ಜಿ.ಸೋಮಶೇಖರ ಕೊಟ್ಟೂರು
ಕೊಟ್ಟೂರು ಪಟ್ಟಣ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿರುವಂತೆಯೇ ಹೆಸರಾಂತ ವ್ಯಾಪಾರಿ ಕೇಂದ್ರವಾಗಿ ಗುರ್ತಿಸಿಕೊಂಡಿದೆ.
ಈ ಕಾರಣಕ್ಕಾಗಿ ಅತೀ ವೇಗವಾಗಿ ಪಟ್ಟಣ ಬೆಳೆಯುತ್ತಿದ್ದು, ಇದಕ್ಕೆ ಅನುಗುಣವಾಗಿ ಪಟ್ಟಣದಲ್ಲಿರುವ ಬಸ್ ನಿಲ್ದಾಣ ಧ್ವಂಸಗೊಳಿಸಿ ಹೊಸ ನಿಲ್ದಾಣ ನಿರ್ಮಿಸುವ ಯೋಜನೆ ಮತ್ತು ಯೋಚನೆಯನ್ನು ಶಾಸಕ ಕೆ.ನೇಮಿರಾಜ ನಾಯ್ಕ ಮಾಡಿ ₹ 3.5 ಕೋಟಿ ಅನುದಾನ ಮಂಜೂರು ಮಾಡಿಸಿದ್ದರು.ಅನುದಾನ ಬರುತ್ತಿದ್ದಂತೆ ಉತ್ತೇಜನಗೊಂಡ ಬಳ್ಳಾರಿ ವಿಭಾಗೀಯ ಕಾರ್ಯಪಾಲಕ ಅಭಿಯಂತರರ ಕಚೇರಿ ಇದಕ್ಕೆ ಸಂಬಂಧಪಟ್ಟಂತೆ ಟೆಂಡರ್ ಪ್ರಕಟಣೆಯನ್ನು ಕಳೆದ ವರ್ಷ ಹೊರಡಿಸಿತ್ತು, ಯಾರು ಟೆಂಡರ್‌ಗೆ ಓಗೂಡದ ಕಾರಣ ಮರು ಟೆಂಡರ್‌ನ್ನು ಸಹ ಕರೆದಿತ್ತು. ಕೊನೆಯ ಟೆಂಡರ್‌ನಲ್ಲಿ ರಾಯಚೂರು ಮೂಲದ ಗುತ್ತಿಗೆದಾರರೊಬ್ಬ ಕೊಟ್ಟೂರು ಬಸ್ ನಿಲ್ದಾಣ ನಿರ್ಮಿಸುವ ಕಾಮಗಾರಿ ಪಡೆದು ಇನ್ನೇನು ಪ್ರಾರಂಭ ಮಾಡಬೇಕು ಎಂದು ಯೋಚನೆ ನಡೆಸಿರುವಾಗಲೇ ತಾಂತ್ರಿಕ ಕಾರಣದಿಂದ ಮತ್ತೆ ಟೆಂಡರ್ ರದ್ದುಗೊಳಿಸಿ ಪುನಃ ಇತ್ತೀಚಿಗಷ್ಟೆ ಟೆಂಡರ್ ಕರೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಲಾದರೂ ಬಳ್ಳಾರಿಯಲ್ಲಿನ ವಿಭಾಗೀಯ ತಾಂತ್ರಿಕ ವಿಭಾಗದವರು ಕೊಟ್ಟೂರಿನಲ್ಲಿ ಕೂಡಲೇ ಬಸ್‌ನಿಲ್ದಾಣ ಪ್ರಾರಂಭಿಸುವ ಕಾಮಗಾರಿ ಕೈಗೆತ್ತಿಕೊಳ್ಳುವುದಕ್ಕೆ ಅನುಮೋದನೆ ನೀಡದಿದ್ದರೆ ಬೀದಿಗಿಳಿದು ಈ ಬೇಡಿಕೆ ಈಡೇರಿಸುವಂತೆ ಬಹಿರಂಗ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಸ್ಥಳೀಯ ನಾಗರಿಕರು ಎಚ್ಚರಿಸಿದ್ದಾರೆ.
ಬಸ್ ನಿಲ್ದಾಣದ ಗೋಳು ಹೇಳತೀರದು, ಮಳೆ ಬಂದಾಗ ಇದು ಕೆರೆಯಾಗಿ ಮಾರ್ಪಡುತ್ತದೆ. ಏನೆಲ್ಲ ಸಮಸ್ಯೆ ಗಳಿದ್ದರೂ ಮುಂದಿನ ವರ್ಷ ಬಸ್ ನಿಲ್ದಾಣ ನಿರ್ಮಿಸುತ್ತೇವೆ ಎಂದು ಕಳೆದ ವರ್ಷ ಶಾಸಕರು ಮತ್ತು ಅಧಿಕಾರಿಗಳು ಹೇಳಿದ್ದರು. ಆದರೆ ಇದೀಗ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಕೊಟ್ಟೂರ ನಾಗರಿಕ ಜೆ.ಸಿ.ಚಂದ್ರಶೇಖರ್ ಎಂದರು.