ಕನ್ನಡಪ್ರಭ ವಾರ್ತೆ ವಿಜಯಪುರ
ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ ಎಂಬ ಘೋಷವಾಕ್ಯದೊಂದಿಗೆ ಈ ಬಾರಿ ಕೃಷಿ ಮಹಾವಿದ್ಯಾಲಯದಲ್ಲಿ ಜ.೨೧ ರಿಂದ ಮೂರು ದಿನಗಳ ಕಾಲ ಬೃಹತ್ ಕೃಷಿ ಮೇಳ ನಡೆಯಲಿದೆ ಎಂದು ಕೃಷಿ ಮೇಳದ ಅಧ್ಯಕ್ಷ ಹಾಗೂ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎ.ಭೀಮಪ್ಪ ಹೇಳಿದರು.ಹಿಟ್ಟಿನಹಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೧ ಗಂಟೆಗೆ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಕೃಷಿಮೇಳ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಸಚಿವ ಶಿವಾನಂದ ಪಾಟೀಲ ಕೃಷಿ ಪ್ರಕಟಣೆಗಳನ್ನು ಬಿಡುಗಡೆಗೊಳಿಸಲಿದ್ದಾರೆ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟದೊಂಡ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ-೨ ಪ್ರಕಾಶ ಹುಕ್ಕೇರಿ, ಸಂಸದರಾದ ರಮೇಶ ಜಿಗಜಿಣಗಿ, ಶಾಸಕರುಗಳಾದ ಯಶವಂತರಾಯಗೌಡ ಪಾಟೀಲ, ಬಸನಗೌಡ ಆರ್.ಪಾಟೀಲ ಯತ್ನಾಳ, ಹಣಮಂತ ನಿರಾಣಿ, ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ, ಪಿ.ಎಚ್.ಪೂಜಾರ, ಅಪ್ಪಾಜಿ ಸಿ.ಎಸ್.ನಾಡಗೌಡ, ಭೀಮನಗೌಡ (ರಾಜುಗೌಡ) ಬಸನಗೌಡ ಪಾಟೀಲ, ಆಶೋಕ ಮನಗೂಳಿ ಹಿಟ್ಟಿನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ರವಿಕುಮಾರ ಸಾಬು ಕಡಿಮನಿ ಭಾಗವಹಿಸಲಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ ಭಾಗವಹಿಸಲಿದ್ದಾರೆ ಎಂದರು.ಜ.೨೩ರಂದು ಮಧ್ಯಾಹ್ನ ೩ ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ನಾಗಠಾಣ ಶಾಸಕರಾದ ವಿಠ್ಠಲ ಕಟದೊಂಡ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜ.೨೧ ರಂದು ಮಧ್ಯಾಹ್ನ ೨ ಗಂಟೆಯಿಂದ ಹವಾಮಾನ ವೈಪರಿತ್ಯದ ಪರಿಣಾಮಗಳು ಮತ್ತು ನಿರ್ವಹಣೆ, ಬರ ನಿರ್ವಹಣೆಗಗಿ ಕೃಷಿ ತಂತ್ರಜ್ಞಾನಗಳು, ರೈತರಿಂದ ರೈತರಿಗೆ ಕಾರ್ಯಕ್ರಮ-ಪ್ರಶಸ್ತಿ ವಿಜೇತ ರೈತರಿಂದ ಅನುಭವ ಹಂಚಿಕೆ, ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಜ.೨೨ ರಂದು ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೧ ಗಂಟೆವರೆಗೆ ಸಾವಯವ ಮತ್ತು ನೈಸರ್ಗಿಕ ಕೃಷಿ, ರೈತರಿಂದ ರೈತರಿಗೆ ಕಾರ್ಯಕ್ರಮ--ಪ್ರಶಸ್ತಿ ವಿಜೇತ ರೈತರಿಂದ ಅನುಭವ ಹಂಚಿಕೆ, ಕಾರ್ಯಕ್ರಮಗಳು ಹಾಗೂ ಜ.೨೩ ರಂದು ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೧ ಗಂಟೆವರೆಗೆ ಸುಸ್ಥಿರ ಕೃಷಿಗಾಗಿ ಉಪ ಕಸುಬುಗಳು, ಪ್ರಶಸ್ತಿ ವಿಜೇತ ರೈತರಿಂದ ಅನುಭವ ಹಂಚಿಕೆ, ಕಾರ್ಯಕ್ರಮಗಳು ನಡೆಯಲಿವೆ ಎಂದರು.ಈ ಬಾರಿಯ ಕೃಷಿ ಮೇಳದಲ್ಲಿ ರೈತರಿಗೆ ಕೃಷಿ ಪರಿಕರಗಳ ಮಾರಾಟ ಸೇರಿದಂತೆ ಕೃಷಿ ಉತ್ಪನ್ನಗಳ ಪ್ರದರ್ಶನ ಮಳಿಗೆಗಳು ಸ್ಥಾಪಿಸಲಾಗುತ್ತಿದ್ದು, ತಜ್ಞರೊಂದಿಗೆ ಚರ್ಚೆ, ಪ್ರಯೋಗ ತಾಕುಗಳಿಗೆ ಭೇಟಿ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೀಟನಾಶಕ ಸಿಂಪಡಣಾ ವ್ಯವಸ್ಥೆ ಮೊದಲಾದ ಪ್ರಾತ್ಯಕ್ಷಿತೆಗಳು ಗಮನ ಸೆಳೆಯಲಿವೆ ಎಂದರು.
ಗೋಷ್ಠಿಯಲ್ಲಿ ಸಹ ಸಂಶೋಧನಾ ನಿರ್ದೇಶಕ ಡಾ.ಅಶೋಕ ಸಜ್ಜನ, ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ ಬೆಳ್ಳಿ ಸೇರಿದಂತೆ ಮುಂತಾದವರು ಇದ್ದರು.