ಸುಹಾಸ್‌ ರೌಡಿಶೀಟರ್‌ ಎಂದಾದರೆ, ಡಿಕೆಶಿ, ಪರಂ ಏನು?: ಭಾಗೀರಥಿ ಮುರುಳ್ಯ ಪ್ರಶ್ನೆ

KannadaprabhaNewsNetwork | Published : May 6, 2025 12:20 AM

ಸಾರಾಂಶ

ಸುಹಾಸ್‌ಗೆ ರಕ್ಷಣೆಗೆ ಆಯುಧ ಇರಿಸಿಕೊಳ್ಳಲು ಪೊಲೀಸರು ಬಿಡಲಿಲ್ಲ, ಆಯುಧ ಇದ್ದಿದ್ದರೆ ಸುಹಾಸ್‌ ಜೀವ ರಕ್ಷಣೆಯಾಗುತ್ತಿತ್ತು. ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರಿಗೂ ರಕ್ಷಣೆ ಇಲ್ಲದಾಗಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಹೊರವಲಯದ ಬಜಪೆಯಲ್ಲಿ ಹತ್ಯೆಗೀಡಾದ ಹಿಂದು ಕಾರ್ಯಕರ್ತ ಸುಹಾಸ್‌ ಬಗ್ಗೆ ರಾಜ್ಯ ಗೃಹ ಸಚಿವರು ಆತ ರೌಡಿಶೀಟರ್‌, ಗೂಂಡಾ ಇತ್ಯಾದಿ ಮಾತನಾಡಿದ್ದಾರೆ. ಹಾಗಾದರೆ ಸರ್ಕಾರದಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಡಾ.ಪರಮೇಶ್ವರ್‌ ಮೇಲೂ ಇಂತಹ ಕೇಸುಗಳಿಲ್ಲವೇ? ಅವರನ್ನೂ ಹಾಗೆಯೇ ಕರೆಯಲು ಆಗುತ್ತಾ? ಹಾಗಾದರೆ ಸುಹಾಸ್‌ನನ್ನು ಮಾತ್ರ ಯಾಕೆ ಹಾಗೆ ಹೆಸರಿಸಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ತಿರುಗೇಟು ನೀಡಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಹಾಸ್‌ನ್ನು ರೌಡಿಶೀಟರ್‌ ಎಂದು ಸರ್ಕಾರ ಬಿಂಬಿಸುತ್ತಿರುವುದಕ್ಕೆ ಆಕ್ಷೇಪಿಸಿದರು.

ಸುಹಾಸ್‌ಗೆ ರಕ್ಷಣೆಗೆ ಆಯುಧ ಇರಿಸಿಕೊಳ್ಳಲು ಪೊಲೀಸರು ಬಿಡಲಿಲ್ಲ, ಆಯುಧ ಇದ್ದಿದ್ದರೆ ಸುಹಾಸ್‌ ಜೀವ ರಕ್ಷಣೆಯಾಗುತ್ತಿತ್ತು. ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರಿಗೂ ರಕ್ಷಣೆ ಇಲ್ಲದಾಗಿದೆ ಎಂದರು.

ಖಾದರನ್ನೂ ತನಿಖೆ ನಡೆಸಿ:

ಸುಹಾಸ್‌ ಹತ್ಯೆ ಸಂದರ್ಭ ಘಟನಾ ಸ್ಥಳದಲ್ಲಿದ್ದ ಇಬ್ಬರು ಬುರ್ಖಾಧಿಕಾರಿ ಮಹಿಳೆಯರ ಬಗ್ಗೆ ತನಿಖೆ ನಡೆಸಿ, ಅ‍ವರನ್ನು ಬಂಧಿಸಬೇಕು. ಈ ಕೊಲೆಯಲ್ಲಿ ಫಾಜಲ್‌ ಕುಟುಂಬಸ್ಥರ ಪಾತ್ರ ಇಲ್ಲ ಎಂದು ಸ್ಪೀಕರ್ ಖಾದರ್‌ ಹೇಳಿದ್ದರು. ಈಗ ಪೊಲೀಸ್‌ ಕಮಿಷನರ್‌ ಅವರೇ ಫಾಜಲ್‌ ಕುಟುಂಬ ಸುಪಾರಿ ನೀಡಿದ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಸ್ಪೀಕರ್‌ ಖಾದರ್‌ ಅವರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಭಾಗೀರಥಿ ಮುರುಳ್ಯ ಪೊಲೀಸ್‌ ಇಲಾಖೆಯನ್ನು ಆಗ್ರಹಿಸಿದರು.

ದಲಿತರ ಪರ ಎನ್ನುತ್ತಿರುವ ಗೃಹ ಸಚಿವ ಡಾ.ಪರಮೇಶ್ವರ್‌ ಅವರು ಮಂಗಳೂರಿಗೆ ಆಗಮಿಸಿ ಕೇವಲ ಮುಸ್ಲಿಂ ಮುಖಂಡರೊಂದಿಗೆ ಮಾತ್ರ ಸಭೆ ನಡೆಸಿದ್ದಾರೆ. ದಲಿತ ಶಾಸಕಿಯಾದ ನನ್ನನ್ನೂ ಅಧಿಕಾರಿಗಳ ಸಭೆಗೆ ಆಹ್ವಾನಿಲ್ಲ. ಇದು ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗಲು ಕಾರಣವಾಗಿದೆ ಎಂದರು.

ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ.ಮಂಜುಳಾ ರಾವ್‌, ಪದಾಧಿಕಾರಿಗಳಾದ ಸಂಧ್ಯಾ ವೆಂಕಟೇಶ್‌, ಪೂರ್ಣಿಮಾ ಬಿ., ಪೂರ್ಣಿಮಾ ರಾವ್‌ ಇದ್ದರು.

Share this article