ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

KannadaprabhaNewsNetwork |  
Published : Sep 15, 2025, 01:01 AM IST
ಫೋಟೋಸ್ | Kannada Prabha

ಸಾರಾಂಶ

ಕೃಷ್ಣಮಠದಲ್ಲಿ ಶ್ರೀ ಕೃಷ್ಣನ ಹುಟ್ಟುಹಬ್ಬದ ಪ್ರಯುಕ್ತ ಪರ್ಯಾಯ ಪುತ್ತಿಗೆ ಮಠದ ಶ್ರೀಗಳು ಕೃಷ್ಣನಿಗೆ ಬಾಲಕೃಷ್ಣನ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ತೀರ್ಥ ಮಂಟಪದಲ್ಲಿ ಚಿನ್ನದ ತೊಟ್ಟಿಲಿನಲ್ಲಿ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದರು. ದಿನವಿಡೀ ಲಕ್ಷಾಂತರ ಮಂದಿ ಕೃಷ್ಣಮಠಕ್ಕೆ ಆಗಮಿಸಿ ಬಾಲಕೃಷ್ಣನ ರೂಪವನ್ನು ಕಣ್ತುಂಬಿಕೊಂಡರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಸೌರಮಾನ ಪದ್ಧತಿಯ ಪ್ರಕಾರ ಭಾನುವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿ ಮತ್ತು ವೈಭವದಿಂದ ಆಚರಿಸಲಾಯಿತು. ಯತಿಗಳು ಮತ್ತು ಭಕ್ತರು ದಿನವಿಡೀ ಉಪವಾಸ, ಧ್ಯಾನ, ಜಪಾನುಷ್ಠಾನದಲ್ಲಿ ಕಳೆದರು. ಮಧ್ಯರಾತ್ರಿ ಕೃಷ್ಣನಿಗೆ ಅರ್ಘ್ಯಪ್ರದಾನದ ನಂತರ ವ್ರತ ಕೊನೆಗೊಳಿಸಿದರು.ಕೃಷ್ಣಮಠದಲ್ಲಿ ಶ್ರೀ ಕೃಷ್ಣನ ಹುಟ್ಟುಹಬ್ಬದ ಪ್ರಯುಕ್ತ ಪರ್ಯಾಯ ಪುತ್ತಿಗೆ ಮಠದ ಶ್ರೀಗಳು ಕೃಷ್ಣನಿಗೆ ಬಾಲಕೃಷ್ಣನ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ತೀರ್ಥ ಮಂಟಪದಲ್ಲಿ ಚಿನ್ನದ ತೊಟ್ಟಿಲಿನಲ್ಲಿ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದರು. ದಿನವಿಡೀ ಲಕ್ಷಾಂತರ ಮಂದಿ ಕೃಷ್ಣಮಠಕ್ಕೆ ಆಗಮಿಸಿ ಬಾಲಕೃಷ್ಣನ ರೂಪವನ್ನು ಕಣ್ತುಂಬಿಕೊಂಡರು.ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥರು ಈ ದಿನ ಲೋಕಕಲ್ಯಾಣಾರ್ಥ ಸ್ವಾಮೀ ಶ್ರೀ ಕೃಷ್ಣಾಯ ನಮಃ ಎಂಬ ಮಂತ್ರವನ್ನು 1008 ಬಾರಿ ಜಪಿಸುವ ಸಂಕಲ್ಪ ಮಾಡಿದ್ದು, ಅದರಂತೆ ನೂರಾರು ಮಂದಿ ಭಕ್ತರು ಕೃಷ್ಣಮಠದಲ್ಲಿ, ಮಧ್ವಸರೋವರದಲ್ಲಿ ಮತ್ತು ತಂತಮ್ಮ ಮನೆಗಳಲ್ಲಿ ಈ ಮಂತ್ರ ಜಪ ಮಾಡಿ ಪ್ರಾರ್ಥನೆ ಸಲ್ಲಿಸಿದರು.ಬಾಲಕೃಷ್ಣನಿಗೆ ಸಮರ್ಪಿಸಲು ವಿಶೇಷವಾಗಿ ಪುತ್ತಿಗೆ ಮಠದ ಉಭಯ ಶ್ರೀಗಳು ಭಾನುವಾರ ಬೆಳಗ್ಗೆ ಭೋಜನಶಾಲೆಯಲ್ಲಿ ತಾವೇ ಬಗೆಬಗೆಯ ಲಡ್ಡುಗಳನ್ನು ತಯಾರಿಸಿದರು. ಅವರೊಂದಿಗೆ ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನಾಚಾರ್ಯರು, ದಿವಾಣರಾದ ನಾಗರಾಜ ಆಚಾರ್ಯ, ಆಪ್ತ ಸಹಾಯಕ ರತೀಶ್ ತಂತ್ರಿ ಮತ್ತಿತರ ಗಣ್ಯರು ಕೈಜೋಡಿಸಿದರು. ಮಹಾಪೂಜೆಯ ವೇಳೆ ಕೃಷ್ಣನಿಗೆ ಲಕ್ಷ ಸಂಖ್ಯೆಯಲ್ಲಿ ಚಕ್ಕುಲಿ, ಲಡ್ಡುಗಳನ್ನು ಸಮರ್ಪಿಸಲಾಯಿತು.ಕೃಷ್ಣ ಜನ್ಮಾಷ್ಟಮಿಯ ವಿಶೇಷ ಆಕರ್ಷಣೆಯಾಗಿ ರಾಜಾಂಗಣದಲ್ಲಿ ಪುಟಾಣಿ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಉಭಯ ಶ್ರೀಗಳು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪುಟಾಣಿಗಳ ಪ್ರದರ್ಶನವನ್ನು ವೀಕ್ಷಿಸಿ ಅವರನ್ನು ತೊಡೆಯ ಮೇಲೆ ಎತ್ತಿಕೊಂಡು ಸಂತಸಪಟ್ಟರು. ರಥಬೀದಿಯಲ್ಲಿ ಅಷ್ಟಮಿಯ ಜಾತ್ರೆ ಭರ್ಜರಿಯಾಗಿ ನಡೆಯಿತು. ಹೊರಜಿಲ್ಲೆಯ ಹೂವು, ಹಣ್ಣು ಮತ್ತು ಇತರ ಆಟದ ವಸ್ತುಗಳ, ತಿಂಡಿತಿನಿಸುಗಳ ವ್ಯಾಪಾರಿಗಳು ನೂರಾರು ಸಂಖ್ಯೆಯಲ್ಲಿದ್ದರು. ಉಡುಪಿಯ ಜನರೆಲ್ಲಾ ರಥಬೀದಿಯಲ್ಲಿ ನೆರೆದಂತೆ ಜನಜಂಗುಳಿ ಇತ್ತು.ಉಡುಪಿಯ ಬೀದಿಬೀದಿಗಳಲ್ಲಿ ಹುಲಿ ವೇಷಗಳ ಅಬ್ಬರ ಜೋರಾಗಿತ್ತು. ಹುಲಿ ವೇಷಧಾರಿಗಳ ಜೊತೆಗೆ ಮಕ್ಕಳು, ಯುವತಿಯರು ಕೂಡ ಸಕತ್‌ ಸ್ಟೆಪ್ ಹಾಕಿ ಸಂತಸಪಟ್ಟರು. ಜೊತೆಗೆ ಮಕ್ಕಳ ಚಿಕಿತ್ಸೆಯ ಸಹಾಯಾರ್ಥ ಹಣ ಸಂಗ್ರಹಿಸುವ ವೈವಿಧ್ಯಮಯ ವೇಷಧಾರಿಗಳೂ ಗಮನ ಸೆಳೆಯುತಿದ್ದವು.

ಇಂದು ಶ್ರೀ ಕೃಷ್ಣ ಲೀಲೋತ್ಸವ: ಬಿಗಿ ಪೊಲೀಸ್ ಬಂದೋಬಸ್ತ್

ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ರಥಬೀದಿಯಲ್ಲಿ ವೈಭವದ ವಿಟ್ಲಪಿಂಡಿ, ಶ್ರೀಕೃಷ್ಣ ಲೀಲೋತ್ಸವ ನಡೆಯಲಿದೆ. ಮೊಸರು ಕುಡಿಕೆಗಳನ್ನು ಒಡೆಯುವುದರ ಜೊತೆಗೆ ವಿಶೇಷ ಆಕರ್ಷಣೆಯಾಗಿ ನೂರಾರು ಹುಲಿ ವೇಷಧಾರಿಗಳ ಕುಣಿತದ ಸ್ಪರ್ಧೆಯೂ ನಡೆಯಲಿದೆ.ಈ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಈ ಸಂದರ್ಭದಲ್ಲಿ ಸರ- ಕಿಸೆಗಳ್ಳತನ, ನೂಕನುಗ್ಗಲು ಇತ್ಯಾದಿ ಯಾವುದೇ ಅನಾಪೇಕ್ಷಿತ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಕೃಷ್ಣಮಠ, ರಥಬೀದಿ ಮತ್ತು ಅದನ್ನು ಸಂಪರ್ಕಿಸುವ ರಸ್ತೆಗಳಲ್ಲಿ ನೂರಾರು ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಸ್ವತಃ ಎಸ್ಪಿ ಹರಿರಾಮ್ ಶಂಕರ್ ಅವರೇ ಬಂದೋಬಸ್ತಿನ ಉಸ್ತುವಾರಿ ವಹಿಸಿದ್ದಾರೆ.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ