ಕೆ.ಆರ್.ಪೇಟೆ: ತಾಯಿ- ಮಗು ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ದಾನ

KannadaprabhaNewsNetwork |  
Published : May 22, 2025, 12:45 AM IST
21ಕೆಎಂಎನ್ ಡಿ13 | Kannada Prabha

ಸಾರಾಂಶ

ದಿ.ದುಂಡುಶೆಟ್ಟಿ ಲಕ್ಷ್ಮಮ್ಮ ಅವರು ಹಲವು ದಶಕಗಳ ಹಿಂದೆಯೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ನಿರ್ಮಾಣಕ್ಕೆ ಅಗತ್ಯವಾದ ಪ್ರಸ್ತುತ ನೂರಾರು ಕೋಟಿ ರು. ಬೆಲೆ ಬಾಳುವ ಭೂಮಿ ದಾನವಾಗಿ ನೀಡಿ ಪಟ್ಟಣದ ಪ್ರಗತಿಗೆ ಕಾರಣಕರ್ತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ತಾಯಿ- ಮಗು ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ದಾನ ನೀಡಿದ ಹೊಸಹೊಳಲಿನ ದಾನಿಗಳಾದ ಶ್ರೀಮತಿ ದುಂಡುಶೆಟ್ಟಿ ಲಕ್ಷ್ಮಮ್ಮ ಅವರ ಹೆಸರನ್ನಿಡಲು ಶಾಸಕ ಎಚ್.ಟಿ.ಮಂಜು ಸೂಚಿಸಿದರು.

ಪಟ್ಟಣದ ಶ್ರೀಮತಿ ದುಂಡುಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ತಾಲೂಕು ಆರೋಗ್ಯ ರಕ್ಷಾ ಸಭೆ ಅಧ್ಯಕ್ಷತೆ ಮಾತನಾಡಿ, ದಿ.ದುಂಡುಶೆಟ್ಟಿ ಲಕ್ಷ್ಮಮ್ಮ ಅವರು ಹಲವು ದಶಕಗಳ ಹಿಂದೆಯೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ನಿರ್ಮಾಣಕ್ಕೆ ಅಗತ್ಯವಾದ ಪ್ರಸ್ತುತ ನೂರಾರು ಕೋಟಿ ರು. ಬೆಲೆ ಬಾಳುವ ಭೂಮಿ ದಾನವಾಗಿ ನೀಡಿ ಪಟ್ಟಣದ ಪ್ರಗತಿಗೆ ಕಾರಣಕರ್ತರಾಗಿದ್ದಾರೆ ಎಂದರು.

ದಾನಿಗಳ ಸ್ಮರಣಾರ್ಥ ಈಗಾಗಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದುಂಡುಶೆಟ್ಟಿ ಲಕ್ಷ್ಮಮ್ಮ ಅವರ ಹೆಸರಿಡಲಾಗಿದೆ. ಇದೇ ಜಾಗದಲ್ಲಿ ತಾಯಿ-ಮಗು ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಕಾಮಗಾರಿ ಮುಗಿಯುವ ಹಂತದಲ್ಲಿದೆ. ತಾಯಿ-ಮಗು ಆಸ್ಪತ್ರೆಗೂ ದುಂಡುಶೆಟ್ಟಿ ಲಕ್ಷ್ಮಮ್ಮ ಅವರ ಹೆಸರನ್ನಿಡುವಂತೆ ಅವರ ಕುಟುಂಬಸ್ಥರು ಮನವಿ ಮಾಡಿದ್ದಾರೆ ಎಂದರು.

ದಾನಿಗಳ ಹೆಸರನ್ನಿಟ್ಟು ಸ್ಮರಿಸುವುದು ಸಮಾಜದ ಕರ್ತವ್ಯ. ಇದರಿಂದ ಇತರರಿಗೂ ದಾನಗುಣ ಬೆಳೆಯುತ್ತದೆ. ಆಸ್ಪತ್ರೆಗೆ ಭೂದಾನ ನೀಡಿದ ದುಂಡುಶೆಟ್ಟಿ ಲಕ್ಷ್ಮಮ್ಮ ಅವರ ಹೆಸರನ್ನಿಡುವಂತೆ ಶಾಸಕರು ಸೂಚಿಸಿ ಇದಕ್ಕೆ ಅಗತ್ಯವಾದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸಲಹೆ ನೀಡಿದರು.

ಆಸ್ಪತ್ರೆ ಡಿ ಗ್ರೂಪ್ ನೌಕರರು ಮತ್ತು ದಾದಿಯರ ಸೇವೆಯ ಬಗ್ಗೆ ಸಾಕಷ್ಟು ಸಾರ್ವಜನಿಕ ದೂರುಗಳಿವೆ. ಅಸ್ಪತ್ರೆಗೆ ಬರುವ ರೋಗಿಗಳ ಬಗ್ಗೆ ಸಿಬ್ಬಂದಿ ಸೌಜನ್ಯದ ನಡವಳಿಕೆಯನ್ನು ಪ್ರದರ್ಶಿಸಬೇಕು. ವೈದ್ಯರು ಮತ್ತು ಸಿಬ್ಬಂದಿ ಜನರ ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದರು.

ಈ ಹಿಂದೆ ಕರ್ತವ್ಯ ಸಲ್ಲಿಸಿ ವರ್ಗಾವಣೆಯಾಗಿರುವ ಹಲವು ವೈದ್ಯರನ್ನು ಇಲ್ಲಿನ ಜನ ಈಗಲೂ ಸ್ಮರಿಸುತ್ತಾರೆ. ವೈದ್ಯರು ನಿಸ್ವಾರ್ಥ ಸೇವೆ ಮೂಲಕ ನಿತ್ಯ ಸ್ಮರಣೀಯರಾಗಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ಅಗತ್ಯವಾದ ಔಷಧಿಗಳ ಚೀಟಿಯನ್ನು ಹೊರಗಿನ ಖಾಸಗಿ ಮೆಡಿಕಲ್ ಸ್ಟೋರ್ ಗಳಿಗೆ ಕಳುಹಿಸದೆ ಆಸ್ಪತ್ರೆಯಲ್ಲಿಯೇ ಅಗತ್ಯ ಔಷಧಿ ನೀಡಬೇಕು ಎಂದರು.

ರೋಗಿಗಳಿಗೆ ಅಗತ್ಯ ಔಷಧಿಗಳು ಕೊರತೆಯಾಗದಂತೆ ಪ್ರಸ್ತಾವನೆಯನ್ನು ಇಲಾಖೆಗೆ ಸಲ್ಲಿಸಿ ಸಂಗ್ರಹಿಸಿಟ್ಟುಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳು ಪ್ರಾಮಾಣಿಕವಾಗಿ ಜನಸೇವೆ ಮಾಡಿದರೆ ಬಡ ರೋಗಿಗಳು ಖಾಸಗಿ ವೈದ್ಯರು ಮತ್ತು ಖಾಸಗಿ ಅಸ್ಪತ್ರೆಗಳಿಗೆ ಹೋಗುವುದು ನಿಲ್ಲುತ್ತದೆ ಎಂದರು.

ಆಸ್ಪತ್ರೆಯಲ್ಲಿ ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಬೇಕು. ಪ್ರತಿ ನಿತ್ಯ ಒಳರೋಗಿಗಳ ಹಾಸಿಗೆ ಮೇಲಿನ ಬೆಡ್‌ಶೀಟ್ ಗಳನ್ನು ಬದಲಾಯಿಸಬೇಕು. ಮಂಡ್ಯ, ಹಾಸನ ಮತ್ತು ಮೈಸೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಅಗತ್ಯವಾದ ಮತ್ತು ಗರ್ಭಿಣಿ ಮಹಿಳೆಯರಿಗೆ ಉಚಿತ ಆಂಬುಲೆನ್ಸ್ ಸೇವೆಯಿದ್ದು, ಇದರ ಸೌಲಭ್ಯವನ್ನು ರೋಗಿಗಳಿಗೆ ತಲುಪಿಸಬೇಕು ಎಂದರು.

ಸಭೆಗೂ ಮುನ್ನ ಶಾಸಕರು ಸಮಿತಿ ಸದಸ್ಯರೊಂದಿಗೆ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ, ಒಳರೋಗಿಗಳ ವಿಭಾಗ ಸೇರಿದಂತೆ ಹಲವು ವಿಭಾಗಗಳಿಗೆ ಭೇಟಿ ನೀಡಿ ರೋಗಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದರು.

ಸಭೆಯಲ್ಲಿ ಪಾಂಡವಪುರ ಎಸಿ ಡಾ.ಕೆ.ಆರ್.ಶ್ರೀನಿವಾಸ್, ಪುರಸಭೆ ಅಧ್ಯಕ್ಷೆ ಪಂಕಜ ಪ್ರಕಾಶ್, ತಾಪಂ ಇಒ ಕೆ.ಸುಷ್ಮಾ, ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್, ಸಮಿತಿ ಸದಸ್ಯರಾದ ಅಣ್ಣಯ್ಯ, ಹೆತ್ತುಗೋನಹಳ್ಳಿ ನಾರಾಯಣ, ಮಂಜುನಾಥ್, ಪುಟ್ಟರಾಜು, ಶಾಂತ, ಇಲಿಯಾಸ್ ಅಹಮದ್ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮ ಡ್ರಗ್ಸ್‌ ವಾಸನೆ ತಡೆಗೆ ನಾಯಿಗಳ ಮಲಮೂತ್ರ!
ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಭರದ ಸಿದ್ಧತೆ