ಕನ್ನಡಪ್ರಭ ವಾರ್ತೆ ಮಂಗಳೂರು
ಕೊಟ್ಟಾರ ಚೌಕಿಯಲ್ಲಿ 2009ರಲ್ಲಿ ಸ್ವಚ್ಛ ಮಂಗಳೂರು ಅಭಿಯಾನದ ಸಮಾರೋಪದ ಅಂಗವಾಗಿ ಕೊಟ್ಟಾರ ಚೌಕಿ ಫ್ಲೈಓವರ್ ಕೆಳಭಾಗದ ಸಂಪೂರ್ಣ 30 ಸಾವಿರ ಚದರ ಅಡಿ ವಿಸ್ತೀರ್ಣದ ಜಾಗವನ್ನು ಅಭಿವೃದ್ಧಿಪಡಿಸಿ ಸುಂದರಿಕರಣಗೊಳಿಸಲಾಗಿತ್ತು. ಕಾಲಾನುಕ್ರಮದಲ್ಲಿ ಇಲ್ಲಿನ ಕಂಬಗಳಲ್ಲಿ ಬಿಡಿಸಲಾಗಿದ್ದ ವರ್ಣಚಿತ್ರದ ಬಣ್ಣಗಳು ಮಾಸಿಹೋಗಿವೆ. ಇದರ ನಿರ್ವಹಣೆಯ ಅವಶ್ಯಕತೆ ಮನಗಂಡ ರಾಮಕೃಷ್ಣ ಮಿಷನ್ ಸ್ವಯಂಸೇವಕರ ತಂಡವು ಈ ವರ್ಣಚಿತ್ರಗಳನ್ನು ಮರುಪೈಂಟಿಂಗ್ ಮಾಡುವ ಕಾರ್ಯವನ್ನು ಕೈಗೊಳ್ಳಲು ನಿರ್ಧರಿಸಿದೆ.
ಈ ಕಾರ್ಯಕ್ಕೆ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತಿಯಲ್ಲಿ ಎಂಆರ್‌ಪಿಎಲ್ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಎಚ್.ವಿ. ಪ್ರಸಾದ್ ಚಾಲನೆ ನೀಡಿದರು. ಮುಂದಿನ ಒಂದು ತಿಂಗಳಿನಲ್ಲಿ ಆದಿತತ್ವ ಆರ್ಟ್ಸ್‌ನ ವಿಕ್ರಂ ಶೆಟ್ಟಿ ಹಾಗೂ ತಂಡ ಮರುಪೈಂಟಿಂಗ್ ಕಾರ್ಯವನ್ನು ಪೂರ್ಣಗೊಳಿಸಲಿದೆ. ನಂತರ ನವೀಕೃತ ಪೈಂಟಿಗ್‌ಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.ಸ್ವಚ್ಛತಾ ಅಭಿಯಾನದಲ್ಲಿ ಜಿಪಂ ಮುಂಭಾಗದಲ್ಲಿ 2019ರಲ್ಲಿ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮವರ್ಷಾಚರಣೆ ಪ್ರಯುಕ್ತ ಲೋಕಾರ್ಪಣೆಗೊಂಡ ನಗರದ ಮೊತ್ತಮೊದಲ ಮಿಯಾವಕಿ ನಗರಾರಣ್ಯ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಮಿಯಾವಕಿ ಅರಣ್ಯದ ಮುಂಭಾಗದಲ್ಲಿದ್ದ ಎಲೆಗಳನ್ನು ನೈಸರ್ಗಿಕ ಗೊಬ್ಬರವನ್ನಾಗಿ ಮಾಡಲು ಸಂಗ್ರಹಿಸಲಾಯಿತು. ಪ್ಲಾಸ್ಟಿಕ್ ಇತ್ಯಾದಿ ಕಸಗಳನ್ನು ವಿಲೇವಾರಿ ಮಾಡಲಾಯಿತು. ತಾರಾನಾಥ ಆಳ್ವ, ಯೋಗೀಶ್ ಪ್ರಭು, ವಿಜೇಶ್ ದೇವಾಡಿಗ, ಸಚಿನ್ ಶೆಟ್ಟಿ ನಲ್ಲೂರು, ವಸಂತಿ ನಾಯಕ್, ಹಿಮ್ಮತ್ ಸಿಂಗ್, ನಿತೇಶ್ ಕಲ್ನಾಡ್, ಲೋಕೇಶ್ ಮುಂತಾದವರನ್ನೊಳಗೊಂಡ ತಂಡ ಈ ಕಾರ್ಯವನ್ನು ಕೈಗೊಂಡಿತು.
ಯೋಧರಾದ ಬೆಳ್ಳಾಲ ಗೋಪಿನಾಥ್ ರಾವ್, ಕಮಲಾಕ್ಷ ಪೈ ಮತ್ತು ರಂಜನ್ ಬೆಳ್ಳರ್ಪ್ಪಾಡಿ ಇದ್ದರು.