ಕನ್ನಡಪ್ರಭ ವಾರ್ತೆ ನವದೆಹಲಿ:
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಓಟ್ ಚೋರಿ ಆಗ್ತಿದೆ. ಕಾನೂನುಬಾಹಿರವಾಗಿ ಅಲ್ಪಸಂಖ್ಯಾತರು, ದೀನ ದಲಿತರ ಮತ ಕಳ್ಳತನ ಮಾಡಿದ್ದಾರೆ. ಹೀಗಾಗಿ, ಇಂಡಿಯಾ ಒಕ್ಕೂಟದಿಂದ ಒಟ್ಟಾಗಿ ಪ್ರತಿಭಟನೆ ನಡೆಸಿದ್ದೇವೆ. ಕರ್ನಾಟಕದಿಂದಲೂ ಸಾಕಷ್ಟು ಮುಖಂಡರು ಬಂದಿದ್ದರು. ಸುಪ್ರೀಂಕೋರ್ಟ್‌ಗೆ ಎಲ್ಲ ಪಕ್ಷಗಳ ಪರವಾಗಿ ಅರ್ಜಿ ಸಲ್ಲಿಸಿದ್ದೇವೆ. ಮಂಗಳವಾರ ವಿಚಾರಣೆಗೆ ಬರಬಹುದು. ಮತಗಳ್ಳತನ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಅರಾಜಕತೆ ಸೃಷ್ಟಿಸುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಮಾಡಬಾರದ್ದನ್ನು ಮಾಡಿ ಅರಾಜಕತೆ ಸೃಷ್ಟಿ ಮಾಡಿದ್ದು ಬಿಜೆಪಿಯವರು. ಮತದಾರರ ಹಕ್ಕನ್ನು ಕಿತ್ತು ಹಾಕಿದ್ದು ಅವರು ಎಂದು ತಿರುಗೇಟು ನೀಡಿದರು.ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಎಸ್ಐಆರ್ ಪ್ರಕ್ರಿಯೆ ವೇಳೆ ಅರ್ಹ ಮತದಾರರನ್ನು ಕೈ ಬಿಡಲಾಗಿದೆ. ಇದಕ್ಕೆ ಜ್ಞಾನೇಶ್ ಕುಮಾರ್ ಅವರೇ ಕಾರಣ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜ್ಞಾನೇಶ್ ಕುಮಾರ್ ಅವರು ಸರ್ವಾಧಿಕಾರಿ ಧೋರಣೆ ಹೊಂದಿದ್ದಾರೆ. ಮತದಾರರ ಪಟ್ಟಿಯ ಪರಿಷ್ಕರಣೆ ಆರ್‌ಎಸ್‌ಎಸ್ ಕಚೇರಿಯಲ್ಲಾಗುತ್ತಿದೆ. ಚುನಾವಣಾ ಆಯೋಗ ಏಕಪಕ್ಷೀಯವಾಗಿದೆ. ಸುಪ್ರೀಂಕೋರ್ಟ್ ಕೂಡಾ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ತಟಸ್ಥವಾಗಿದೆ ಎಂದು ಆರೋಪಿಸಿದರು. ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಲೇಬೇಕು ಎಂದು ಒತ್ತಾಯಿಸಿದರು.
ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಇದು ಕಾಂಗ್ರೆಸ್ ನ ಶಕ್ತಿ ಪ್ರದರ್ಶನ ಅಲ್ಲ. ಸಾಮಾನ್ಯ ಜನರ ಓಟ್ ಉಳಿಸಲು ಕಾಂಗ್ರೆಸ್ ಹೋರಾಟ ನಡೆಸುತ್ತಿದೆ. ರಾಜ್ಯದಲ್ಲಿ ಫಾರಂ-7ನ ದುರುಪಯೋಗ ನಡೆದಿದೆ. ಇದಕ್ಕೆ ಚುನಾವಣಾ ಆಯೋಗವನ್ನೇ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಮಾತನಾಡಿ, ಇಂಡಿಯಾ ಒಕ್ಕೂಟದ ಪ್ರತಿಭಟನೆ ಕೇವಲ ಎಸ್‌ಐಆರ್‌ಗೆ ಸೀಮಿತವಾಗಿಲ್ಲ. ಇವಿಎಂ ಹ್ಯಾಕಿಂಗ್ ನಡೆಯುತ್ತಿದೆ. ಇದರ ವಿರುದ್ಧವೂ ಈ ಹೋರಾಟ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಬಹಳ ಮುಖ್ಯ. ಮತದಾರ ಹಾಕುವ ಮತ ಖಾತ್ರಿಯಾಗಬೇಕು. ಅದಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಸಚಿವರಾದ ಎಂ.ಬಿ.ಪಾಟೀಲ್, ಸಂತೋಷ್ ಲಾಡ್, ಮಾಗಡಿ ಬಾಲಕೃಷ್ಣ, ಈಶ್ವರ್ ಖಂಡ್ರೆ, ಶರಣಪ್ರಕಾಶ್ ಪಾಟೀಲ್, ಸಿಎಂ ರಾಜಕೀಯ ಸಲಹೆಗಾರ ಪೊನ್ನಣ್ಣ, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ವಿಧಾನ ಪರಿಷತ್ ಉಪಸಭಾಪತಿ ಉಮಾಶ್ರೀ, ಎಂಎಲ್ ಸಿ ಆರತಿ ಕೃಷ್ಣ, ಮಾಜಿ ಸಚಿವ ಬೋಸರಾಜು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರತಿಭಟನೆ:
ಬೀದರ್‌ನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದಿಂದ ಪ್ರತಿಭಟನೆ ನಡೆಸಲಾಯಿತು. ಡಾ.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸಹಾಯಕ ಆಯುಕ್ತರ ಕಚೇರಿವರೆಗೆ ಮೆರವಣಿಗೆ ತೆರಳಿದರು. ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.ಹುಬ್ಬಳ್ಳಿಯಲ್ಲಿ ಡಾ। ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನದ 326ನೇ ವಿಧಿ ಓದುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು. ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆಯಿತು. ಇನ್ನು ಉತ್ತರ ಕನ್ನಡದ ಶಿರಸಿಯಲ್ಲಿ ಮಾಜಿ ಸಚಿವ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.