)
ಗಿರೀಶ್ ಮಾದೇನಹಳ್ಳಿ
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಬ್ಲ್ಯಾಕ್ ಮಾತ್ರವಲ್ಲ, ಅಭ್ಯರ್ಥಿಗಳಿಂದ ಲಕ್ಷಾಂತರ ರು. ಅನ್ನು ದಾಖಲೆ ಮೂಲಕ (ವೈಟ್) ಸ್ವೀಕರಿಸಿದ್ದೂ ಬೀದರ್ ಜಿಲ್ಲೆಯ ಬಿಜೆಪಿ ಮುಖಂಡ ಬಸವರಾಜ ಕನ್ನಾಳೆ ಕೊರಳಿಗೆ ಸಿಐಡಿ ತನಿಖೆಯ ಉರುಳು ಬಿಗಿಯಾಗಲು ಪ್ರಮುಖ ಕಾರಣ ಎನ್ನಲಾಗಿದೆ.
ಪಶುವೈದ್ಯಾಧಿಕಾರಿಗಳ ಹುದ್ದೆ ಕೊಡಿಸುವುದಾಗಿ ಕೆಲ ಅಭ್ಯರ್ಥಿಗಳ ಜತೆ ಬಸವರಾಜ ಮಾತುಕತೆ ನಡೆಸಿದ್ದ. ಈ ಡೀಲ್‌ಗೆ ಒಪ್ಪಿದ ಬಳಿಕ ತನ್ನ ಮೂವರು ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ಅಭ್ಯರ್ಥಿಗಳಿಂದ ತಲಾ 35 ಲಕ್ಷ ರು. ವರ್ಗಾಯಿಸಿಕೊಂಡಿದ್ದ. ತರುವಾಯ ಆ ಹಣ ಬಸವರಾಜನ ಬ್ಯಾಂಕ್ ಖಾತೆಗೆ ಜಮೆಯಾಗಿತ್ತು. ಈ ಹಣ ವರ್ಗಾವಣೆ ಪುರಾವೆ ಮುಂದಿಟ್ಟು ಆರೋಪಿಯ ವಿಚಾರಣೆ ನಡೆಸಲಾಗಿದೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ ತಿಳಿಸಿವೆ.ಬಸವರಾಜ ಬಂಧನಕ್ಕೂ ಮುನ್ನ ಆತನ ಪೂರ್ವಾಪರ ಮಾಹಿತಿ ಶೋಧಿಸಲಾಯಿತು. ಹಣಕಾಸು ಮೂಲಗಳ ಬಗ್ಗೆ ಕೆದಕಿದಾಗ ಆತನ ಖಾತೆಯಲ್ಲಿ ಜನವರಿ ತಿಂಗಳಲ್ಲಿ ಲಕ್ಷಾಂತರ ರು. ವಹಿವಾಟು ನಡೆದಿರುವುದು ಗೊತ್ತಾಯಿತು. ಪಶು ವೈದ್ಯಾಧಿಕಾರಿಗಳ ನೇಮಕಾತಿ ಲಿಖಿತ ಪರೀಕ್ಷೆಗೂ ಮುನ್ನ ಈ ಹಣದ ಹರಿವು ಆಗಿತ್ತು. ಈ ಶಂಕಾಸ್ಪದ ಖಾತೆಗಳ ಮೂಲ ಶೋಧಿಸಿದಾಗ ‘ಡೀಲ್ ವ್ಯವಹಾರ’ದ ಸತ್ಯ ಬಹಿರಂಗವಾಯಿತು. ಈ ಸುಳಿವಾಧರಿಸಿ ಬಸವರಾಜನ ಪತ್ತೆಗೆ ಕಾರ್ಯಾಚರಣೆ ನಡೆಸಲಾಯಿತು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏಳೆಂಟು ವರ್ಷಗಳಿಂದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಜತೆ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಬಿಜೆಪಿ ಮುಖಂಡ ಬಸವರಾಜ ಒಡನಾಟ ಹೊಂದಿದ್ದ. 2019ರಲ್ಲಿ ಬೀದರ್ ಜಿಪಂನಲ್ಲಿ ಜ್ಞಾನೇಂದ್ರ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ವೇಳೆ ಬಸವರಾಜನ ಪರಿಚಯವಾಗಿತ್ತು. ಅಂದು ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿದ್ದ ಕಾರಣ ಜಿಪಂ ಸಿಇಓ ಜೊತೆ ಬಸವರಾಜನಿಗೆ ಆತ್ಮೀಯತೆ ಬೆಳೆದಿದೆ. ಈ ಸ್ನೇಹ ಆ ಜಿಲ್ಲೆಯಿಂದ ಅವರು ವರ್ಗಾವಣೆ ಬಳಿಕವೂ ಮುಂದುವರೆಯಿತು. ಈ ಗೆಳೆತನದಲ್ಲೇ ಕೆಲ ಭ್ರಷ್ಟ ವ್ಯವಹಾರಗಳಿಗೆ ಇಬ್ಬರೂ ಜೋಡಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಜ್ಞಾನೇಂದ್ರ ಅವರ ಬ್ಯಾಂಕ್ ಖಾತೆಗಳಲ್ಲಿ ಹಣದ ವ್ಯವಹಾರಕ್ಕೆ ಖಚಿತ ಮಾಹಿತಿ ಸಿಕ್ಕಿಲ್ಲ. ಆದರೆ ಬಸವರಾಜನ ಬ್ಯಾಂಕ್ ಖಾತೆ ವಿವರಗಳು ಪತ್ತೆಯಾಗಿವೆ. ಈ ದಾಖಲೆ ಆಧರಿಸಿ ಅವರಿಬ್ಬರ ಮಧ್ಯೆ ಹಣಕಾಸು ವ್ಯವಹಾರಕ್ಕೆ ಮಾಹಿತಿ ಸಂಗ್ರಹಿಸಬೇಕಿದೆ ಎಂದು ಮೂಲಗಳು ತಿಳಿಸಿವೆ.
ಈ ಡೀಲ್ ಹಣದ ವಹಿವಾಟು ನಿರ್ವಹಣೆಗೆ ತನ್ನ ಮೂವರು ನಿಷ್ಠರನ್ನು ಬಸವರಾಜು ಬಳಸಿಕೊಂಡಿದ್ದ. ಈತನ ಬಂಧನ ಬಳಿಕ ಆತನ ಸಹಚರರು ತಲೆಮರೆಸಿಕೊಂಡಿದ್ದಾರೆ. ಹಣ ಕೊಟ್ಟವರಿಗೆ ಹುದ್ದೆ ಸಿಗಲಿದೆ ಎಂಬ ಆಫರ್ ಕೊಟ್ಟಿದ್ದಾರೆ. ಪಶು ವೈದ್ಯಾಧಿಕಾರಿಗಳ ಹುದ್ದೆ 40 ರಿಂದ 80 ಲಕ್ಷ ರು. ವರೆಗೆ ಬಿಕರಿಯಾಗಿದೆ. ಹಣ ನೀಡಿದವರನ್ನು ಪರೀಕ್ಷೆಗೂ ಮುನ್ನ ರೆಸಾರ್ಟ್‌ಗೆ ಕರೆದೊಯ್ದು ಪರೀಕ್ಷೆಗೆ ತರಬೇತಿ ಕೊಟ್ಟಿದ್ದರು ಎಂದು ಮೂಲಗಳು ವಿವರಿಸಿವೆ.
ವೈಟ್‌ನಲ್ಲಿ ವ್ಯವಹಾರ!