ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಬಸ್ ನಿಲ್ದಾಣದಲ್ಲಿ ಹಲವು ವರ್ಷಗಳಿಂದ ಭಾರೀ ಮಳೆ ಸುರಿದಾಗಲೆಲ್ಲ ಈ ಗೋಳು ತಪ್ಪಿದ್ದಲ್ಲ. ಮಳೆಯಿಂದಾಗಿ ನಿಲ್ದಾಣದೊಳಗಿನ ಪಾರ್ಕಿಂಗ್ ಸ್ಥಳಕ್ಕೂ ನೀರು ನುಗ್ಗಿ ವಾಹನಗಳು ಜಲಾಘಾತಕ್ಕೆ ಒಳಗಾಗಿದ್ದವು.
ಬಸ್ ನಿಲ್ದಾಣದ ಆವರಣಕ್ಕೆ ನೀರು ತುಂಬಿಕೊಂಡು ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಬಸ್ಸುಗಳು ಒಳಗಡೆ ಹೋಗಲಾಗದೆ ಮುಖ್ಯ ರಸ್ತೆಯಲ್ಲೇ ಜನರನ್ನು ಇಳಿಸಿ ವಾಪಸ್ ತೆರಳುತ್ತಿದ್ದವು. ಇದರಿಂದ ಜನರು ಬಸ್ ಹತ್ತಲು ಇಳಿಯಲು ಪರದಾಡುವಂತಾಯಿತು.1990ರ ದಶಕದಲ್ಲಿ ಪುರಸಭೆಗೆ ಸೇರಿದ ಸಾರ್ವಜನಿಕ ಪಾರ್ಕ್ ಜಾಗದಲ್ಲಿ ಖಾಸಗಿ ಬಸ್ ನಿಲ್ದಾಣ, ವಾಣಿಜ್ಯ ಮಳಿಗೆಗಳು ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಕೆರೆ ಪ್ರದೇಶದಲ್ಲಿ ಸಾರಿಗೆ ಸಂಸ್ಥೆ ಅವೈಜ್ಞಾನಿಕವಾಗಿ ಬಸ್ ನಿಲ್ದಾಣ ನಿರ್ಮಿಸಿದ್ದರಿಂದ ಜೋರು ಮಳೆ ಬಂದಾಗಲೆಲ್ಲಾ ಬಸ್ ನಿಲ್ದಾಣ ಕೆರೆಯಾಗಿ ಪರಿವರ್ತನೆಯಾಗಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಬಸ್ ನಿಲ್ದಾಣ ಮಳೆ ನೀರು ತುಂಬಿ ಕೆರೆಯಾದಾಗ ಕ್ಷೇತ್ರದ ಜನಪ್ರತಿನಿಧಿಗಳು ಮತ್ತು ಸಂಸ್ಥೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಹೋಗುತ್ತಿದ್ದಾರೆಯೇ ವಿನಹಃ ನೀರು ಬಸ್ ನಿಲ್ದಾಣದೊಳಕ್ಕೆ ಹರಿದು ಬರುವುದನ್ನು ತಡೆಯಲು ಯಾವುದೇ ಪರಿಹಾರ ಮಾರ್ಗಗಳನ್ನು ಕಂಡುಕೊಂಡಿಲ್ಲ.
ನಿಲ್ದಾಣದ ಒಳಗೆ ನಿರ್ಮಿಸಿರುವ ಚರಂಡಿಯಿಂದ ಪಕ್ಕದ ಹಳ್ಳಕ್ಕೆ ನೀರು ಸರಾಗವಾಗಿ ಹರಿಯಲು ಸಾರಿಗೆ ಸಂಸ್ಥೆ ಕ್ರಮ ವಹಿಸಬೇಕು. ಮಳೆಗಾಲದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದ ಪರಿಣಾಮ ಜೋರು ಮಳೆಯಾದರೆ ಸಾಕು ನಿಲ್ದಾಣ ಜಲಾವೃತ್ತವಾಗಿ ಕೆರೆಯಾಗಿ ಪರಿವರ್ತನೆಯಾಗುತ್ತಿದೆ.