)
- ಒಟ್ಟು 7842 ಅಭ್ಯರ್ಥಿಗಳಲ್ಲಿ 1ನೇ ಸೆಷನ್ಗೆ 4718 ಜನ, 2ನೇ ಸೆಷನ್ಗೆ 4681 ಹಾಜರು: ಡಿಸಿ ಗಂಗಾಧರ ಸ್ವಾಮಿ- - -
ಕರ್ನಾಟಕ ಲೋಕಸೇವಾ ಆಯೋಗದಿಂದ 319 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳಿಗೆ ದಾವಣಗೆರೆ ನಗರದ 14 ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಶಾಂತಿ, ಸುವ್ಯವಸ್ಥಿತವಾಗಿ ಕೆಎಎಸ್ ಪರೀಕ್ಷೆ ನಡೆಯಿತು.
ಆಯೋಗದಿಂದ 319 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳಿಗೆ ಭಾನುವಾರ ನಡೆದ ಪರೀಕ್ಷೆಯಲ್ಲಿ ಮೊದಲ ಅಧಿವೇಶನದಲ್ಲಿ 7842 ಅಭ್ಯರ್ಥಿಗಳಲ್ಲಿ 4718 ಅಭ್ಯರ್ಥಿಗಳು ಹಾಜರಾಗಿದ್ದು, 3124 ಜನ ಗೈರಾಗಿದ್ದರು. ಮಧ್ಯಾಹ್ನ 2ನೇ ಅಧಿವೇಶನದ ಪರೀಕ್ಷೆಗೆ 4681 ಅಭ್ಯರ್ಥಿಗಳು ಹಾಜರಾಗಿದ್ದು, 3161 ಜನ ಗೈರಾಗಿದ್ದರು. ಯಾವುದೇ ಪರೀಕ್ಷಾ ಕೇಂದ್ರದಲ್ಲೂ ಅಹಿತಕರ ಘಟನೆ ನಡೆದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.ಪರೀಕ್ಷೆಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ಆಗದಂತೆ ಜಿಲ್ಲಾಡಳಿತ ಹೈಟೆಕ್ ಭದ್ರತಾ ವ್ಯವಸ್ಥೆ ಸೇರಿದಂತೆ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿತ್ತು. ಪ್ರತಿ ಪರೀಕ್ಷಾ ಕೊಠಡಿಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಕೆಪಿಎಸ್ಸಿ ಕೇಂದ್ರ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್ನಿಂದ ನೇರ ವೆಬ್ ಕಾಸ್ಟ್ ಮೂಲಕ ಪರೀಕ್ಷಾ ಪ್ರಕ್ರಿಯೆ ಮೇಲೆ ನಿರಂತರ ನಿಗಾ ಇಡಲಾಗಿತ್ತು ಎಂದು ಹೇಳಿದ್ದಾರೆ.
ಪರೀಕ್ಷೆ ಮುಗಿದ ತಕ್ಷಣ ಪ್ರಶ್ನೆಪತ್ರಿಕೆ ಹಾಗೂ ಒಎಂಆರ್ ಶೀಟ್ಗಳನ್ನು ಸೀಲ್ ಮಾಡಿ, 24 ಗಂಟೆ ಪೊಲೀಸ್ ಸರ್ಪಗಾವಲು, ಸಿಸಿ ಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ದಾವಣಗೆರೆ ಜಿಲ್ಲಾ ಖಜಾನೆಗೆ ರವಾನಿಸಲಾಯಿತು. ಪರೀಕ್ಷೆ ಮುಗಿದ 2-3 ಗಂಟೆ ಒಳಗಾಗಿ ಉತ್ತ ಪತ್ರಿಕೆಗಳ ಸ್ಕ್ಯಾನಿಂಗ್ ಪೂರ್ಣಗೊಳಿಸಿ, ಅಪ್ ಲೋಡ್ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಪರೀಕ್ಷಾ ಕೊಠಡಿಗೆ ಇಬ್ಬರು ಮೇಲ್ವಿಚಾಕರು, 5 ರೂಟ್ಗಳಿಗೆ 10 ಮಾರ್ಗಾಧಿಕಾರಿಗಳು, ನಾಲ್ವರು ವೀಕ್ಷಕರನ್ನು ನಿಯೋಜನೆ ಮಾಡಲಾಗಿತ್ತು ಎಂದು ಅವರು ತಿಳಿಸಿದರು.
ಶ್ರವಣ ಸಾಧನಗಳ ದುರ್ಬಳಕೆ ತಡೆಯಲು ಹಾಗೂ ತುರ್ತು ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಲು ಎಲ್ಲ 13 ಪರೀಕ್ಷಾ ಕೇಂದ್ರದಲ್ಲಿಯೂ ಇಎನ್ಟಿ ತಜ್ಞ ವೈದ್ಯರಿಂದ ತಪಾಸಣೆ ನಡೆಸಲು ವ್ಯವಸ್ಥೆ ಮಾಡಲಾಗಿತ್ತು. ತುರ್ತು ಸಂದರ್ಭಗಳಿಗಾಗಿ ಪ್ರತಿ ಕೇಂದ್ರದಲ್ಲೂ ಆಂಬ್ಯುಲೆನ್ಸ್ಗಳನ್ನು ಸಿದ್ಧಪಡಿಸಲಾಗಿತ್ತು. ಪರೀಕ್ಷಾ ಕೇಂದ್ರದ 1 ಕಿಮೀ ವ್ಯಾಪ್ತಿಯ ಜೆರಾಕ್ಸ್ ಅಂಗಡಿಗಳು, 200 ರಿಂದ 300 ಮೀಟರ್ ವ್ಯಾಪ್ತಿಯ ಅಂಗಡಿ ಮುಂಗ್ಗಟ್ಟುಗಳನ್ನು ಮುಚ್ಚಿಸಲಾಗಿತ್ತು. ಪರೀಕ್ಷೆ ಅದಿಯಲ್ಲಿ ನಿರಂತರ ವಿದ್ಯುತ್ ಪೂರೈಸಲು ಬೆಸ್ಕಾಂಗೆ ಸೂಚನೆ ನೀಡಲಾಗಿತ್ತು ಎಂದು ಜಿಲ್ಲಾಧಿಕಾರಿ ತಿಳಿಸಿದರು.
- - -
* ಕೆಪಿಎಸ್ಸಿ ಪರೀಕ್ಷೆ ಬರೆದ ಅಂಧ ಅಣ್ಣ-ತಂಗಿ
ದಾವಣಗೆರೆ: ಕೆಪಿಎಸ್ಸಿ ಪರೀಕ್ಷೆ ಬರೆಯಲು ಅಂಧ ಸಹೋದರ-ಸಹೋದರಿ ಆಗಮಿಸಿದ್ದು, ಪರೀಕ್ಷಾರ್ಥಿಗಳು ಸೇರಿದಂತೆ ಎಲ್ಲರ ಗಮನ ಸೆಳೆಯಿತು.
ಇದೇ ವೇಳೆ ಮಾತನಾಡಿದ ವಿಶೇಷ ಸಹೋದರ-ಸಹೋದರಿ, ತಾವು ಕೆಎಎಸ್ ಅಧಿಕಾರಿಯಾಗಿ ಉತ್ತಮ ಆಡಳಿತ ನೀಡುವ ಗುರಿ ಹೊಂದಿದ್ದೇವೆ. 2023-24ನೇ ಸಾಲಿನಲ್ಲಿ ಕೆಎಎಸ್ ಪ್ರಿಲಿಮ್ಸ್ ಮೇನ್ಸ್ ಪರೀಕ್ಷೆ ಉತ್ತೀರ್ಣರಾಗಿದ್ದೆವು. ಈ ಸಲ ಕೋಚಿಂಗ್ ಪಡೆದು, ಅತಿ ಉತ್ಸಾಹದಿಂದಲೇ ಪರೀಕ್ಷೆ ಬರೆಯುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು.
ಪರೀಕ್ಷೆಯಲ್ಲಿ ಈ ಸಲ ಹಿಂದಿನಂತೆ ಯಾವುದೂ ಆಗುವುದಿಲ್ಲವೆಂಬ ವಿಶ್ವಾಸವಿದೆ. ಯಾವುದೇ ಪರೀಕ್ಷೆಯಲ್ಲೂ ಅಕ್ರಮ ಆಗಬಾರದು. ಈ ಸಲದ ಪರೀಕ್ಷೆಯಲ್ಲಿ ಅಂತಹ ಯಾವುದೇ ಅಕ್ರಮಕ್ಕೆ ಅವಕಾಶ ಇರುವುದಿಲ್ಲ. ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಯುತ್ತದೆಂಬ ನಂಬಿಕೆ ನಮಗೆ ಇದೆ ಎಂದು ಪಿ.ಸುನಿಲ್, ಪಿ.ಅಶ್ವಿನಿ ತಿಳಿಸಿದರು.ಅಂಧ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಇಬ್ಬರು ಸಹಾಯಕರ ವ್ಯವಸ್ಥೆ ಮಾಡಲಾಗಿತ್ತು. ದ್ವಿತೀಯ ಪಿಯುಸಿ ಓದಿದ ಇಬ್ಬರು ವಿದ್ಯಾರ್ಥಿಗಳನ್ನು ಅಂಧ ಅಭ್ಯರ್ಥಿಗಳ ಸಹಾಯಕರಾಗಿ ಪರೀಕ್ಷೆಗೆ ಅವಕಾಶ ನೀಡಲಾಗಿತ್ತು. ಇಬ್ಬರೂ ಸಹೋದರ, ಸಹೋದರಿ ತುಂಬು ವಿಶ್ವಾಸದಿಂದಲೇ ಪರೀಕ್ಷೆಗೆ ಹಾಜರಾಗಿದ್ದು ವಿಶೇಷ.
- - --(ಫೋಟೋಗಳಿವೆ.)