ಕೊಟ್ಟೂರು: ರಾಜ್ಯದ ಮೇಲುಸ್ತರದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕೊಟ್ಟೂರು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ವೈಭವದ ಬೆಳ್ಳಿ ರಥೋತ್ಸವ ಸೋಮವಾರ ಮಧ್ಯರಾತ್ರಿ ಮೈ ನಡುಗುವ ಚಳಿಯ ವಾತಾವರಣದಲ್ಲಿ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.
ಈ ಕೈಂಕರ್ಯದ ಮೂಲಕ ಕಾರ್ತೀಕ ಮಾಸವಿಡೀ ಕೊಟ್ಟೂರಿನಲ್ಲಿ ನಡೆದ ಶ್ರೀ ಸ್ವಾಮಿಯ ಉತ್ಸವಕ್ಕೆ ಅಂತಿಮ ತೆರೆಬಿತ್ತು. ಅಹೋರಾತ್ರಿ ನಡೆಯುವ ಏಕೈಕ ಬೆಳ್ಳಿ ರಥೋತ್ಸವ ಎಂಬ ಹೆಗ್ಗಳಿಕೆ ಹೊಂದಿರುವ ಅಪರೂಪದ ಶ್ರೀಸ್ವಾಮಿಯ ಬೆಳ್ಳಿ ರಥೋತ್ಸವವನ್ನು ವೀಕ್ಷಿಸಲು ನಾಡಿನೆಲ್ಲೆಡೆಯಿಂದ ಅಸಂಖ್ಯಾತ ಭಕ್ತರು ಜಮಾವಣೆಗೊಂಡಿದ್ದರು. ಶ್ರೀ ಸ್ವಾಮಿಯ ಕಾರ್ತೀಕ ಉತ್ಸವ ದೀಪಾವಳಿ ಪಾಡ್ಯದಿಂದ ಆರಂಭಗೊಂಡು ಪ್ರತಿ ಸೋಮವಾರ ಮತ್ತು ಗುರುವಾರ ರಾತ್ರಿ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯುತ್ತಿತ್ತು. ೧೩ ಪಲ್ಲಕ್ಕಿ ಉತ್ಸವಗಳು ನಡೆದು ೧೪ ಕೊನೆಯ ಉತ್ಸವವಾಗಿ ಬೆಳ್ಳಿ ರಥೋತ್ಸವ ಸೋಮವಾರ ರಾತ್ರಿ ನಡೆಯಿತು. ಈ ಉತ್ಸವದುದ್ದಕ್ಕೂ ಕೊಟ್ಟೂರೇಶ್ವರ ಸ್ವಾಮಿಯ ಮೂಲ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಲಾಗಿತ್ತು.ಸೋಮವಾರ ರಾತ್ರಿ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಗೆ ಪೂಜೆ ನೆರವೇರಿಸಿದ ಆನಂತರ ೧೧.೫೦ರ ವೇಳೆಗೆ ಸ್ವಾಮಿಯನ್ನು ಸಕಲ ಬಿರುದಾಳಿಗಳೊಂದಿಗೆ ಹಿರೇಮಠದಿಂದ ಹೊರಗೆ ತಂದ ಧರ್ಮಕರ್ತ ಎಂ.ಕೆ. ಶೇಖರಯ್ಯ ಮತ್ತು ಪೂಜಾ ಬಳಗದವರು ವಿವಿಧ ಹೂಗಳಿಂದ ಅಲಂಕೃತಗೊಂಡ ಬೆಳ್ಳಿ ರಥದಲ್ಲಿ ವಿರಾಜಮಾನಗೊಳಿಸಿದರು. ದೇವರು ರಥದಲ್ಲಿ ಆಸೀನರಾಗುತ್ತಿದ್ದಂತೆಯೇ ಬೆಳ್ಳಿ ರಥೋತ್ಸವಕ್ಕೆ ಶ್ರೀ ಸ್ವಾಮಿಯ ಕ್ರಿಯಾಮೂರ್ತಿ ಶಿವಪ್ರಕಾಶ ಕೊಟ್ಟೂರು ಚಾಲನೆ ನೀಡಿದರು. ಬೆಳ್ಳಿ ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ಅಪಾರವಾಗಿ ನೆರೆದಿದ್ದ ಭಕ್ತರು ಬಾಳೆಹಣ್ಣುಗಳನ್ನು ರಾಶಿಯೋಪಾದಿಯಲ್ಲಿ ರಥಕ್ಕೆ ತೂರಿ, ಶ್ರೀ ಸ್ವಾಮಿಯ ಜಯಘೋಷಗಳನ್ನು ಕೂಗಿ ಭಕ್ತಿ ಸಮರ್ಪಿಸಿದರು.
ಆಕರ್ಷಕ ಸಮಾಳದ ನಿನಾದ, ನಂದಿಕೋಲು ಕುಣಿತ, ಶಹನಾಯಿ ವಾದ್ಯದವರ ನಾದದೊಂದಿಗೆ ಗಂಭೀರ ನಡೆಯೊಂದಿಗೆ ಬೆಳ್ಳಿ ರಥೋತ್ಸವ ತೊಟ್ಟಿಲು ಮಠ, ಊರಮ್ಮನ ಬಯಲು ಮುಖಾಂತರ ಗಚ್ಚಿನ ಮಠಕ್ಕೆ ಮಧ್ಯರಾತ್ರಿ ೨.೩೦ರ ಸುಮಾರಿಗೆ ತಲುಪಿತು. ಅಲ್ಲಿ ಕೆಲಹೊತ್ತು ಸ್ವಾಮಿಯನ್ನು ಅಕ್ಬರ್ ಬಾದಶಹ ಶ್ರೀಸ್ವಾಮಿಗೆ ಕೊಡುಗೆಯಾಗಿ ನೀಡಿದ ಮಣಿಮಂಚದ ಮೇಲೆ ವಿರಾಜಮಾನಗೊಳಿಸಲಾಯಿತು. ಈ ಹಂತದಲ್ಲಿ ಕೆಲಭಕ್ತರು ಸ್ವಾಮಿಯ ಕುರಿತಾದ ಒಡಪುಗಳನ್ನು ಹೇಳಿದರು. ಅಲ್ಲಿಂದ ಮತ್ತೆ ವಾಪಾಸಾಗಿ ಬಂದ ರಥೋತ್ಸವ ಮಂಗಳವಾರ ಬೆಳಗಿನ ಜಾವ ೩.೩೦ರ ಸುಮಾರಿಗೆ ಮೂಲ ಹಿರೇಮಠಕ್ಕೆ ಬಂದು ತಲುಪಿತು. ಭಕ್ತರು ರಥ ಎಳೆಯಲು ತಾ ಮುಂದು, ನಾ ಮುಂದು ಎಂದು ಮುಗಿಬಿದ್ದರು. ಈ ಹಂತದಲ್ಲಿ ಡಿವೈಎಸ್‌ಪಿ ಮಲ್ಲೇಶ ಮಲ್ಲಾಪುರ, ಸರ್ಕಲ್ ಇನ್‌ಸ್ಪೆಕ್ಟರ್ ವೆಂಕಟಸ್ವಾಮಿ ಹಾಗೂ ಪೊಲೀಸ್ ಸಿಬ್ಬಂದಿ ಸುವ್ಯವಸ್ಥೆ ಕಲ್ಪಿಸಿದರು.ಮುಸ್ಲಿಮರು, ಜೈನ ಭಕ್ತರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹೊನಲು ತಂಡದಿಂದ ಸ್ವಚ್ಛತಾ ಕಾರ್ಯ: ಸ್ಥಳೀಯ ಹೊನಲು ತಂಡದ ಸದಸ್ಯರು ಸೋಮವಾರ ರಾತ್ರಿಯಿಡೀ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ಕಾರ್ತೀಕೋತ್ಸವದ ವೇಳೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.ಒಂದೆಡೆ ಭಕ್ತರು ಶ್ರೀ ಸ್ವಾಮಿಗೆ ಪೂಜೆ, ಹರಕೆ ಸಲ್ಲಿಸುತ್ತಿದ್ದರೆ, ಅವರು ಬಿಸಾಡಿದ ಎಣ್ಣೆ ಪ್ಯಾಕೆಟ್, ಕಸಗಳನ್ನು ಹೊನಲು ತಂಡದ ಸದಸ್ಯರು ತೆರವು ಮಾಡುತ್ತಲೇ ಇದ್ದರು.ದೇವಸ್ಥಾನದ ಪ್ರಾಂಗಣದಲ್ಲಿ ತ್ಯಾಜ್ಯ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುತ್ತಲೇ ಇತ್ತು. ಅವುಗಳನ್ನು ಗುಡಿಸಿ, ಡ್ರಮ್‌ಗಳಲ್ಲಿ ಶೇಖರಿಸಿ, ಆನಂತರ ವಾಹನಗಳ ಮೂಲಕ ಹೊರ ಪ್ರದೇಶಕ್ಕೆ ಕೊಂಡೊಯ್ದು ಸ್ವಚ್ಛಗೊಳಿಸಿದರು. ಹಸಿರು ಹೊನಲು ತಂಡದ ಅಧ್ಯಕ್ಷ ಗುರುರಾಜ್ , ನಾಗರಾಜ್ ಬಂಜಾರ, ಹಳೆ ಕೊಟ್ಟೂರು ಬಳಗ ಮತ್ತು ಶಿಕ್ಷಣ ಇಲಾಖೆಯ ಸಿಆರ್‌ಪಿ ಬಳಗದವರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಮತ್ತು ಪರಿಸರ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.