ಕೃಷ್ಣಾ ಬಿ ಸ್ಕೀಂ ನೀರಾವರಿ ರಾಷ್ಟ್ರೀಯ ಯೋಜನೆ ಆಗಲಿ

KannadaprabhaNewsNetwork |  
Published : May 06, 2025, 12:20 AM IST
5ಕೆಕೆಆರ್1:ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ  ಹುಣಸಿಹಾಳ-ನಿಲೋಗಲ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಕೃಷ್ಣಾ ಬಿ ಸ್ಕೀಂ ನೀರಾವರಿ ಯೋಜನೆಯ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದರಿಂದ ಕರ್ನಾಟಕದ ಪಾಲಿನ ೧೬೬ ಟಿಎಂಸಿ ನೀರು ಲಭ್ಯವಾಗಲಿದೆ. ಇದೀಗ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸುಪ್ರೀಕೋರ್ಟ್‌ ಹೋಗಿವೆ. ಹೀಗಾಗಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು ಮೂರು ರಾಜ್ಯದ ನೀರಾವರಿ ಮಂತ್ರಿಗಳನ್ನು ಸಭೆಗೆ ಆಹ್ವಾನಿಸಿದ್ದಾರೆ.

ಕೊಪ್ಪಳ(ಯಲಬುರ್ಗಾ):

ಕೃಷ್ಣಾ ನದಿ ನೀರು ಹಂಚಿಕೆ ವಿಷಯವಾಗಿ ಆಂಧ್ರಪ್ರದೇಶ-ತೆಲಂಗಾಣ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿರುವುದರಿಂದ ಯೋಜನೆ ಅನುಷ್ಠಾನಕ್ಕೆ ಹಿನ್ನೆಡೆಯಾಗಿದೆ. ಕೃಷ್ಣಾ ಬಿ ಸ್ಕೀಂ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಒತ್ತಾಯಿಸಿದರು.ಯಲಬುರ್ಗಾ ತಾಲೂಕಿನ ಗಾಣಧಾಳ ಗ್ರಾಮದಲ್ಲಿ ಗಾಣಧಾಳ-ಶಿಡ್ಲಭಾವಿ ಮತ್ತು ಹುಣಸಿಹಾಳ-ನಿಲೋಗಲ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷ್ಣಾ ಬಿ ಸ್ಕೀಂ ನೀರಾವರಿ ಯೋಜನೆಯ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದರಿಂದ ಕರ್ನಾಟಕದ ಪಾಲಿನ ೧೬೬ ಟಿಎಂಸಿ ನೀರು ಲಭ್ಯವಾಗಲಿದೆ. ಇದೀಗ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸುಪ್ರೀಕೋರ್ಟ್‌ ಹೋಗಿವೆ. ಹೀಗಾಗಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು ಮೂರು ರಾಜ್ಯದ ನೀರಾವರಿ ಮಂತ್ರಿಗಳನ್ನು ಸಭೆಗೆ ಆಹ್ವಾನಿಸಿದ್ದಾರೆ. ಇನ್ನಾದರೂ ಕೇಂದ್ರ ಸರ್ಕಾರ ಯೋಜನೆ ಬಗ್ಗೆ ಮುತುವರ್ಜಿ ವಹಿಸಿ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದರು.

ಕಲ್ಯಾಣ ಪಥ ಯೋಜನೆಯಡಿ ೨೦೨೪-೨೫ನೇ ಸಾಲಿನ ೯ ರಸ್ತೆಯನ್ನು ₹ ೩೪ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರಾಮೀಣ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದ ಅವರು, ಗುಣಮಟ್ಟದ ರಸ್ತೆ ನಿರ್ಮಿಸಬೇಕು. ಜತೆಗೆ ಐದು ವರ್ಷ ಗುತ್ತಿಗೆದಾರರು ನಿರ್ವಹಣೆ ಮಾಡಬೇಕೆಂದರು.

ಗಾಣಧಾಳದಲ್ಲಿ ₹ ೩ ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ಕಾಮಗಾರಿ ಆರಂಭಿಸಲಾಗಿದೆ. ಜಮೀನಿಗೆ ಸಂಬಂಧಿಸಿದವರು ಕೋರ್ಟ್‌ನಿಂದ ತಡೆ ತರುವುದರಿಂದ ಪ್ರಯೋಜನವೇನಿದೆ ಎಂದ ಅವರು, ಮಾಡಿದ ಕೆಲಸಗಳು ಶಾಶ್ವತವಾಗಿ ಉಳಿಯಬೇಕು. ಅಭಿವೃದ್ಧಿ ಕಾಮಗಾರಿಗೆ ಜನ ಸಹಕಾರ ಕೊಡಬೇಕು. ಒಂದು ವಾರದಲ್ಲಿ ಬಸ್ ನಿಲ್ದಾಣ ಕಾಮಗಾರಿ ಪ್ರಾರಂಭವಾಗಬೇಕು ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಅವರಿಗೆ ಸೂಚಿಸಿದರು.

ಗಾಣಧಾಳ ಹಳ್ಳಗಳಿಗೆ ₹ ೪ ಕೋಟಿ ವೆಚ್ಚದಲ್ಲಿ ಬ್ರಿಜ್ ಕಂ. ಬ್ಯಾರೇಜ್ ಕಾಮಗಾರಿಗೆ ಶೀಘ್ರದಲ್ಲೇ ಭೂಮಿ ಪೂಜೆ ನೆರವೇರಿಸಲಾಗುವುದು ಎಂದ ಅವರು, ₹ ೨೫ ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಪಶು ಆಸ್ಪತ್ರೆಗೆ ಜಾಗ ನೀಡಿದ ಹನುಮಂತಪ್ಪ ಅವರನ್ನು ಶಾಸಕರು ಸನ್ಮಾನಿಸಿದರು.

ಪಿಎಂಜಿಎಸ್‌ವೈ ಇಇ ಹೊನ್ನಪ್ಪ ಮಾತನಾಡಿದರು. ಗುನ್ನಾಳ-ಬುಕನಟ್ಟಿ, ಕುಡಗುಂಟಿ-ಕಲ್ಲೂರು, ಮಾಳೆಕೊಪ್ಪ-ಹಳ್ಳಿಕೇರಿ, ಕವಳಕೇರಿ-ಮುತ್ತಾಳ ಕ್ರಾಸ್‌ ವರೆಗೆ ಕಲ್ಯಾಣಪಥ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಪಿಆರ್‌ಇಡಿ ಎಇಇ ಶ್ರೀಧರ ತಳವಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಮಹೇಶ ಹಳ್ಳಿ, ಡಾ. ಶಿವನಗೌಡ ದಾನರಡ್ಡಿ, ಆನಂದ ಉಳ್ಳಾಗಡ್ಡಿ, ಅಪ್ಪಣ್ಣ ಜೋಶಿ, ಶಿವಸಂಗಪ್ಪ ಹುಚನೂರ, ಹನುಮಗೌಡ ಗೌಡ್ರ, ಹನುಮಂತ ಕಲಭಾವಿ, ಓಮಣ್ಣ ಚನ್ನದಾಸರ, ಹನುಮಗೌಡ ಪಾಟೀಲ್, ನಾಗರಾಜ ನವಲಹಳ್ಳಿ, ಅಶ್ರಫ್‌ಅಲಿ ಕುಷ್ಟಗಿ, ಹನುಮಗೌಡ ಗುಳೇದ, ಬಸವರಾಜ ಹಿರೇಮನಿ, ಶಿವಸಂಗಪ್ಪ ಗುಳೇದ, ಅಮರೇಶಪ್ಪ ಕರಕಪ್ಪನವರ್, ಹನುಮೇಶ ನಾಯಕ, ಪ್ರಭು ಬಡಿಗೇರ, ಹನುಮೇಶ ಹುಲಿಗಿ, ದ್ಯಾಮಣ್ಣ ಗುಳೇದ, ಶಿಕ್ಷಕ ಕೃಷ್ಣಾ ಪತ್ತಾರ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ