ಶರಣ ಸಂಸ್ಕೃತಿ ಉತ್ಸವದಲ್ಲಿ ಕೃಷಿ ಮೇಳ

KannadaprabhaNewsNetwork | Published : Sep 12, 2024 1:48 AM

ಸಾರಾಂಶ

ಮುರುಘಾಮಠಲ್ಲಿ ಕೃಷಿ ಮೇಳ ಕುರಿತು ನಡೆದ ಸಭೆಯಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಆಯೋಜಿಸಿರುವ ಕೃಷಿ ಮೇಳ ಯಶಸ್ಸಿಗೆ ಎಲ್ಲರೂ ಶ್ರಮಿಸುವಂತೆ ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.

ಕೃಷಿ ಮೇಳ ಆಯೋಜನೆ ಹಿನ್ನಲೆ ಮುರುಘಾಮಠದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರ, ಸಂಘ-ಸಂಸ್ಥೆ, ಮಠಗಳಿಂದ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಿದರು ಅವುಗಳಿಗೆ ಒಂದು ಚೌಕಟ್ಟು ಇರುತ್ತದೆ. ಚಿತ್ರದುರ್ಗ ಮುರುಘಾಮಠವು ತನ್ನ ಪರಿಧಿಯೊಳಗೆ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ಸಾರ್ವಜನಿಕರ ಹಿತಕೋಸ್ಕರ ಶ್ರಮಿಸುತ್ತಿದೆ. ಅದರ ಒಂದು ಭಾಗವೇ ಶರಣ ಸಂಸ್ಕೃತಿ ಉತ್ಸವ ಎಂದರು.

ಶರಣ ಸಂಸ್ಕೃತಿ ಉತ್ಸವವು ಬರುವ ಅ.5 ರಿಂದ 13ರವರೆಗೆ ನಡೆಯಲಿದ್ದು, ಅದರಲ್ಲಿ ಕೃಷಿ ಮೇಳವು ಗಮನ ಸೆಳೆಯುವ ಅಂಶವಾಗಿದೆ.

ಕೃಷಿ, ತೋಟಗಾರಿಕೆ, ಕೈಗಾರಿಕೆಗೆ ಸಂಬಂಧಪಟ್ಟ ಸರ್ಕಾರ, ಖಾಸಗಿ ಇಲಾಖಾವಾರು ಅಧಿಕಾರಿಗಳು ಮೇಳಕ್ಕೆ ಕೈ ಜೋಡಿಸಬೇಕು. ಉತ್ಸವ, ವಿವಿಧ ಗೋಷ್ಠಿಗಳು ಯಾಂತ್ರಿಕವಾಗಿರದೆ, ಅದರ ಫಲಶ್ರುತಿ ಸಾರ್ವಜನಿಕರಿಗೆ ತಲುಪಬೇಕು ಎಂದು ತಿಳಿಸಿದರು.

ಪೀಠ ಪರಂಪರೆಯ ಎಲ್ಲ ಶ್ರೀಗಳು ಸಹ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿರುವುದನ್ನು ನಾವು ಕಾಣಬಹುದಾಗಿದೆ. ಹಾಗಾಗಿ ಆ ಪದ್ಧತಿಯನ್ನು ಉಳಿಸುವ ಸಲುವಾಗಿ ಮಾಡುವ ಪ್ರತಿ ಚಟುವಟಿಕೆಗಳಿಗೆ ಶ್ರೀಮಠದ ಸಹಕಾರ ಇರುತ್ತದೆ. ಪೀಠದ 24ನೇ ಜಗದ್ಗುರುಗಳಾಗಿದ್ದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವ ಈ ಸಂದರ್ಭದಲ್ಲಿ ಇರುವುದರಿಂದ ಅವರೂ ಸಹ ಕೃಷಿ, ಕೈಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿದ್ದರು ಎನ್ನುವುದು ವಿಶೇಷ ಎಂದರು.

ಸಭೆಯಲ್ಲಿ ಶ್ವಾನ ಹಾಗೂ ಜೋಡೆತ್ತುಗಳ ಪ್ರದರ್ಶನದ ಬಗ್ಗೆ ಪಶುಪಾಲನೆ ಇಲಾಖೆ ಡಾ.ಮುರುಗೇಶ್ ಮಾಹಿತಿ ನೀಡಿದರು.

ಆಯುಷ್ ಇಲಾಖೆಯ ಡಾ.ಶಿವಕುಮಾರ್ ಮಾತನಾಡಿ, ಜನರಲ್ಲಿ ಈಗ ಔಷಧೀಯ ಸಸ್ಯಗಳ ಬಗ್ಗೆ ಅರಿವು ಮೂಡುತ್ತಿರುವ ಕಾರಣ ಮತ್ತಷ್ಟು ಜಾಗೃತಿ ಮತ್ತು ಮಾರುಕಟ್ಟೆ ವಿಸ್ತರಣೆ ಮೂಡಿಸುವ ಸಲುವಾಗಿ ಪ್ರದರ್ಶನಕ್ಕೆ ವಿಶೇಷ ಮಳಿಗೆಗಳನ್ನು ಒದಗಿಸಬೇಕು ಎಂದು ಕೇಳಿಕೊಂಡರು. ತೋಟಗಾರಿಕೆ, ಮೀನುಗಾರಿಕೆಯ ಅಧಿಕಾರಿಗಳು ಭಾಗವಹಿಸಿ ತಮ್ಮ ಸಲಹೆ ಹೇಳಿದರು.

ಸಾವಯವ ಪದಾರ್ಥಗಳ ಮಾಹಿತಿ, ಮಾರುಕಟ್ಟೆ ಮತ್ತು ಪ್ರದರ್ಶನದ ಬಗ್ಗೆ ಅಧಿಕಾರಿ ಮೌನೇಶ್ ಪತ್ತಾರ್ ತಿಳಿಸಿದರು.

ವರ್ಷಾ ಏಜೆನ್ಸೀಸ್‌ನ ರಂಗಸ್ವಾಮಿ ಮಾತನಾಡಿ, ರೈತರಿಗೆ ಹಾಗೂ ತೋಟಗಾರಿಕೆ ಬೆಳೆಗಾರರಿಗೆ ಕಡಿಮೆ ದರದಲ್ಲಿ ಬೇಕಾದ ಸಾಮಾನುಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ಧರ್ಮಸ್ಥಳ ಸ್ವಸಹಾಯ ಸಂಘಗಳ ಉತ್ಪನ್ನಗಳನ್ನು ಇಡುವುದಾಗಿ ವ್ಯವಸ್ಥಾಪಕಿ ಮಂಜುಳಾ ತಿಳಿಸಿದರು. ಸಂಘಟಕ ಪಿ.ವೀರೇಂದ್ರ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.

Share this article