ಕನ್ನಡಪ್ರಭ ವಾರ್ತೆ ನಾಪೋಕ್ಲು
ಪ್ರವಾಹದಿಂದಾಗಿ ರಸ್ತೆಯ ಒಂದು ಭಾಗದಲ್ಲಿ ಹೆಚ್ಚಿನ ಮಣ್ಣು ಕುಸಿತ ಉಂಟಾಗಿ ಅಪಾಯ ಮಟ್ಟಕ್ಕೆ ತಲುಪಿ ವಾಹನಗಳ ಸಂಚಾರಕ್ಕೆ ತೊಡಕು ಉಂಟಾಗಿದೆ. ಇದೇ ಸ್ಥಳದಲ್ಲಿ ಕೇಬಲ್ ಅಳವಡಿಸಲು ಚರಂಡಿ ಮಣ್ಣು ಕುಸಿದಿದ್ದು ಹೆಚ್ಚಿನ ಅನಾಹುತಕ್ಕೆ ಕಾರಣವಾಗಿದೆ.
ಗುರುವಾರ ಬೆಳಗ್ಗೆ ಇಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಆಗಿರುವುದು ಗಮನಿಸಿ ಸ್ಥಳೀಯರಾದ ರಫೀಕ್ ಕೆ. ಯು, ಅಬ್ದುಲ್ಲಾ ಪಿ.ಎಂ, ಮಹಮ್ಮದ್ ಕೆ.ಎ.ಮುನೀರ್ ಹಮೀದ್ ಬ್ಯಾರಿಕೇಡ್ ಹಾಗೂ ರಿಬ್ಬನ್ ಅಳವಡಿಸಿ ಮುಂಜಾಗ್ರತೆ ಕೈಗೊಂಡರು.ಪರಿಸ್ಥಿತಿ ಅರಿತು ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಾರ್ಮಿಕರನ್ನು ಬಳಸಿ ತಾತ್ಕಾಲಿಕವಾಗಿ ಮರಳಿನ ಚೀಲಗಳನ್ನು ಇಟ್ಟು ಹೆಚ್ಚಿನ ಅನಾಹುತ ಆಗದ ಹಾಗೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸಿದ್ದೇಗೌಡ ಮಾತನಾಡಿ, ಇಲ್ಲಿ ರಸ್ತೆ ಕುಸಿಯುವ ಹಂತದಲ್ಲಿದೆ. ಮುಂದೆ ರಸ್ತೆಯನ್ನು ಎತ್ತರಿಸಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ತಾತ್ಕಾಲಿಕವಾಗಿ ಮರಳಿನ ಚೀಲ ಇಟ್ಟು ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಲಾಗಿದೆ ಎಂದರು.ಲೋಕೋಪಯೋಗಿ ಇಲಾಖೆಯ ಎಡಬ್ಲ್ಯುಇ ಗಿರೀಶ್, ಎಇ ಸತೀಶ್, ಸಿಬ್ಬಂದಿ ಮಣಿ ಚಂಗಪ್ಪ ಇದ್ದರು. ಇಲ್ಲಿ ಬಿರುಸು ಕಡಿಮೆಯಾಗಿದ್ದು ಹಲವೆಡೆ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿವೆ.
ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆ ಎಂಬಲ್ಲಿ ಪ್ರವಾಹ ಇನ್ನು ತಗ್ಗಿಲ್ಲ. ಬಿರುಸಿನ ಮಳೆಯಿಂದಾಗಿಹಲವು ತೋಟಗಳಲ್ಲಿ ನೀರು ನಿಂತಿದ್ದು ಕೊಳೆರೋಗ ಕಾಣಿಸಿಕೊಂಡಿದೆ. ಹಲವೆಡೆ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಉದುರುತ್ತಿದೆ. ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು ಬೆಳೆಗಾರರು, ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ .