ಕೊಯನಾಡು ಶಾಲಾ ಕಟ್ಟಡ ನಿರ್ಮಾಣಕ್ಕೆ ಕೂಡಲೇ ಚಾಲನೆ ನೀಡಿ: ಎ.ಎಸ್.ಪೊನ್ನಣ್ಣ

KannadaprabhaNewsNetwork | Published : May 18, 2025 1:12 AM
Follow Us

ಸಾರಾಂಶ

ಕೊಯನಾಡು ಬಳಿ ಈಗಾಗಲೇ ಶಾಲಾ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾಗಿರುವ ಜಾಗದಲ್ಲಿ ಭೂಮಿ ಪೂಜೆ ನೆರವೇರಿಸಲು ದಿನಾಂಕ ನಿಗದಿ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಾಸಕ ಎ.ಎಸ್‌. ಪೊನ್ನಣ್ಣ ನಿರ್ದೇಶನ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಕೊಯನಾಡು ಬಳಿ ಈಗಾಗಲೇ ಶಾಲಾ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾಗಿರುವ ಜಾಗದಲ್ಲಿ ಭೂಮಿಪೂಜೆ ನೆರವೇರಿಸಲು ದಿನಾಂಕ ನಿಗದಿ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ನಿರ್ದೇಶನ ನೀಡಿದ್ದಾರೆ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ವಿರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಮಾರ್ಚ್ ಅಂತ್ಯದ ವರೆಗಿನ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯ ಆರಂಭದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಶಾಸಕರು ಕೊಯನಾಡು ಬಳಿ ಬರೆಕುಸಿತದಿಂದ ಶಾಲಾ ಕಟ್ಟಡ ಹಾನಿಯಾಗಿತ್ತು. ಈ ಹಿನ್ನೆಲೆ ಸಂಪಾಜೆ ಶಾಲೆಗೆ ವಿದ್ಯಾರ್ಥಿಗಳು ಹೋಗುತ್ತಿದ್ದರು. ಆದ್ದರಿಂದ ಅಲ್ಲಿನ ಸ್ಥಳೀಯರು ಪಕ್ಕದಲ್ಲಿ ಶಾಲಾ ಕಟ್ಟಡ ನಿರ್ಮಿಸಲು ಅವಕಾಶ ಮಾಡಬೇಕು ಎಂದು ಮನವಿ ಮಾಡಿದ್ದರು. ಅದರಂತೆ ಜಾಗ ಗುರುತಿಸಲಾಗಿದ್ದು, ಕೂಡಲೇ ಶಾಲಾ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲು ಅಗತ್ಯ ಕ್ರಮವಹಿಸುವಂತೆ ಎ.ಎಸ್.ಪೊನ್ನಣ್ಣ ಸೂಚಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಅವರು ಜಿಲ್ಲಾಡಳಿತ ವತಿಯಿಂದ ಜಾಗ ಗುರುತಿಸಲಾಗಿದೆ. ಆದರೆ ಅರಣ್ಯ ಇಲಾಖೆಯಿಂದ ಒಪ್ಪಿಗೆಬೇಕಿದೆ ಎಂದು ಸಭೆಯ ಗಮನಕ್ಕೆ ತಂದರು.

ಶಾಲಾ ಕಟ್ಟಡ ನಿರ್ಮಾಣಕ್ಕೆ ಜಾಗ:

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಕಂದಾಯ ಇಲಾಖೆಯಿಂದ ಶಾಲಾ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಲಾಗಿದೆ ಎಂದು ತಿಳಿಸಿದರು.

ಮುಂದಿನ ವಾರ ಮುಂಗಾರು ಆರಂಭವಾಗುತ್ತಿದ್ದು, ಶಾಲಾ ಕಟ್ಟಡಗಳ ಸುಸ್ಥಿತಿ, ಸುತ್ತುಗೋಡೆ ನಿರ್ಮಾಣ, ಶೌಚಾಲಯ, ಆಟದ ಮೈದಾನ, ಶಾಲೆಗೆ ಬೇಕಿರುವ ಪೀಠೋಪಕರಣಗಳು ಹೀಗೆ ಇತರೆ ಮಾಹಿತಿ ಒದಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಸೂಚಿಸಿದರು.

ಜಿಲ್ಲೆಯ ಅಭಿವೃದ್ಧಿ ಸಂಬಂಧ ರಸ್ತೆ, ಸೇತುವೆ, ಕಟ್ಟಡಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಕಷ್ಟಪಟ್ಟು ಅನುದಾನ ಬಿಡುಗಡೆ ಮಾಡಿಸುತ್ತೇವೆ. ಆದರೆ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ಒದಗಿಸದೆ ಉದಾಸೀನ ತೋರುತ್ತಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಸಿಟ್ಟಾದರು.

‘ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಗಮನ ಸೆಳೆದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು. ಜಿಲ್ಲೆಗೆ ಆಗಬೇಕಿರುವ ಕೆಲಸಗಳ ಬಗ್ಗೆ ಒತ್ತು ನೀಡಬಹುದಾಗಿದೆ. ಅದನ್ನು ಬಿಟ್ಟು ಇತರೆ ಬಗ್ಗೆ ಮಾಹಿತಿ ನೀಡುವುದು ಸರಿಯಲ್ಲ ಎಂದರು.’

ರಸ್ತೆ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಪ್ರತೀ ನಿತ್ಯ ಮನವಿಗಳು ಸಲ್ಲಿಕೆಯಾಗುತ್ತಿವೆ. ಅಂತಹ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿದ್ದಲ್ಲಿ, ಸಾರ್ವಜನಿಕರಿಂದ ಮನವಿಗಳು ಬರುವುದು ಕಡಿಮೆಯಾಗಲಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಸ್ಪಂದಿಸುವಂತಾಗಬೇಕು ಎಂದರು.

ವಿವಿಧ ಯೋಜನೆ ಜನರ ಕಲ್ಯಾಣಕ್ಕಾಗಿ ಜಾರಿ:

ಸರ್ಕಾರದ ವಿವಿಧ ಯೋಜನೆಗಳನ್ನು ಜನರ ಕಲ್ಯಾಣಕ್ಕಾಗಿ ಜಾರಿಗೊಳಿಸಲಾಗಿದೆ. ಅದನ್ನು ಅರಿತುಕೊಂಡು ಜನಸಾಮಾನ್ಯರ ಕೆಲಸಗಳನ್ನು ಮಾಡಬೇಕು. ಸರ್ಕಾರ ಕಾರ್ಯಕ್ರಮ ರೂಪಿಸುವುದು ಜನರಿಗಾಗಿ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿರುವುದು ಜನರಿಗಾಗಿ ಎಂಬುದನ್ನು ಮರೆಯಬಾರದು ಎಂದು ಎ.ಎಸ್.ಪೊನ್ನಣ್ಣ ಅವರು ಪ್ರತಿಪಾದಿಸಿದರು.

ಲೋಕೋಪಯೋಗಿ, ಪಂಚಾಯತ್ ರಾಜ್ ಹಾಗೂ ಕೆಆರ್‌ಐಡಿಎಲ್, ಪಿಎಂಜಿಎಸ್‌ವೈ ಸೇರಿದಂತೆ ವಿವಿಧ ಎಂಜಿನಿಯರಿಂಗ್ ಇಲಾಖೆಗಳು ರಸ್ತೆ, ಸೇತುವೆ ಮತ್ತಿತರ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುವಂತೆ ಎ.ಎಸ್.ಪೊನ್ನಣ್ಣ ನಿರ್ದೇಶನ ನೀಡಿದರು.

ಸಾಮಾಜಿಕ ಅರಣ್ಯ ವಿಭಾಗದಲ್ಲಿ ಸಾರ್ವಜನಿಕರಿಗೆ ಬೇಡಿಕೆ ಇರುವ ಗಿಡಗಳನ್ನು ವಿತರಿಸಲಾಗುತ್ತಿದ್ದು, ಆ ನಿಟ್ಟಿನಲ್ಲಿ ಕ್ಯಾಂಪ್ ಮಾದರಿಯಲ್ಲಿ ಆಯೋಜನೆ ಮಾಡಿ ಗಿಡಗಳ ವಿತರಣೆಗೆ ಕ್ರಮವಹಿಸುವಂತೆ ಎ.ಎಸ್.ಪೊನ್ನಣ್ಣ ಅವರು ಸಲಹೆ ಮಾಡಿದರು.

ಕುಡಿಯುವ ನೀರು ಕಲ್ಪಿಸಬೇಕು

ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಪ್ರತೀ ಮನೆಗೂ ಕುಡಿಯುವ ನೀರು ಕಲ್ಪಿಸಬೇಕು. ಜಲ ಜೀವನ್ ಮಿಷನ್ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಹಾಗೆಯೇ ಬಹುಗ್ರಾಮ ಕುಡಿಯುವ ನೀರು ಯೋಜನೆ ಸಂಬಂಧಿಸಿದಂತೆ ಮಾಹಿತಿ ಪಡೆದರು.

ಜಲಜೀವನ್ ಮಿಷನ್ ಯೋಜನೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ಆಹ್ವಾನಿಸಲಾಗುವುದು. ವಿವಿಧ ಅಭಿವೃದ್ಧಿ ನಿಗಮಗಳಲ್ಲಿ ಸಾಲ ಸೌಲಭ್ಯ ಸಹಾಯಧನ, ಗಂಗಾ ಕಲ್ಯಾಣ, ಸಾರಥಿ ಹೀಗೆ ವಿವಿಧ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಂತೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ನಿರ್ದೇಶನ ನೀಡಿದರು.

ಸಣ್ಣ ನೀರಾವರಿ, ಚೆಕ್ಕು ಡ್ಯಾಂಗಳ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು. ತೋಟಗಾರಿಕೆ ಇಲಾಖೆ ಕಾರ್ಯಕ್ರಮಗಳ ಸಂಬಂಧ ಮಾಹಿತಿ ಪಡೆದರು.

ವಿದ್ಯುತ್ ಉಪ ಘಟಕಗಳಲ್ಲಿ ಈಗಾಗಲೇ ಪ್ರಾರಂಭವಾಗಿರುವ ಕಾಮಗಾರಿ ಸಂಬಂಧಿಸಿದಂತೆ ಮಾಹಿತಿ ಪಡೆದರು. ಭಾಗಮಂಡಲ ಬಳಿಯ ತಣ್ಣಿಮಾನಿ ಗ್ರಾಮದ ಬಳಿ ಆದಿವಾಸಿ ಕುಟುಂಬಗಳು ವಾಸಿಸುತ್ತಿದ್ದು, ಇವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಿದರು.

ಸಮಾಜ ಕಲ್ಯಾಣ, ಸಹಕಾರ, ಆಹಾರ, ಕೆಎಸ್‌ಆರ್‌ಟಿಸಿ, ಹಿಂದುಳಿದ ವರ್ಗಗಳ ಕಲ್ಯಾಣ, ಕಾರ್ಮಿಕ ಇಲಾಖೆ, ಕೃಷಿ ಮತ್ತಿತರ ಇಲಾಖೆಗಳ ಅಭಿವೃದ್ಧಿ ಸಂಬಂಧಿಸಿದಂತೆ ಮಾಹಿತಿ ಪಡೆದರು.

ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕಾಳೇಮಾಡ ಪ್ರಶಾಂತ್, ಜಾನ್ಸನ್, ಮಂದ್ರೀರ ಮೋಹನ್, ಕೆಡಿಪಿ ಸದಸ್ಯರಾದ ಟಿ.ಕೆ.ಅಬ್ದುಲ್, ರೇಖಾ, ಪೊನ್ನಕ್ಕಿ, ಶಶಿಧರನ್, ವಿ.ಟಿ.ವಾಸು, ಅಜಿತ್ ಅಯ್ಯಪ್ಪ, ರಫಿಕ್, ಪ್ರಶಾಂತ್ ಉತ್ತಪ್ಪ, ಭರತ್ ಪಿ.ಎಸ್., ಎಚ್.ಪಿ.ಗಣೇಶ್, ಮರ್ವಿನ್ ಲೋಬೋ, ಎಂ.ವಿ.ಕಿರಣ್, ರೈನಾ ಕಾರ್ಯಪ್ಪ, ತಿಲಕ ಸುಬ್ರಾಯ, ಕುಶಾಲಪ್ಪ, ಇತರರು ವೈದ್ಯರ ನೇಮಕಾತಿ, ಕುಡಿಯುವ ನೀರು ಕಾಮಗಾರಿ ನಿರ್ವಹಣೆ, ರಸ್ತೆಗಳ ಅಭಿವೃದ್ಧಿ ಮತ್ತಿತರ ಸಂಬಂಧ ಗಮನ ಸೆಳೆದರು.

ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಕುಡಿಯುವ ನೀರು ಯೋಜನೆ ಜಲಜೀವನ್ ಮಿಷನ್, ಪಂಚಾಯತ್ ರಾಜ್ ಇಲಾಖೆಯಡಿ ರಸ್ತೆಗಳ ಅಭಿವೃದ್ಧಿ ಮತ್ತಿತರ ಸಂಬಂಧ ಮಾಹಿತಿ ನೀಡಿದರು.

ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಜಿ.ಪಂ.ಉಪ ಕಾರ್ಯದರ್ಶಿ ಅಬ್ದುಲ್ ನಬೀ, ತಾ.ಪಂ.ಇಒ ಅಪ್ಪಣ್ಣ, ಶೇಖರ್, ತಹಸೀಲ್ದಾರರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.