ಆರೋಗ್ಯ ಇಲಾಖೆ ನೋಂದಣಿ ನವೀಕರಿಸದ ಆಸ್ಪತ್ರೆಗಳಿಗೆ ದಂಡ

KannadaprabhaNewsNetwork |  
Published : Oct 15, 2026, 03:00 AM IST
ಕೆಪಿಎಂಇಎ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಸಭೆ ನಡೆಸಿದರು | Kannada Prabha

ಸಾರಾಂಶ

: ಕರ್ನಾಟಕ ಖಾಸಗಿ ವೈದ್ಯಕೀಯ ಸ್ಫಾಪನೆ ಕಾಯಿದೆ (ಕೆಪಿಎಂಇಎ) ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಸಭೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಮಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸ್ಫಾಪನೆ ಕಾಯಿದೆ (ಕೆಪಿಎಂಇಎ) ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಸಭೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.ಕೆಪಿಎಂಇಎ ನವೀಕರಣ ಪರವಾನಿಗೆ ಪಡೆಯಲು ಅಗ್ನಿಶಾಮಕ ಇಲಾಖೆಯಿಂದ ಪಡೆದ ಪ್ರಮಾಣಪತ್ರ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪಡೆದ ಪ್ರಮಾಣಪತ್ರ ಸಲ್ಲಿಸದೇ ಕೆಪಿಎಂಇಎ ಪ್ರಮಾಣಪತ್ರ ನವೀಕರಣವನ್ನು 3 ವರ್ಷಗಳಿಂದ ಮಾಡದೇ ಇರುವುದರಿಂದ ಕೆವಿಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇಲ್ಲಿಯ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಪ್ರಸ್ತುತ ಅಗ್ನಿಶಾಮಕ ಇಲಾಖೆಯಿಂದ ಪ್ರಮಾಣಪತ್ರ ಪಡೆದಿರುವ ಬಗ್ಗೆ ತಿಳಿಸಿದ್ದು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪ್ರಮಾಣಪತ್ರ ಪಡೆಯಲು ಬಾಕಿ ಇರುತ್ತದೆ ಎಂದು ತಿಳಿಸಿದರು.

ಕಳೆದ 3 ವರ್ಷದಿಂದ ಕೆಪಿಎಂಇಎ ಅಡಿಯಲ್ಲಿ ನೋಂದಣಿಯಾಗದೇ ಕೆವಿಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಾರ್ಯನಿರ್ವಹಿಸುತ್ತಿರುವುದು ಕೆಪಿಎಂಇ ಕಾಯ್ದೆ ಮತ್ತು ಕಾನೂನಿನ ಉಲ್ಲಂಘನೆಯಾಗಿರುತ್ತದೆ. ಆದುದರಿಂದ ಈ ಪ್ರಕರಣದ ಕುರಿತು ಕೆಪಿಎಂಇ ಕಾಯ್ದೆ 19(1)ರಂತೆ 1 ಲಕ್ಷ ರು.ಗಳನ್ನು ದಂಡ ವಿಧಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದರು.

ಒಮೆಗಾ ಆಸ್ಪತ್ರೆ ಮಂಗಳೂರು ಅವರು ಕೆಪಿಎಂಇಎ ನವೀಕರಣ ಪರವಾನಿಗೆ ಪ್ರಮಾಣಪತ್ರ ಪಡೆಯದೇ ಒಂದೂವರೇ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, ಕೆಪಿಎಂಇಎ ಪ್ರಮಾಣಪತ್ರ ನವೀಕರಣಗೊಳಿಸಲು ಅಗ್ನಿಶಾಮಕ ಇಲಾಖೆಯಿಂದ ಪಡೆದ ಪ್ರಮಾಣಪತ್ರ ನೀಡದೇ ಇರುವುದರಿಂದ ಕೆಪಿಎಂಇಎ ನವೀಕರಣವಾಗದೇ ಇರುವ ಕುರಿತು ಒಮೆಗಾ ಆಸ್ಪತ್ರೆಯ ಅಧಿಕಾರಿಯವರೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸಿದರು. ಕಳೆದ ಒಂದೂವರೇ ವರ್ಷದಿಂದ ಕೆ.ಪಿ.ಎಂ.ಇ.ಎ ಅಡಿಯಲ್ಲಿ ನೋಂದಣಿಯಾಗದೇ ಒಮೆಗಾ ಆಸ್ಪತ್ರೆ ಮಂಗಳೂರು ಕಾರ್ಯನಿರ್ವಹಿಸುತ್ತಿರುವುದು ಕೆಪಿಎಂಇ ಕಾಯ್ದೆ ಮತ್ತು ಕಾನೂನಿನ ಉಲ್ಲಂಘನೆಯಾಗಿರುತ್ತದೆ. ಈ ಪ್ರಕರಣದ ಕುರಿತು ಕೆ.ಪಿ.ಎಂ.ಇ ಕಾಯ್ದೆ 19(1)ರಂತೆ 1 ಲಕ್ಷ ರು.ಗಳನ್ನು ದಂಡ ವಿಧಿಸಲು ಹಾಗೂ ಕಾನೂನು ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದರು.ದ.ಕ. ಜಿಲ್ಲೆಯಲ್ಲಿರುವ ಎಲ್ಲ ಆಸ್ಪತ್ರೆಯವರು ಅಗ್ನಿಶಾಮಕ ಇಲಾಖೆಯಿಂದ ಪ್ರಮಾಣಪತ್ರ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಿಗೆ ಕಡ್ಡಾಯವಾಗಿ ಪಡೆದಿರುವ ಬಗ್ಗೆ ಆಡಿಟ್ ಮಾಡಲು ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್ ತಿಮ್ಮಯ್ಯ, ವೆನ್ಲಾಕ್‌ ಆಸ್ಪತ್ರೆ ಅಧೀಕ್ಷಕ ಡಾ.ಶಿವಪ್ರಕಾಶ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದೀಪಾಪ್ರಭು, ಹಿರಿಯ ಮಕ್ಕಳ ತಜ್ಞ ಡಾ.ಶಾಂತರಾಮ ಬಾಳಿಗ, ಐ.ಎಂ.ಎ ಅಧ್ಯಕ್ಷ ಡಾ.ಸದಾನಂದ ಪೂಜಾರಿ, ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಸಂದೀಪ್ ರೈ, ಕೌನ್ಸಿಲರ್ ರಾಣಿ ಮಂಗಳ, ವಕೀಲ ಚಂದ್ರಹಾಸ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಸರಾ ಕುಸ್ತಿ: ಬೆಳಗಾವಿ ತಂಡ ಮೇಲುಗೈ
ಗಾಂಜಾ ಮಾರಾಟಕ್ಕೆ ಯತ್ನ, ಇಬ್ಬರ ಬಂಧನ