ಕಾಂಗ್ರೆಸ್ ಅಭಿವೃದ್ಧಿ ರಾಜಕಾರಣದ ವಿರೋಧಿ ಅಲ್ಲ

KannadaprabhaNewsNetwork |  
Published : Jan 26, 2024, 01:49 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ನಾಡಿನ ಅಭಿವೃದ್ಧಿಗೆ ಕಾಂಗ್ರೆಸ್ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ. ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಬದ್ಧವಿದೆ. ಆದರೆ ಕೆಲವರು ಕಾಂಗ್ರೆಸ್ ಅಭಿವೃದ್ಧಿ ರಾಜಕಾರಣದ ವಿರೋಧಿ ಎಂದು ಬಿಂಬಿಸುತ್ತಿದ್ದು, ತರವಲ್ಲದ ನಡವಳಿಕೆಯಾಗಿದೆ.

ಚಿತ್ರದುರ್ಗ: ನಾಡಿನ ಅಭಿವೃದ್ಧಿಗೆ ಕಾಂಗ್ರೆಸ್ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ. ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಬದ್ಧವಿದೆ. ಆದರೆ ಕೆಲವರು ಕಾಂಗ್ರೆಸ್ ಅಭಿವೃದ್ಧಿ ರಾಜಕಾರಣದ ವಿರೋಧಿ ಎಂದು ಬಿಂಬಿಸುತ್ತಿದ್ದು, ತರವಲ್ಲದ ನಡವಳಿಕೆಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಕಾಮಗಾರಿಗೆ ಆಗ್ರಹಿಸಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕರೆ ನೀಡಿದ್ದ ಚಿತ್ರದುರ್ಗ ಬಂದ್‌ಗೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿತ್ತು. ನೆಲ, ಜಲದ ಪ್ರಶ್ನೆ ಬಂದಾಗಲೆಲ್ಲ ಕಾಂಗ್ರೆಸ್ ದನಿಗೂಡಿಸಿದೆ. ಬಂದ್ ವೇಳೆ ಗಾಂಧಿ ವೃತ್ತದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡುವಾಗ ಕೆಲ ಕಿಡಿಗೇಡಿಗಳು ಆಕ್ಷೇಪ ವ್ಯಕ್ತಪಡಿಸಿದರು. ಅವರಾರೂ ಹೋರಾಟ ಸಮಿತಿಗೆ ಸಂಬಂಧಿಸಿದವರಲ್ಲ. ಕಿಡಿಗೇಡಿಗಳ ಈ ಕೃತ್ಯವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟು ಭದ್ರಾ ಮೇಲ್ದಂಡೆಗೆ ತಾವು ವಿರೋಧಿಯಂತೆ ಬಿಂಬಿಸಲಾಗುತ್ತಿದೆ ಎಂದರು.

ನನ್ನ ಸ್ವಂತ ಊರು ತರಿಕೆರೆ ತಾಲೂಕಿನಲ್ಲಿದೆ. ಭದ್ರಾ ಮೇಲ್ದಂಡೆ ಕಾಮಗಾರಿ ಹತ್ತಿರದಿಂದ ಗಮನಿಸಿದ್ದೇನೆ. ಸಮಸ್ಯೆ ಎದುರಾದಾಗಲೆಲ್ಲ ನಿವಾರಣೆ ಮಾಡಿದ್ದೇನೆ. ಭದ್ರಾ ಮೇಲ್ದಂಡೆ ಕಾಮಗಾರಿಗೆ ಕಳೆದ 5 ವರ್ಷ ಬಿಜೆಪಿ ಸರ್ಕಾರ ಏನು ಮಾಡಿತು ಎಂಬುದ ಸ್ಪಷ್ಟಪಡಿಸಲಿ. ಚಿತ್ರದುರ್ಗ ಕ್ಷೇತ್ರದಿಂದ ನಾನು ಲೋಕಸಭೆ ಪ್ರವೇಶಿಸಿದ್ದು, ಈ ನೆಲಕ್ಕೆ ವಂಚನೆ ಮಾಡುವ ಪ್ರಮೇಯ ಎದುರಾಗದು. ಭದ್ರಾ ಮೇಲ್ದಂಡೆಗೆ ಮೂಲ ವಿರೋಧಿಗಳು ಯಾರು ಎಂಬುದು ಜನತೆಗೆ ಗೊತ್ತಿದೆ ಎಂದರು.

ಸಿದ್ದರಾಮಯ್ಯ ಅವರು ಸಿಎಂ ಆದ ತರುವಾರ ಭದ್ರಾ ಮೇಲ್ದಂಡೆಗೆ 2500 ಸಾವಿರ ಕೋಟಿ ರು. ನೀಡುವುದಾಗಿ ಹೇಳಿದ್ದರು. ಕೇವಲ 6 ತಿಂಗಳಿಗೆ 1200 ಕೋಟಿ ರು. ಒದಗಿಸಿ ಯೋಜನೆ ಪೂರ್ಣಗೊಳಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಬಂದ್‌ಗೆ ಕಾಂಗ್ರೆಸ್ ಮೊದಲೇ ಬೆಂಬಲ ವ್ಯಕ್ತಪಡಿಸಿತ್ತು. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಗೋವಿಂದಪ್ಪ, ರಘು ಮೂರ್ತಿ ಎಲ್ಲರೂ ಪಾಲ್ಗೊಂಡು ಸರ್ಕಾರದ ನಿಲುವುಗಳ ಪ್ರಕಟಿಸಿದ್ದಾರೆ. ಆದರೆ ಬಂದ್‌ಗೆ ಬೆಂಬಲ ಸೂಚಿಸಿದ ಬಿಜೆಪಿ ಪಾಲ್ಗೊಳ್ಳದೇ ಪಲಾಯನ ಮಾಡಿದೆ ಎಂದು ಚಂದ್ರಪ್ಪ ದೂರಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿ 5300 ಕೋಟಿ ರು. ಹಣ ಒದಗಿಸುವುದಾಗಿ ಭರವಸೆ ನೀಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ವಿಚಾರದಲ್ಲಿ ನಿರ್ಲಕ್ಷ್ಯ ತಾಳಿದ್ದಾರೆ. ಇದುವರೆಗೂ ಒಂದು ಪೈಸೆ ಹಣ ನೀಡಿಲ್ಲ. 4 ಜಿಲ್ಲೆಗಳಿಗೆ ಅನುಕೂಲವಾಗಲಿರುವ ಈ ಯೋಜನೆಗೆ ತಕ್ಷಣವೇ ಎಚ್ಚೆತ್ತುಕೊಂಡ ಅನುದಾನ ಬಿಡುಗಡೆ ಮಾಡಬೇಕು. ಬಂದ್‌ಗೆ ಬೆಂಬಲ ಸೂಚಿಸಿ ಹಿಂದೆ ಸರಿದ ಮಂದಿ ಮೊದಲು ಕೇಂದ್ರದಿಂದ ಹಣ ತರಿಸುವ ಕೆಲಸ ಮಾಡಲಿ ಎಂದು ಸಲಹೆ ಮಾಡಿದರು.

ಕೇಂದ್ರ ಸರ್ಕಾರ ಭದ್ರಾ ಯೋಜನೆ ತ್ವರಿತ ಕಾಮಗಾರಿಗೆ ಹಣ ಒದಗಿಸಬೇಕು. ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗೆ ಭದ್ರಾ ಯೋಜನೆ ಅನುಕೂಲ ಪಡೆಯಲಿವೆ. 4 ಜಿಲ್ಲೆ 12 ತಾಲೂಕು 367 ಕೆರೆ ತುಂಬಿಸುವ ಯೋಜನೆಯಾಗಿದೆ. 2022ರಲ್ಲಿ 21647 ಕೋಟಿಗೆ ಪರಿಷ್ಕೃತಗೊಳಿಸಿ ರಾಷ್ಟ್ರೀಯ ಯೋಜನೆ ಮಾಡಬೇಕು ಎಂದು ಕೇಂದ್ರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಪ್ರಸ್ತಾವನೆ ಕಳಿಸಿತ್ತು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೂಡಾ 5300 ಕೋಟಿ ರು. ಅನುದಾನ ಬಿಡುಗಡೆ ಮನವಿ ಮಾಡಿಕೊಂಡರೂ ಉದಾಸೀನ ತೋರಲಾಗಿದೆ ಎಂದು ಚಂದ್ರಪ್ಪ ಹೇಳಿದರು.

ಭದ್ರಾ ಮೇಲ್ದಂಡೆ ಕಾಮಗಾರಿಗೆ ತೊಡಕಾಗಿರುವ ಅಬ್ಬಿನಹೊಳಲು ಬಳಿಯ ಭೂ ಸ್ವಾಧೀನ ಪೂರ್ಣಗೊಳಿಸಲು ತರಿಕೆರೆ ಶಾಸಕರ ಬಳಿ ಈಗಾಗಲೇ ಚರ್ಚಿಸಲಾಗಿದೆ. ಸಚಿವ ಡಿ.ಸುಧಾಕರ್, ಶಾಸಕ ಬಿ.ಜಿ. ಗೋವಿಂದಪ್ಪ ಕೂಡಾ ಮಾತನಾಡಿದ್ದಾರೆ. ಶೀಘ್ರ ಸಮಸ್ಯ ಬಗೆಹರಿಯಲಿದೆ. ಈ ವಿಚಾರದಲ್ಲಿ ಆತಂಕ ಅಗತ್ಯ ಬಜೆಟ್ ನಂತರ ಕಾಮಗಾರಿ ಚುರುಕುಗೊಳಿಸಲಾಗುವುದು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಫೀರ್, ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಲೇಶ್, ಬಿ.ಟಿ.ಜಗದೀಶ್, ಡಿ.ಎನ್.ಮೈಲಾರಪ್ಪ, ಸಂಪತ್ ಕುಮಾರ್, ಎನ್.ಡಿ.ಕುಮಾರ್, ಜಯಣ್ಣ, ಕಂದಿಕೆರೆ ಸುರೇಶ್ ಬಾಬು, ನಜ್ಮತಾಜ್, ಡಿ.ಟಿ.ವೆಂಕಟೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ