ಶಿಕ್ಷಕರನ್ನು ಗೌರವಿಸುವುದು ಆರೋಗ್ಯವಂತ ಸಮುದಾಯದ ಲಕ್ಷಣ

KannadaprabhaNewsNetwork | Published : Sep 12, 2024 1:48 AM

ಸಾರಾಂಶ

ಮಕ್ಕಳು ಸಾಂಸ್ಕೃತಿಕವಾಗಿ ಹೇಗೆ ಮುನ್ನಡೆ ಸಾಧಿಸುತ್ತಾರೆ ಎಂಬುದಕ್ಕೆ ಈ ಶಾಲೆ ಮಾದರಿ

ಮುಂಡರಗಿ: ತನು, ಮನ,ಧನ ನೀಡಿ ಅದರ ಸರ್ವಾಂಗೀಣ ವಿಕಾಸಕ್ಕೆ ಸಹಕರಿಸುವುದು, ಶಿಕ್ಷಕರನ್ನು ಸನ್ಮಾನಿಸುವುದು, ಗೌರವಿಸುವುದು ಆರೋಗ್ಯವಂತ ಸಮುದಾಯದ ಲಕ್ಷಣವಾಗಿದೆ ಎಂದು ಮುಂಡರಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಸಿ ಹೇಳಿದರು.

ಅವರು ಮುಂಡರಗಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮೇನಹಳ್ಳಿಯಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ನಡೆದ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನ ಹಾಗೂ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ಸಮುದಾಯದೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡು ಮಕ್ಕಳಿಗೆ ಮೌಲ್ಯ ಕಲಿಸುವುದರ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಕೆಲಸ ಮಾಡಿದರೆ ಒಂದು ಶಾಲೆ ಹೇಗೆ ಅಭಿವೃದ್ಧಿ ಹೊಂದುತ್ತದೆ ಮತ್ತು ಮಕ್ಕಳು ಸಾಂಸ್ಕೃತಿಕವಾಗಿ ಹೇಗೆ ಮುನ್ನಡೆ ಸಾಧಿಸುತ್ತಾರೆ ಎಂಬುದಕ್ಕೆ ಈ ಶಾಲೆ ಮಾದರಿಯಾಗಿದೆ ಎಂದರು.

ಅತಿಥಿಯಾಗಿ ಪಾಲ್ಗೊಂಡು ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ ಮಾತನಾಡಿ, ಮಕ್ಕಳಿಗೆ ಪಠ್ಯದ ಜತೆಗೆ ಸಹಪಠ್ಯ ಚಟುವಟಿಕೆಗಳ ಮೂಲಕ ಕಲಿಕೆಯಲ್ಲಿ ಸಕ್ರಿಯಗೊಳಿಸುವ ಶಿಕ್ಷಕರು ಮಕ್ಕಳಿಗೆ ಹತ್ತಿರವಾಗುತ್ತಾರೆ. ವಿದ್ಯಾರ್ಥಿಗಳು ಹೇಳಿದ್ದು, ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುತ್ತಾರೆ. ಹಾಗಾಗಿ ಶಿಕ್ಷಕರು ಆರೋಗ್ಯಕರ ಅನುಸರಣೀಯ ಆಕರ್ಷಕ ವ್ಯಕ್ತಿತ್ವದವರಾಗಿರಬೇಕು. ಬುದ್ಧಿಯ ಪಾಠಕ್ಕಿಂತ ಹೃದಯದ ಪಾಠ ಹೆಚ್ಚು ಪರಿಣಾಮ ಬೀರುತ್ತದೆ ಎಂದರು.

ಶಾಲಾ ಮುಖ್ಯೋಪಾಧ್ಯಾಯ ಡಾ. ನಿಂಗು ಸೊಲಗಿ ಮಾತನಾಡಿ, ಸಂವೇದನಾಶೀಲ ಶಿಕ್ಷಕ ವೃತ್ತಿಯಲ್ಲಿ ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕಾರ್ಯ ನಿರ್ವಹಿಸಿದಲ್ಲಿ ಮಕ್ಕಳ ಸರ್ವಾಂಗೀಣ ವಿಕಾಸದೊಂದಿಗೆ ಸಮುದಾಯ ನಮ್ಮೊಟ್ಟಿಗೆ ನಿಲ್ಲುತ್ತದೆ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಎಂದರು.

ಪ್ರಶಸ್ತಿ-ಸನ್ಮಾನ:

ಶಾಲೆಯ ಹಿರಿಯ ಶಿಕ್ಷಕ ಪಿ.ಎಂ.ಲಾಂಡೆ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಫಡ್ನೇಸಿ ಸಮುದಾಯದಿಂದ ಕೊಡಮಾಡಿದ ಶಿಸ್ತಿನ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಿದರು. 1995 ರಿಂದ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಡಗುಪ್ಪಿಯಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿ, ಪ್ರಸ್ತುತ 13 ವರ್ಷಗಳಿಂದ ಮುಂಡರಗಿ ಪಟ್ಟಣದ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಸ್ತು, ಪ್ರಾಮಾಣಿಕತೆ ಮೈಗೂಡಿಸಿಕೊಂಡು ಸಹ ವೃತ್ತಿಬಂಧುಗಳೊಟ್ಟಿಗೆ ಸೌಹಾರ್ಧಯುತವಾಗಿ ಬೆರೆತು ಶಾಲಾ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಮಕ್ಕಳ ಶಿಕ್ಷಣ ಹಾಗೂ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದು. ಇವರ ಸೇವೆ ಶ್ಲಾಘಿಸಿ ಶಾಲಾ ಸಿಬ್ಬಂದಿ, ಎಸ್.ಡಿ.ಎಂ.ಸಿ.ಬಳಗ ಹಾಗೂ ಮಕ್ಕಳ ಸಮ್ಮುಖದಲ್ಲಿ ಶಿಕ್ಷಕ ದಿನಾಚರಣೆಯ ಅಂಗವಾಗಿ ಶಾಲಾ ಶಿಸ್ತಿನ ಶಿಕ್ಷಕ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಮಹೇಶ ಬಾಗಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಸದಸ್ಯರಾದ ಗಂಗಮ್ಮ ಹಲವಾಗಲಿ, ಹಿರಿಯರಾದ ದೊಡ್ಡಲ್ಲಪ್ಪ ಜಂಬಗಿ ಮಾತನಾಡಿದರು. ಪುರಸಭೆ ಸದಸ್ಯ ದೇವಕ್ಕ ದಂಡಿನ, ಎಸ್.ಡಿ.ಎಂ.ಸಿ.ಸದಸ್ಯರಾದ ಉಮೇಶ ದಂಡಿನ, ರಾಮಣ್ಣ ತಿಗರಿ, ಶಿಕ್ಷಕಿಯರಾದ ಪಿ.ಆರ್.ಗಾಡದ, ಶಿವಲೀಲಾ ಅಬ್ಬಿಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಬಿ.ಎಚ್. ಹಲವಾಗಲಿ ಸ್ವಾಗತಿಸಿದರು. ಎಂ.ಆರ್.ಗುಗ್ಗರಿ ನಿರೂಪಿಸಿದರು.

Share this article