಾಂತಿ ವೈಭವ:
ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಉತ್ತರಾಯಣಪುಣ್ಯಕಾಲದ ಆರಂಭದ ದಿನದ ಹಬ್ಬವಾದ ಮಕರ ಸಂಕ್ರಾಂತಿ ಉತ್ಸವ ವೈಭವದಿಂದ ನೆರವೇರಲಿದೆ.ಯತಿರಾಜದಾಸರ್ ಗುರುಪೀಠದ ನೇಮಿಸೇವೆಯಾಗಿ ನಡೆಯುವ ಉತ್ಸವವನ್ನು ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ಸಹೋದರರು ಅನೂಚಾನ ಸಂಪ್ರದಾಯದಂತೆ ನೆರವೇರಿಸಲಿದ್ದಾರೆ.
ಸಂಕ್ರಾಂತಿಯಂದು ರಾಮಾನುಜಾಚಾರ್ಯರು ಶ್ರೀದೇವಿ-ಭೂದೇವಿ ಸಮೇತನಾದ ಚೆಲುವನಾರಾಯಣಸ್ವಾಮಿಗೆ ಬೆಳಗ್ಗೆ ಸಂಕ್ರಮಣದ ಅಭಿಷೇಕ ನೆರವೇರಲಿದೆ. ಸಂಜೆ ಯತಿರಾಜದಾಸರ್ ಗುರುಪೀಠದ ವಿಶೇಷ ಪುಷ್ಪ ಕೈಂಕರ್ಯ ಸೇವೆ ನಡೆದ ನಂತರ ರಾಜಬೀದಿಗಳ ಮಂಗಳವಾದ್ಯದೊಂದಿಗೆ ಉತ್ಸವ ನಡೆದು ವೇದಾಂತ ದೇಶಿಕರ ಸನ್ನಿಧಿಯಲ್ಲಿ ಜೋಯಿಸರಿಂದ ಸಂಕ್ರಾಂತಿ ವಾರ್ಷಿಕ ಫಲದ ಪಠಣ ನಡೆಯಲಿದೆ. ಮಹೋತ್ಸವದಲ್ಲಿ ಅತ್ಯಂತ ಮಹತ್ವದ ವಸಂತರಾಗ ಮೂಲಮೂರ್ತಿ ಚೆಲ್ವ ತಿರುನಾರಾಯಣಸ್ವಾಮಿಗೆ ನೆರವೇರಲಿದೆ.