ಉತ್ತರಕ್ಕೆ ಐಟಿ ವಿಸ್ತರಿಸಿದ ಕನಸುಗಾರ ಕೃಷ್ಣ

KannadaprabhaNewsNetwork |  
Published : Dec 11, 2024, 12:46 AM IST
456456 | Kannada Prabha

ಸಾರಾಂಶ

ಐಟಿ-ಬಿಟಿ ವಿಷಯದಲ್ಲಿ ಉತ್ತರದ ಯುವ ಪ್ರತಿಭೆಗಳು ಬೆಂಗಳೂರು, ಹೈದ್ರಾಬಾದ್‌, ಪುಣೆ, ಚೆನ್ನೈ, ದೆಹಲಿಯತ್ತ ಮುಖಮಾಡದೇ ತನ್ನೂರಲ್ಲೇ ಆ ಸೌಲಭ್ಯ ಪಡೆಯಲಿ, ಅಲ್ಲಿ ಕುಳಿತೇ ಜಗತ್ತಿನೊಂದಿಗೆ ಸಂವಾದಿಯಾಗಲಿ ಎನ್ನುವ ಎಸ್.ಎಂ.ಕೃಷ್ಣ ಅವರ ಕನಸು ಈಗ ನನಸಾಗಿದೆ.

ಮಲ್ಲಿಕಾರ್ಜುನ ಸಿದ್ದಣ್ಣವರ

ಹುಬ್ಬಳ್ಳಿ:

ರಾಜಧಾನಿ ಬೆಂಗಳೂರನ್ನು "ಸಿಲಿಕಾನ್‌ ಸಿಟಿ " ಮಾಡುವ ಜತೆಗೆ ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ಕೇಂದ್ರವಾಗಿ ಇಟ್ಟುಕೊಂಡು ರಾಜ್ಯದ ಉತ್ತರ ಭಾಗದಲ್ಲಿ "ಮಾಹಿತಿ ತಂತ್ರಜ್ಞಾನ " (ಐಟಿ) ವಿಸ್ತರಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್‌.ಎಂ.ಕೃಷ್ಣ ಅವರಿಗೆ ಸಲ್ಲುತ್ತದೆ.

ಹುಬ್ಬಳ್ಳಿಯಲ್ಲಿ ಬೃಹತ್‌ ಐಟಿ ಪಾರ್ಕ, ಇನ್ಫೊಸಿಸ್‌, ಆರ್ಯಭಟ ಪಾರ್ಕ, ಧಾರವಾಡದಲ್ಲಿ ತ್ರಿಬಲ್ ಐಟಿ ಸ್ಥಾಪನೆಯಾಗಿ ಇಂದು ದೇಶ-ವಿದೇಶಗಳ ಉದ್ಯಮಿಗಳು, ಉದ್ಯೋಗ ಪಡೆದ ಯುವಕರು, ಕಲಿಯುವ ಆಸಕ್ತಿ ಇರುವ ವಿದ್ಯಾರ್ಥಿಗಳು ಇತ್ತ ದಾವಿಸುತ್ತಿದ್ದರೆ ಇದಕ್ಕೆಲ್ಲ ಕಾರಣ ಎಸ್‌.ಎಂ.ಕೃಷ್ಣ ಅವರ ದೂರದೃಷ್ಟಿಯ ಚಿಂತನೆ.

ಐಟಿ-ಬಿಟಿ ವಿಷಯದಲ್ಲಿ ಉತ್ತರದ ಯುವ ಪ್ರತಿಭೆಗಳು ಬೆಂಗಳೂರು, ಹೈದ್ರಾಬಾದ್‌, ಪುಣೆ, ಚೆನ್ನೈ, ದೆಹಲಿಯತ್ತ ಮುಖಮಾಡದೇ ತನ್ನೂರಲ್ಲೇ ಆ ಸೌಲಭ್ಯ ಪಡೆಯಲಿ, ಅಲ್ಲಿ ಕುಳಿತೇ ಜಗತ್ತಿನೊಂದಿಗೆ ಸಂವಾದಿಯಾಗಲಿ ಎನ್ನುವ ಎಸ್.ಎಂ.ಕೃಷ್ಣ ಅವರ ಕನಸು ಈಗ ನನಸಾಗಿದೆ. ಹಾಗಾಗಿ ಉತ್ತರ ಕರ್ನಾಟಕದ ಜನತೆಯ ಮನಸಿನಲ್ಲಿ ಈ ಕನಸುಗಾರ, ದೂರದೃಷ್ಟಿಯ ಮಹಾ ಮುತ್ಸದ್ದಿ ಸದಾ ಉಳಿಯುತ್ತಾರೆ.

ಅಪ್ಟಿಕಲ್‌ ಫೈಬರ್‌ ಜಾಲ:

ಸ್ವಂತ ಕಟ್ಟಡ ನಿರ್ಮಿಸಿ ಐಟಿ ಪಾರ್ಕ ಮಾಡುವುದು ವಿಳಂಬ ಆಗುತ್ತದೆ ಎನ್ನುವ ಕಾರಣಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹುಬ್ಬಳ್ಳಿಯ ತಿರುಕರಾಮನಕೆರೆ ಆವರಣದಲ್ಲಿ ನಿರ್ಮಿಸಿದ್ದ ಬೃಹತ್‌ ವಾಣಿಜ್ಯ ಮಳಿಗೆಯನ್ನೇ ಖರೀದಿಸಿದ ಸರ್ಕಾರ ಅದನ್ನು ಐಟಿ ಪಾರ್ಕ ಆಗಿ ಪರಿವರ್ತಿಸಿತು. ಈ ಪಾರ್ಕನಲ್ಲಿ ಸಾಕಷ್ಟು ಐಟಿ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ.

ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ಐಟಿ ಉದ್ಯಮ, ಇಂಜಿನೀಯರಿಂಗ್‌ ಕಾಲೇಜು, ಸರ್ಕಾರಿ ಕಚೇರಿಗಳು, ಖಾಸಗೀ ಕಂಪೆನಿಗಳು, ಆಸ್ಪತ್ರೆಗಳು ಸ್ಮಾರ್ಟ ಆಗಿ ಕಾರ್ಯನಿರ್ವಹಿಸಲು ಅನುಕೂಲ ಆಗುವಂತೆ ಮೊದಲು ಮಾಡಿದ ಕೆಲಸವೇ ಅಪ್ಟಿಕಲ್‌ ಫೈಬರ್‌ ಜಾಲ ವಿಸ್ತರಣೆ. ಇದರಿಂದ 12 ಜಿಲ್ಲೆಗಳ ಇಂಟರ್‌ನೆಟ್‌ ಜಾಲ ಸದೃಢವಾಯಿತು.

ಇವೆಲ್ಲವೂ ಹುಬ್ಬಳ್ಳಿ ಐಟಿ ಪಾರ್ಕಿನ ಸಂಪರ್ಕಕ್ಕೆ ಬಂದಿವೆ. ಇದನ್ನು ಅನುಸರಿಸಿ ಖಾಸಗೀ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್‌, ಜೀಯೊ ಮುಂತಾದ ಕಂಪೆನಿಗಳು 2ಜಿ ಇಂದ 5ಜಿ ಸೇವೆಗೆ ಅಣಿಯಾಗಿವೆ. ಇದರಿಂದ ಇಂದು ತರಕಾರಿ ಮಾರುವ ವೃದ್ಧೆಯೂ ಫೋನ್‌ ಪೇ, ಗೂಗಲ್‌ ಪೇ ಮಾಡಿ ಎಂದು ಹೆಮ್ಮೆಯಿಂದ ಹೇಳುವಂತಾಗಿದೆ. ಈ ಪ್ರದೇಶ ಸಂಪೂರ್ಣ ಡಿಜಿಟಲ್‌ ಆಗಿ ಆಡಳಿತ ಮತ್ತು ವ್ಯವಹಾರವನ್ನು ಸುರಳಿತಗೊಳಿಸಿದೆ. ಈ ಮಟ್ಟದಲ್ಲಿ ಎಸ್‌.ಎಂ.ಕೃಷ್ಣ ಅವರ ಕನಸು ನನಸಾಗಿದೆ.

ಇಂಜಿನೀಯರ್‌ ಕಾಲೇಜುಗಳು:

ಈ ಪ್ರದೇಶ ಇಂಜಿನೀಯರಿಂಗ್‌ ಕಾಲೇಜುಗಳಿಗೆ ಖದರು ಬಂದಿದ್ದೇ ಈ ಐಟಿ ಜಾಲ ವಿಸ್ತರಣೆಯಿಂದ. ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಉತ್ತರದ 12 ಜಿಲ್ಲೆಗಳಲ್ಲಿನ ಇಂಜಿನೀಯರಿಂಗ್‌ ಕಾಲೇಜುಗಳಲ್ಲಿ ಕಂಪ್ಯುಟರ್‌ ಸೈನ್ಸ್, ಇನ್ಫಾರ್ಮೆಶನ್ ಸೈನ್ಸ್ ಮತ್ತು ಐಟಿ ಸಂಬಂದಿತ ಕೋರ್ಸಗಳಿಗೆ ಭಾರೀ ಡಿಮ್ಯಾಂಡ್ ಬಂತು. ಅಲ್ಲದೇ ದೇಶ-ವಿದೇಶಗಳ ಐಟಿ ಕಂಪೆನಿಗಳು ಈ ಕಾಲೇಜುಗಳಿಗೆ ಬಂದು ಕ್ಯಾಂಪಸ್‌ ಸಂದರ್ಶನ ನಡೆಸಿ ಪ್ರತಿಭಾವಂತರನ್ನು ಆಯ್ಕೆ ಮಾಡಿಕೊಂಡು ಲಕ್ಷ ಲಕ್ಷ ಸಂಬಳ ನೀಡಿದಾಗಲಂತೂ ಈ ಭಾಗದ ಜನತೆಯ ಹೃದಯದಲ್ಲಿ ಎಸ್.ಎಂ.ಕೃಷ್ಣ ಶಾಶ್ವತ ಸ್ಥಾನ ಪಡೆದರು.

ಈಗಲೂ ದೇಶ-ವಿದೇಶಗಳಲ್ಲಿ ಇಲ್ಲಿನ ಪ್ರತಿಭೆಗಳು ಉನ್ನತ ಸ್ಥಾನ ಮತ್ತು ಉದ್ಯೋಗ ಹೊಂದಿದ್ದರೆ ಅದು ಎಸ್‌.ಎಂ.ಕೃಷ್ಣ ಅವರ ದೂರದೃಷ್ಟಿಯ ಫಲ. ಅಂದು ಅವರು ರಾಜ್ಯದ ಉತ್ತರ ಭಾಗದಲ್ಲೂ ಐಟಿ ಬೆಳೆಸುವ ಚಿಂತನೆ ಮಾಡಿದ್ದರಿಂದ ಇಂದು ಜಾಗತಿಕ ಮಟ್ಟದಲ್ಲಿ ಇಲ್ಲಿನ ಪ್ರತಿಭೆಗಳಿಗೆ ಅವಕಾಶ ಲಭಿಸುತ್ತಿದೆ. ಬೆಂಗಳೂರು ಐಟಿ ಸಂಸ್ಥೆಗಳಲ್ಲಿ ಈ ಭಾಗದ ಪ್ರತಿಭೆಗಳದ್ದೇ ಸಿಂಹಪಾಲು.

ನಂಜುಂಡಪ್ಪ ವರದಿ:

ಅಭಿವೃದ್ಧಿಯಲ್ಲಿನ ಅಸಮಾನತೆ ನೀಗಿಸಲು ಡಾ.ನಂಜುಂಡಪ್ಪ ನೇತೃತ್ವದಲ್ಲಿ ಸಮಿತಿ ನೇಮಿಸಿ, ಅವರ ವರದಿಯಂತೆ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡಿದರು ಎಸ್.ಎಂ.ಕೃಷ್ಣ. ಕುಗ್ರಾಮದಂತಿದ್ದ ಇಲ್ಲಿನ ನೂರಾರು ತಾಲೂಕು ಕೇಂದ್ರಗಳು ಇಂದು ಗೌರವಯುತ ಸೌಲಭ್ಯ ಪಡೆಯುತ್ತಿವೆ.

ಕಳಸಾ-ಬಂಡೂರಿ ತಿರುವು ಯೋಜನೆ ಮೂರ್ತರೂಪ ಪಡೆದದ್ದೇ ಎಸ್.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲಿ. ಅಲ್ಲದೇ ಕೃಷ್ಣಾ ಮೇಲ್ದಂಡೆ ಯೋಜನೆ, ಕೊಪ್ಪಳದ ಹಿರೇಹಳ್ಳ ಯೋಜನೆ ಸೇರಿದಂತೆ ಈ ಭಾಗದ ಹತ್ತು ಹಲವು ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ನಿರ್ಲಕ್ಷ್ಯದ ನೋವಿಗೆ ಮುಲಾಮು ಸವರಿದರು ಕೃಷ್ಣ. ಬೆಂಗಳೂರಿನಲ್ಲಿ ಐಟಿ ಅತಿ ವೇಗದಿಂದ ಬೆಳೆಯುವ ಸಂದರ್ಭದಲ್ಲಿಯೇ ಅದಕ್ಕೆ ಪೂರಕವಾಗಿ ಹುಬ್ಬಳ್ಳಿ ಕೇಂದ್ರವಾಗಿ ಇಟ್ಟುಕೊಂಡು ಉತ್ತರ ಕರ್ನಾಟಕದಲ್ಲಿ ಐಟಿ ಬೆಳವಣಿಗೆಗೆ ಮೂಲಸೌಕರ್ಯ ನೀಡಲಾಯಿತು. ಇಂದು ಸಾಕಷ್ಟು ಉದ್ಯಮಗಳು ಇಲ್ಲಿಗೆ ಬಂದಿವೆ ಮತ್ತು ಇಲ್ಲಿನ ಪ್ರತಿಭೆಗಳು ದೇಶ-ವಿದೇಶದ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದರೆ ಅದಕ್ಕೆಲ್ಲ ಕಾರಣ ಎಸ್‌.ಎಂ.ಕೃಷ್ಣ ಅವರು ಎಂದು ಕೆಎಲ್‌ಇ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ

ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ