ಜನಜಾಗೃತಿಗಾಗಿ ಕೆಪಿಸಿಸಿಯಿಂದ ಪ್ರಚಾರ ಸಮಿತಿ ರಚನೆ: ವಿನಯ್‌ಕುಮಾರ್

KannadaprabhaNewsNetwork |  
Published : Sep 03, 2025, 01:00 AM IST
೨ಕೆಎಂಎನ್‌ಡಿ-೧ಮಂಡ್ಯ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೀಲಾರ ರಾಧಾಕೃಷ್ಣ ಅವರಿಗೆ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಅವರು ನೇಮಕಾತಿ ಪತ್ರ ನೀಡಿದರು. | Kannada Prabha

ಸಾರಾಂಶ

ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯು ಇದುವರೆಗೆ ಕೇವಲ ಚುನಾವಣೆಗಾಗಿ ಮಾತ್ರ ಎಂಬ ಪ್ರತೀತಿ ಇತ್ತು. ಆದರೆ, ಇದೇ ಮೊದಲ ಬಾರಿಗೆ ಕೆಪಿಸಿಸಿ ಮತ್ತು ಮುಖ್ಯಮಂತ್ರಿಯವರ ಶಿಫಾರಸ್ಸಿನ ಮೇರೆಗೆ ಪ್ರಚಾರ ಸಮಿತಿಯನ್ನು ಎಐಸಿಸಿ ಮಾನ್ಯಗೊಳಿಸಿ, ಕಾಯಂಗೊಳಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಂವಿಧಾನದ ಮೇಲೆ ಕೇಂದ್ರ ಸರ್ಕಾರ ನಿರಂತರ ದಾಳಿ ನಡೆಸುತ್ತಿದೆ. ಸಮಾಜವಾದ, ಜಾತ್ಯತೀತ ಪದಗಳನ್ನೇ ತೆಗೆದುಹಾಕಲು ಮುಂದಾಗಿದೆ. ವಿರೋಧ ಪಕ್ಷಗಳ ವಿರುದ್ಧ ದಾಳಿ ಮಾಡಲು ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ, ನ್ಯಾಯಾಂಗವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಇವೆಲ್ಲದರ ಬಗ್ಗೆ ಪಕ್ಷದ ಕಾರ್ಯಕರ್ತರು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಪ್ರಚಾರ ಸಮಿತಿ ಕೆಲಸ ಮಾಡಲಿದೆ ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು.

ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯು ಇದುವರೆಗೆ ಕೇವಲ ಚುನಾವಣೆಗಾಗಿ ಮಾತ್ರ ಎಂಬ ಪ್ರತೀತಿ ಇತ್ತು. ಆದರೆ, ಇದೇ ಮೊದಲ ಬಾರಿಗೆ ಕೆಪಿಸಿಸಿ ಮತ್ತು ಮುಖ್ಯಮಂತ್ರಿಯವರ ಶಿಫಾರಸ್ಸಿನ ಮೇರೆಗೆ ಪ್ರಚಾರ ಸಮಿತಿಯನ್ನು ಎಐಸಿಸಿ ಮಾನ್ಯಗೊಳಿಸಿ, ಕಾಯಂಗೊಳಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಚಾರ ಸಮಿತಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಅಧ್ಯಕ್ಷರ ನೇಮಕ ಆಗಿದೆ. ಜಿಲ್ಲಾ ಸಮಿತಿ, ಬ್ಲಾಕ್ ಸಮಿತಿ, ಬೂತ್ ಸಮಿತಿ ರಚಿಸಲು ಮುಂದಾಗಿದೆ. ಸುಮಾರು ಒಂದು ಲಕ್ಷ ಕಾರ್ಯಕರ್ತರನ್ನು ಈ ಸಮಿತಿಯಲ್ಲಿ ಸೇರಿಸಿಕೊಂಡು ಸಂಘಟನೆ ಬಲಪಡಿಸಲು ನಿರ್ಧರಿಸಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಾಯಕತ್ವ ಮತ್ತು ಪಕ್ಷದ ಕಾರ್ಯಕ್ರಮಗಳ ಬಗ್ಗೆ ಪ್ರಚುರಪಡಿಸುವುದು, ವಿರೋಧ ಪಕ್ಷಗಳ ಅಪಪ್ರಚಾರದ ವಿರುದ್ಧ ಸತ್ಯವನ್ನು ಕಾರ್ಯಕರ್ತರಿಗೆ ತಿಳಿಸಲು ಚುನಾವಣಾ ಪ್ರಚಾರ ಸಮಿತಿ ವಿವಿಧ ಕಾರ್ಯಕ್ರಮ ಆಯೋಜಿಸಲಿದೆ ಎಂದರು.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ೧ ಲಕ್ಷ ಕೋಟಿ ಹಣವನ್ನು ಜನರ ಕೈಗೆ ನೇರವಾಗಿ ವರ್ಗಾವಣೆ ಮಾಡುತ್ತಿದ್ದು, ಇದರಿಂದ ಜನರ ಆರ್ಥಿಕ ಶಕ್ತಿ ವೃದ್ಧಿಯಾಗಿದೆ ರಾಜ್ಯದ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದಂತೆ ಅಧಿಕಾರಕ್ಕೆ ಬಂದ ಆರು ತಿಂಗಳ ಒಳಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಾಗ ಈ ಯೋಜನೆಯನ್ನು ವಿರೋಧ ಪಕ್ಷದವರು ಬಿಟ್ಟಿ ಗ್ಯಾರಂಟಿ ಎಂದು ಅಪಪ್ರಚಾರ ನಡೆಸಿದರು. ಅಲ್ಲದೇ, ಈ ಯೋಜನೆಯಿಂದ ಆರ್ಥಿಕವಾಗಿ ಒಡೆತ ಬೀಳಲಿದೆ ಎಂದು ಟೀಕಿಸಿದರು. ಆದರೆ, ಕೇಂದ್ರ ಸರ್ಕಾರ ನಡೆಸಿದ ಸರ್ವೇಯಲ್ಲಿ ರಾಜ್ಯದ ತಲಾ ಆದಾಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈಗಾಗಲೇ ದೇಶದಾದ್ಯಂತ ‘ಮತಗಳ್ಳತನ’ದ ಬಗ್ಗೆ ಆಂದೋಲನ ಆರಂಭಿಸಿದ್ದಾರೆ. ಪ್ರತಿಯೊಬ್ಬ ಪ್ರಜೆಯ ಮತದಾನದ ಹಕ್ಕನ್ನು ಕಾಪಾಡಲು ಮುಂದಾಗಿದ್ದಾರೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ಅರಿವು ಮೂಡಿಸಿ, ಆಂದೋಲನ ವ್ಯಾಪಕಗೊಳಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಪ್ರಸ್ತುತ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಸಂವಿಧಾನ, ಪ್ರಜಾಪ್ರಭುತ್ವವವನ್ನು ಶಿಥಿಲಗೊಳಿಸಲಾಗುತ್ತಿದೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ತಿಳಿಸುವ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಚಾರ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಕೀಲಾರ ರಾಧಾಕೃಷ್ಣ ಪ್ರಚಾರ ಸಮಿತಿ ಅಧ್ಯಕ್ಷ:

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೀಲಾರ ರಾಧಾಕೃಷ್ಣ ಅವರಿಗೆ ಇದೇ ಸಂದರ್ಭದಲ್ಲಿ ನೇಮಕಾತಿ ಪತ್ರ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷರಾದ ಎಂ.ಶಿವಣ್ಣ, ಮುನೀರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್. ಚಿದಂಬರ್‌, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿ, ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶುಭದಾಯಿನಿ, ಕೆಪಿಸಿಸಿ ಕಾರ್ಯದರ್ಶಿ ಎಚ್.ತ್ಯಾಗರಾಜು, ನಗರಸಭಾ ಸದಸ್ಯ ಶ್ರೀಧರ್, ಜಿಲ್ಲಾ ವಕ್ತಾರ ಸಿ.ಎಂ.ದ್ಯಾವಪ್ಪ, ಮೈಷುರ್ಗ ಮಾಜಿ ಅಧ್ಯಕ್ಷ ಹಾಲಹಳ್ಳಿ ರಾಮಲಿಂಗಯ್ಯ ಸೇರಿದಂತೆ ಇತರರಿದ್ದರು.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ