ರಾಷ್ಟೀಯತೆ, ಧರ್ಮದ ಜಾಗೃತಿಗಾಗಿ ಕ್ರಾಂತಿವೀರ ಬ್ರಿಗೇಡ್

KannadaprabhaNewsNetwork | Published : Dec 20, 2024 12:46 AM

ಸಾರಾಂಶ

ಬಸವನಬಾಗೇವಾಡಿ ಪಟ್ಟಣದಲ್ಲಿ ಫೆ.೪ ರಂದು ೧೦೦೮ ಸಾಧು ಸಂತರ ಪಾದಪೂಜೆಯೊಂದಿಗೆ ರಾಷ್ಟೀಯತೆ, ಧರ್ಮದ ಜಾಗೃತಿಗಾಗಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಗೊಳ್ಳಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದಲ್ಲಿ ಫೆ.೪ ರಂದು ೧೦೦೮ ಸಾಧು ಸಂತರ ಪಾದಪೂಜೆಯೊಂದಿಗೆ ರಾಷ್ಟೀಯತೆ, ಧರ್ಮದ ಜಾಗೃತಿಗಾಗಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಗೊಳ್ಳಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಪಟ್ಟಣದ ಗುರುಕೃಪಾ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗುರುವಾರ ಕಾರ್ಯಕ್ರಮದ ಸ್ಥಳ ವೀಕ್ಷಣೆ ನಡೆಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದು ಧರ್ಮದ ರಕ್ಷಣೆ, ಹಿಂದು ಸಮಾಜಕ್ಕೆ ತೊಂದರೆಯಾದರೇ ಅಲ್ಲಿ ಧ್ವನಿ ಎತ್ತುವುದು. ಸಮಾಜದ ಹಿಂದುಳಿದ ದಲಿತ ಹಾಗೂ ಎಲ್ಲ ವರ್ಗದ ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಉದ್ಧೇಶಗಳನ್ನು ಮುಂದಿಟ್ಟುಕೊಂಡು ಉತ್ತರ ಕರ್ನಾಟಕದ ಎಲ್ಲ ಮಠಾಧೀಶರು ಸಮಾಲೋಚನೆ ಮಾಡಿದ ನಂತರ ಕ್ರಾಂತಿವೀರ ಬ್ರಿಗೇಡ್ ಅಸ್ತಿತ್ವ ಬಂದಿದೆ. ಈ ಬ್ರಿಗೇಡ್‌ನ್ನು ೨೦೨೫ನೇ ಫೆಬ್ರುವರಿ ೪ ರಂದು ಕ್ರಾಂತಿಪುರುಷ ವಿಶ್ವಗುರು ಬಸವೇಶ್ವರರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಉದ್ಘಾಟಿಸಲಾಗುವುದು. ೧೨ನೇ ಶತಮಾನದಲ್ಲಿ ಬಸವೇಶ್ವರರು ಸಮಾನತೆಯನ್ನು ತರಲು ಕ್ರಾಂತಿ ಮಾಡಿದರು. ಈ ಭಾಗದ ಮಠಾಧೀಶರು ಹಿಂದು ಸಮಾಜ-ಧರ್ಮದ ರಕ್ಷಣೆಗಾಗಿ, ದೇಶದ ರಕ್ಷಣೆಗಾಗಿ ಕ್ರಾಂತಿಪುರುಷನ ನೆಲದಿಂದಲೇ ಕ್ರಾಂತಿವೀರ ಬ್ರಿಗೇಡ್ ಆರಂಭವಾಗಬೇಕೆಂಬ ಆಶಯ ಹೊದಿದ್ದಾರೆ. ಈ ಬ್ರಿಗೇಡ್ ಉದ್ಘಾಟನೆ ದಿನ ಲಕ್ಷಾಂತರ ಜನರು ಸೇರುತ್ತಾರೆ ಹಾಗೂ ಸಮಾವೇಶಕ್ಕೆ ಆಗಮಿಸುವ ಸ್ವಾಮೀಜಿಗಳನ್ನು ೧೦೦೧ ಕುಂಭಮೇಳದೊಂದಿಗೆ ಸ್ವಾಗತಿಸಲಾಗುವುದು. ಒಟ್ಟಾರೆಯಾಗಿ ಬಸವ ಜನ್ಮಸ್ಥಳದಲ್ಲಿ ಫೆ.೪ ರಂದು ವಿಶೇಷ ಕಾರ್ಯಕ್ರಮ ಜರುಗಲಿದೆ ಎಂದರು.

ಮಕಾಣಪುರ ಗುರುಪೀಠದ ಸೋಮೇಶ್ವರ ಸ್ವಾಮೀಜಿ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಜಾತ್ಯಾತೀತ, ಪಕ್ಷಾತೀತವಾಗಿ ಭಾಗವಹಿಸಬೇಕು. ನಾವು ಯಾವುದೇ ರಾಜಕೀಯ ಮಾಡದೇ ಕೇವಲ ಧರ್ಮದ ರಕ್ಷಣೆ ಮಾಡುವುದೇ ನಮ್ಮ ಉದ್ದೇಶವಾಗಿದೆ. ಈಗಾಗಲೇ ಬ್ರಿಗೇಡ್‌ನ ರಾಜ್ಯಧ್ಯಕ್ಷರಾಗಿ ಬಸವರಾಜ ಬಾಳಿಕಾಯಿ ಹಾಗೂ ರಾಜ್ಯ ಕಾರ್ಯಧ್ಯಕ್ಷರಾಗಿ ಕೆ.ಕಾಂತೇಶ ಈಶ್ವರಪ್ಪ ವಕ್ತಾರಾಗಿ ಈರಣ್ಣ ಹಿರೇಗೌಡರ ಆಯ್ಕೆ ಆಗಿದ್ದಾರೆ. ಮುಂದಿನ ದಿನಮಾನಗಳಲ್ಲಿ ಮಹಿಳಾ ಸಮಿತಿಯನ್ನು ರಚಿಸಲಾಗುವುದು. ಈ ನಿಟ್ಟಿನಲ್ಲಿ ಬ್ರಿಗೇಡ್‌ನ ಪ್ರತಿಯೊಬ್ಬ ಕಾರ್ಯಕರ್ತನು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಬೇಕು ಎಂದು ಕೋರಿದರು.ಈ ಸಂದರ್ಭದಲ್ಲಿ ಅಮರೇಶ್ವರ ಮಹಾರಾಜರು, ಮಾದುಲಿಂಗ ಮಹಾರಾಜ, ಬಿಳಿಆನಿ ಸಿದ್ದಮಹಾರಾಜರು, ಅಮರಗೊಂಡ ಮಹಾರಾಜರು, ಚಿನ್ಮಾಯಾನಂದ ಮಹಾರಾಜರು, ಜಗದೀಶಾನಂದ ಮಹಾರಾಜರು, ವಸಿಷ್ಠ ಸ್ವಾಮಿ, ಜಮಖಂಡಿಯ ಅಲ್ಲಮಪ್ರಭು ಸ್ವಾಮೀಜಿ, ಮದಗೊಂಡ ಮಹಾರಾಜರು, ಸಿದ್ದು ಬುಳ್ಳಾ ರಾಜಶೇಖರ ಯರನಾಳ, ಕಲ್ಲು ಸೊನ್ನದ, ಮುತ್ತುರಾಜ ಹಾಲಿಹಾಳ, ಸುನೀಲ ಜಮಖಂಡಿ, ಅಪ್ಪು ವಾಡೇದ, ಶಿಲ್ಪಾ ಕುದರಗೊಂಡ, ರಮೇಶ ಪೂಜಾರಿ, ಅಮರೇಶ ಕಾಮನಕೇರಿ, ರಾಜು ಬಿರಾದಾರ, ಕಾಶಿನಾಥ ಚನ್ನವೀರ, ಸಿದ್ದಪ್ಪ ಮುದಕಣ್ಣವರ, ಸಿದ್ರಾಮಪ್ಪ ಹೊರ್ತಿ ಇತರರು ಇದ್ದರು.

Share this article