ಲಕ್ಷ್ಮೇಶ್ವರ: ಪಟ್ಟಣದ ಶಹನಾಯಿ ವಾದನದ ಕಲಾವಿದ ಕೃಷ್ಣ ಕ್ಷತ್ರೀಯ ಅವರು ಸುಶ್ರಾವ್ಯವಾಗಿ ಶಹನಾಯಿ ವಾದನ ಮಾಡುವ ಮೂಲಕ ಪುಲಿಗೆರೆ ಉತ್ಸವಕ್ಕೆ ಕಳೆ ಕಟ್ಟುವ ಕಾರ್ಯ ಮಾಡಿದರು.
ಮೋಡ ಕವಿದ ವಾತಾವರಣದಲ್ಲಿ ರಾಗ ಬುಜರಿ,ವಿಲಂಬಿತ ಏಕ್ ತಾಲದಲ್ಲಿ ಶಹನಾಯಿ ವಾದನ ಗುಂಗು ಹಿಡಿಸಿದ ಕೃಷ್ಣ ಕ್ಷತ್ರೀಯ ಅವರು ಅರುಣೋದಯ ಕಿರಣಗಳನ್ನು ಬರಮಾಡಿಕೊಳ್ಳುವ ರೀತಿಯಲ್ಲಿ ಶಹನಾಯಿ ನುಡಿಸುವ ಮೂಲಕ ದೇಗುಲದ ಸಮುಚ್ಛಯ ನಾದದ ಲೋಕದಲ್ಲಿ ಮುಳುಗಿ ಹೋದಂತೆ ಮಾಡಿದ್ದು ಕಂಡು ಬಂದಿತು.
ಪುರಂದರ ದಾಸರ "ತೊರೆದು ಜೀವಿಸಬಹುದೆ ಹಾರಿ ನಿನ್ನ ಚರಣಗಳ "ಎನ್ನುವ ಹಾಡು ಶಹನಾಯಿ ವಾದನದಲ್ಲಿ ಸುಶ್ರಾವ್ಯವಾಗಿ ನುಡಿಸುತ್ತಿರುವಾಗ ಸೋಮೇಶ್ವರ ದೇಗುಲದ ಮೇಲೆ ಮಳೆಯ ಹನಿಗಳ ಸಿಂಚನವಾಗಿದ್ದರಿಂದ ಮಳೆ ರಾಯನು ಆಗಮಿಸಿ ಶಹನಾಯಿ ವಾದನ ಆಲಿಸುವ ಕಾರ್ಯ ಮಾಡಿರಬೇಕು ಎಂದು ಅನಿಸಿತು.ಕೃಷ್ಣ ಕ್ಷತ್ರೀಯ ಅವರ ಪುತ್ರ ರಾಘವೇಂದ್ರ ಸಂವಾದಿಯಾಗಿ ಶಹನಾಯಿ ಕುಡಿಸಿದರೆ ಇನ್ನೋರ್ವ ಪುತ್ರ ಶ್ರೀಹರಿ ಕ್ಷತ್ರೀಯ ತಬಲಾ ಸಾಥ್ ನೀಡುವ ಮೂಲಕ ಸಂಗೀತದ ಸುಧೆ ಹರಿಯುವಂತೆ ಮಾಡಿದ್ದು ಕಂಡುಬಂದಿತು.