ಸಂಕಷ್ಟದಲ್ಲಿ ಉಪ್ಪಾರ ಸಮುದಾಯದವರು: ಡಿ.ಜಗನ್ನಾಥ್ ಸಾಗರ್

KannadaprabhaNewsNetwork | Published : May 6, 2025 12:20 AM

ಸಾರಾಂಶ

ದೇಶದಲ್ಲಿಂದು ಎಲ್ಲೆಡೆ ಭಗೀರಥ ಜಯಂತಿ ಆಚರಿಸಲಾಗುತ್ತಿದೆ. ಇದರ ಉದ್ದೇಶ ಕೇವಲ ಪಟಾಕಿ ಸಿಡಿಸಿ ದೀಪಾಲಂಕಾರ ಮಾಡಿ ಬಗೆಬಗೆಯ ಸಿಹಿತಿನಿಸು ಮಾಡಿ ತಿನ್ನುವುದಲ್ಲ. ಬದಲಿಗೆ ಹಬ್ಬಕ್ಕೆ ಮೀರಿದ ಆಚರಣೆಯಾಗಬೇಕು. ಭಗೀರಥ ಮಹರ್ಷಿಗಳ ಶಿಸ್ತು, ಕಠಿಣ ಪರಿಶ್ರಮ, ಆದರ್ಶ ಎತ್ತಿಹಿಡಿಯುವಂತಿರಬೇಕು. ಸಮಾಜದ ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಉಪ್ಪಾರ ಸಮುದಾಯದ ಸಹಸ್ರಾರು ಮಂದಿ ಅನಕ್ಷರಸ್ಥರ ಜೊತೆಗೆ ಸಂಕಷ್ಟದಲ್ಲಿದ್ದಾರೆ ಎಂಬುದು ವಾಸ್ತವದ ಸಂಗತಿಯಾಗಿದೆ. ಆರಂಭದಲ್ಲಿ ವೃತ್ತಿ ಸೂಚಕವಾಗಿದ್ದ ಉಪ್ಪು ತಯಾರಿಕೆಯಿಂದ ಜಾತಿ ಸೂಚಕವಾಗಿ ಉಪ್ಪಾರ ಸಮಾಜವಾಗಿದೆ ಎಂದು ನಿವೃತ್ತ ವಾಣಿಜ್ಯ ತೆರಿಗೆ ಇಲಾಖೆ ಅಪರ ಆಯುಕ್ತ ಡಿ.ಜಗನ್ನಾಥ ಸಾಗರ್ ಹೇಳಿದರು.

ತಾಲೂಕಿನ ಚಾಮನಕೊಪ್ಪಲು ಗ್ರಾಮದಲ್ಲಿ ತಾಲೂಕು ಭಗೀರಥ ಜಯಂತ್ಯುತ್ಸವ ಆಚರಣಾ ಸಮಿತಿಯಿಂದ ನಡೆದ ಭಗೀರಥ ಮಹರ್ಷಿ ಜಯಂತಿ, ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತಿ ಸರ್ಕಾರಿ ನೌಕರರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಉಪ್ಪಾರ ಜನಾಂಗದ ಸಾಕ್ಷರತೆ ಮತ್ತು ಔದ್ಯೋಗಿಕ ಮಟ್ಟ ಅತ್ಯಂತ ಕಡಿಮೆಯಿದೆ. ನಮಗೆ ಸಂವಿಧಾನಿಕವಾದ ಮೀಸಲಾತಿ ರಕ್ಷಣೆ ಸಿಕ್ಕರೆ ಮಾತ್ರ ಸುಮಾರು ಮೂರ್‍ನಾಲ್ಕು ದಶಕಗಳ ಅವಧಿಯಲ್ಲಿ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದರು.

ದೇಶದಲ್ಲಿಂದು ಎಲ್ಲೆಡೆ ಭಗೀರಥ ಜಯಂತಿ ಆಚರಿಸಲಾಗುತ್ತಿದೆ. ಇದರ ಉದ್ದೇಶ ಕೇವಲ ಪಟಾಕಿ ಸಿಡಿಸಿ ದೀಪಾಲಂಕಾರ ಮಾಡಿ ಬಗೆಬಗೆಯ ಸಿಹಿತಿನಿಸು ಮಾಡಿ ತಿನ್ನುವುದಲ್ಲ. ಬದಲಿಗೆ ಹಬ್ಬಕ್ಕೆ ಮೀರಿದ ಆಚರಣೆಯಾಗಬೇಕು. ಭಗೀರಥ ಮಹರ್ಷಿಗಳ ಶಿಸ್ತು, ಕಠಿಣ ಪರಿಶ್ರಮ, ಆದರ್ಶ ಎತ್ತಿಹಿಡಿಯುವಂತಿರಬೇಕು. ಸಮಾಜದ ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದರು.

ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಜಿ.ಎಂ.ಗಾಡ್ಕರ್ ಮಾತನಾಡಿ, ಇಡೀ ಭೂಮಂಡಲವನ್ನೇ ಆಳಿದ ಚಕ್ರವರ್ತಿ. ಜಗತ್ತಿನ ಕಲ್ಯಾಣಕ್ಕಾಗಿ ತನ್ನ ಚಕ್ರಾಧಿಪತ್ಯವನ್ನೇ ತ್ಯಾಗ ಮಾಡಿ ನಾಡಿನ ರಕ್ಷಣೆ ಮಾಡಲು ಹೊರಟಂತ ಮೊದಲಿಗರು ಯಾರಾದರೂ ಇದ್ದರೆ ಅದು ಭಗೀರಥ ಮಹರ್ಷಿ ಎಂದರು.

ಭಗೀರಥ ಮಹರ್ಷಿಗಳ ಮಾರ್ಗವನ್ನು ನಾವು ನೋಡಿದರೆ ಅದು ಗೌತಮ ಬುದ್ಧನಂತೆಯೇ ಇದೆ. ಇಂದು ನಮ್ಮ ಸಮಾಜವು ಸಾಮಾಜಿಕ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯವಾದ ಆಯಾಮಗಳಲ್ಲಿ ಕಟ್ಟಕಡೆಯಲ್ಲಿದ್ದೇವೆ. ಆದ್ದರಿಂದ ಸಮುದಾಯವು ಒಗ್ಗಟ್ಟಾಗಿ ಹೋರಾಡುವ ಮೂಲಕ ಅಭಿವೃದ್ಧಿಯಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಚಾಮನಕೊಪ್ಪಲು ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಮಹರ್ಷಿ ಭಗೀರಥ ಅವರ ಭಾವಚಿತ್ರವನ್ನು ಅಲಂಕರಿಸಿದ್ದ ತೆರೆದ ವಾಹನದಲ್ಲಿರಿಸಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಪೂರ್ಣಕುಂಭದೊಂದಿಗೆ ಮೆರವಣಿಗೆ ನಡೆಸಲಾಯಿತು.

ವೇದಿಕೆಯಲ್ಲಿ ಗ್ರಾಮದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಅತಿಹೆಚ್ಚು ಅಂಕ ಪಡೆದ ಸಮುದಾಯದ 30ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರನ್ನು ಸನ್ಮಾನಿಸಲಾಯಿತು. ಜಯಂತಿ ಅಂಗವಾಗಿ ಅನ್ನದಾನ ನಡೆಯಿತು. ನಿವೃತ್ತ ಶಿಕ್ಷಕರಾದ ಜಯಶಂಕರ್, ಜಯರಾಮು, ಸಮುದಾಯದ ಮುಖಂಡರಾದ ರಾಜಮುಡಿ, ಅಶೋಕ್, ಸ್ವಾಮಿ, ಉಮೇಶ್, ಕಾಂತರಾಜು, ಶ್ರೀನಿವಾಸ್, ಗೋವಿಂದರಾಜು, ಬಾಲು, ರಂಗಸ್ವಾಮಿ, ಸುರೇಶ್, ವೆಂಕಟರಾಮು, ಲಿಂಗರಾಜು, ದೇವರಾಜು, ನರಸಿಂಹಮೂರ್ತಿ, ಮಹೇಶ್ ಸೇರಿದಂತೆ ನೂರಾರು ಮಂದಿ ಇದ್ದರು.

Share this article