)
-ಅ.31ರೊಳಗೆ ಬೀದಿ ದೀಪ ಅಳವಡಿಕೆ ಪೂರ್ಣಕ್ಕೆ ಸೂಚನೆವಿಫಲ ಗುತ್ತಿಗೆದಾರರಿಂದ ₹93,67,384 ದಂಡ ಸಂಗ್ರಹ
ನಗರದಲ್ಲಿ ಎಲ್ಇಡಿ ಬೀದಿ ದೀಪಗಳ ಅಳವಡಿಕೆ ಪೂರ್ಣಗೊಂಡ ನಂತರ ಸಂಬಂಧಪಟ್ಟ ನಗರ ಪಾಲಿಕೆಗಳ ಅಧಿಕಾರಿಗಳು ಕಡ್ಡಾಯವಾಗಿ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಅಧಿಕಾರಿಗಳೊಂದಿಗೆ ನಡೆಸಿದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಸಚಿವರು, ಬಾಕಿ ಉಳಿದಿರುವ ಪ್ರದೇಶಗಳಲ್ಲೂ ಅ.31ರ ಒಳಗೆ ಅಳವಡಿಕೆ ಕಾರ್ಯ ಪೂರ್ಣಗೊಳಿಸಬೇಕು. ಅಲ್ಲದೆ, ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೋಡಿಯಂ ಲೈಟುಗಳನ್ನು ಎಲ್ಇಡಿ ಲೈಟುಗಳನ್ನಾಗಿ ಮಾರ್ಪಡಿಸಲು ಕ್ರಮವಹಿಸಬೇಕು ಎಂದರು.ಜಿಬಿಎ ವ್ಯಾಪ್ತಿಯಲ್ಲಿ ಎಲ್ಇಡಿ ಬೀದಿ ದೀಪಗಳ ಅಳವಡಿಕೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಕಳೆದ ಮೂರು ತಿಂಗಳಿಂದ ಸಂಬಂಧಿತ ಅಧಿಕಾರಿಗಳ ಜೊತೆ ಸತತ ಸಭೆ ನಡೆಸಿದ್ದರು. ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಕಾರ್ಯಪಾಲಕ ಎಂಜಿನಿಯರ್ ಎಚ್.ವಿ.ರಮೇಶ್ ಅವರನ್ನ ಅಮಾನತುಗೊಳಿಸಿದ್ದರು. ಅಲ್ಲದೆ, ವಿಫಲವಾದ ಗುತ್ತಿಗೆದಾರರಿಂದ ಒಟ್ಟು ರೂ. 93,67,384 ದಂಡ ಸಂಗ್ರಹಿಸಲಾಗಿತ್ತು.
ಸಭೆಯಲ್ಲಿ ನಗರ ಪಾಲಿಕೆಗಳ ಹೆಚ್ಚುವರಿ ಆಯುಕ್ತೆ ಲತಾ ಆರ್., ಕವಿತಾ ರಾಜಾರಾಂ, ಲೋಖಂಡೆ ಸ್ನೇಹಲ್ ಸುಧಾಕರ್, ನವೀನ್ ಕುಮಾರ್ ರಾಜು, ವೆಂಕಟಾಚಲಪತಿ, ಮುಖ್ಯ ಎಂಜಿನಿಯರ್ ಉಪಸ್ಥಿತರಿದ್ದರು.