ತಪಾಸಣೆಗೆ ನೆರವಾಗಿ: ಪೊಲೀಸರಿಗೆ ಕೆಪಿಎಸ್‌ಸಿ ಪತ್ರ

KannadaprabhaNewsNetwork |  
Published : Dec 20, 2023, 01:15 AM IST
ಕೆಪಿಎಸ್‌ಸಿ ಸಂಕೀರ್ಣ, ಬೆಂಗಳೂರು | Kannada Prabha

ಸಾರಾಂಶ

ಡಿ.30ರಂದು ಸಹಕಾರ ಸಂಘಗಳ ನಿರೀಕ್ಷಕರ ಹುದ್ದೆಗಳಿಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷಾ ಕೇಂದ್ರದಲ್ಲಿ ಖಾಸಗಿ ಏಜೆನ್ಸಿಯ ಸಿಬ್ಬಂದಿ ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ (ಎಚ್‌ಎಚ್‌ಎಂಡಿ) ಮೂಲಕ ಅಭ್ಯರ್ಥಿಗಳನ್ನು ತಪಾಸಣೆ ಮಾಡುತ್ತಾರೆ. ಈ ಕಾರ್ಯಕ್ಕೆ ಪೊಲೀಸರು ಸಹಕರಿಸಬೇಕು ಎಂದು ಕರ್ನಾಟಕ ಲೋಕಸೇವಾ ಆಯೋಗ ಕೋರಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ಲೋಕಸೇವಾ ಆಯೋಗ ವಿವಿಧ ಹುದ್ದೆಗಳ ಆಯ್ಕೆ ಸಂಬಂಧ ನಡೆಸುವ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ತಪಾಸಣೆಗೆ ಅಗತ್ಯ ಸಂಖ್ಯೆಯ ಪೊಲೀಸ್‌ ಸಿಬ್ಬಂದಿ ಒದಗಿಸುವಂತೆ ಆಯೋಗದ ಕಾರ್ಯದರ್ಶಿ ರಾಜ್ಯ ಪೊಲೀಸ್‌ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.

ಭಾನುವಾರ (ಡಿ.17) ಲೆಕ್ಕ ಸಹಾಯಕರ ಹುದ್ದೆಗಳಿಗೆ ನಡೆದ ಪರೀಕ್ಷೆ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ವಿದ್ಯಾರ್ಥಿಗಳಿಂದ ಅಭ್ಯರ್ಥಿಗಳನ್ನು ತಪಾಸಣೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪತ್ರ ಬರೆಯಲಾಗಿದೆ.

ಮುಂದಿನ ಬಾರಿ ನಡೆಸುವ ಪರೀಕ್ಷೆ ವೇಳೆ ಖಾಸಗಿ ಏಜೆನ್ಸಿ ಸಿಬ್ಬಂದಿ ಜೊತೆಗೆ ಪೊಲೀಸ್ ಸಹಕಾರ ಇರಬೇಕು. ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಒದಗಿಸಲು ಸಾಧ್ಯವಾಗದಿದ್ದರೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಗೃಹ ರಕ್ಷಕ ಸಿಬ್ಬಂದಿಯನ್ನು ಒದಗಿಸಿ ಎಂದು ಅವರು ಕೋರಿದ್ದಾರೆ.

ನಿಯಮಿತವಾಗಿ ತರಬೇತಿ ಪಡೆದು ಚುನಾವಣೆ ಕಾರ್ಯ, ಟ್ರಾಫಿಕ್ ನಿಯಂತ್ರಣ, ಪ್ರತಿಭಟನೆಗಳು, ವಿವಿಧ ಸರ್ಕಾರಿ ಕಚೇರಿಗಳಲ್ಲಿ ಭದ್ರತೆ ಸೇರಿದಂತೆ ಅನೇಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಕಾರಣ ಗೃಹ ರಕ್ಷಕ ಸಿಬ್ಬಂದಿಯನ್ನು ತಪಾಸಣೆ ಕಾರ್ಯಗಳಿಗೆ ಬಳಸಿಕೊಳ್ಳಲು ಆಯೋಗ ಮುಂದಾಗಿದೆ.

‘ಡಿ.30ರಂದು ಸಹಕಾರ ಸಂಘಗಳ ನಿರೀಕ್ಷಕರ ಹುದ್ದೆಗಳಿಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷಾ ಕೇಂದ್ರದಲ್ಲಿ ಖಾಸಗಿ ಏಜೆನ್ಸಿಯ ಸಿಬ್ಬಂದಿ ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ (ಎಚ್‌ಎಚ್‌ಎಂಡಿ) ಮೂಲಕ ಅಭ್ಯರ್ಥಿಗಳನ್ನು ತಪಾಸಣೆ ಮಾಡುತ್ತಾರೆ. ಈ ಕಾರ್ಯಕ್ಕೆ ಪೊಲೀಸರು ಸಹಕರಿಸಬೇಕು. ಪರೀಕ್ಷಾ ಕೇಂದ್ರದ ಸುತ್ತ ಜೆರಾಕ್ಸ್ ಅಂಗಡಿ ಮುಚ್ಚಿಸಬೇಕು ಹಾಗೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವಾಗಿ ಘೋಷಿಸಬೇಕು’ ಎಂದು ಪತ್ರದಲ್ಲಿ ಕೋರಿದ್ದಾರೆ.

ಖಾಸಗಿ ಏಜೆನ್ಸಿ ಜೊತೆ ಪೊಲೀಸರ ನೆರವುಪೂರ್ಣ ಪ್ರಮಾಣದಲ್ಲಿ ಪೊಲೀಸ್ ಇಲಾಖೆಯ ನೆರವು ಪಡೆದು ಪರೀಕ್ಷೆ ನಡೆಸಬೇಕು ಎಂದರೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಅದರ ಜೊತೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನೂರಾರು ಪರೀಕ್ಷಾ ಕೇಂದ್ರಗಳಿಗೆ ಬೃಹತ್ ಸಂಖ್ಯೆಯಲ್ಲಿ ಬೇಕಾಗುವ ಎಚ್‌ಎಚ್‌ಎಂಡಿ, ಬಾಡಿ ಕ್ಯಾಮೆರಾ, ಮೊಬೈಲ್ ನೆಟ್‌ವರ್ಕ್ ಜಾಮರ್, ಮುಖ ಗುರುತು ಹಾಜರಾತಿ ವ್ಯವಸ್ಥೆಗಳು ಪೊಲೀಸ್ ಇಲಾಖೆಯಲ್ಲಿ ಲಭ್ಯವಿಲ್ಲ. ಹೀಗಾಗಿ, ಈ ಎಲ್ಲವನ್ನು ಒದಗಿಸಬಲ್ಲಂತಹ ಖಾಸಗಿ ಏಜೆನ್ಸಿಗಳ ನೆರವು ಕೆಪಿಎಸ್‌ಸಿಗೆ ಅನಿವಾರ್ಯವಾಗಿದೆ. ಖಾಸಗಿ ಏಜೆನ್ಸಿ ಜೊತೆಗೆ ಪೊಲೀಸ್ ಇಲಾಖೆಯಿಂದ ಗೃಹ ರಕ್ಷಕರನ್ನು ಒದಗಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಎಸ್ ಲತಾಕುಮಾರಿ ತಿಳಿಸಿದರು.

ವಾಮಮಾರ್ಗ ಹಿಡಿಯುವುದನ್ನು ತಪ್ಪಿಸಲು ಅಭ್ಯರ್ಥಿಗಳ ತಪಾಸಣೆಗೆ ಪೊಲೀಸ್ ಸಿಬ್ಬಂದಿ ಸಹಕರಿಸಬೇಕು. ಇಲ್ಲದಿದ್ದರೆ ಗೃಹರಕ್ಷಕ ಸಿಬ್ಬಂದಿ ಸೇವೆ ಬಳಸಿಕೊಳ್ಳಲು ಕೋರಲಾಗಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಎಸ್. ಲತಾ ಕುಮಾರಿ ಹೇಳಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ