16ಕ್ಕೆ ಕೃಷ್ಣಾ ಪುಣ್ಯಸ್ನಾನ, ಕೃಷ್ಣಾರತಿ ಕಾರ್ಯಕ್ರಮ

KannadaprabhaNewsNetwork |  
Published : Aug 13, 2025, 02:31 AM IST
16ಕ್ಕೆ ಕೃಷ್ಣಾ ಪುಣ್ಯಸ್ನಾನ, ಕೃಷ್ಣಾರತಿ ಕಾರ್ಯಕ್ರಮ| ಕೃಷ್ಣ ಜನ್ಮಾಷ್ಠಮಿ, ಮಾಜಿ ಸಚಿವ ಮುರುಗೇಶ ನಿರಾಣಿ ಜನ್ಮದಿನದ ನಿಮಿತ್ತ ವಿವಿಧ ಕಾರ್ಯಕ್ರಮ | Kannada Prabha

ಸಾರಾಂಶ

ಕೃಷ್ಣ ಜನ್ಮಾಷ್ಠಮಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಅವರ 60ನೇ ಜನ್ಮದಿನದ ನಿಮಿತ್ತ ಆಗಸ್ಟ್ 15 ರಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುಧೋಳ ನಿರಾಣಿ ಶುಗರ್ಸ್‌ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೃಷ್ಣ ಜನ್ಮಾಷ್ಠಮಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಅವರ 60ನೇ ಜನ್ಮದಿನದ ನಿಮಿತ್ತ ಆಗಸ್ಟ್ 15 ರಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುಧೋಳ ನಿರಾಣಿ ಶುಗರ್ಸ್‌ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ಆರತಿ ಸೇವಾ ಸಮಿತಿ ಹಾಗೂ ಕೃಷ್ಣಾ ತೀರ ರೈತ ಬಾಂಧವರು ಮತ್ತು ಎಂ.ಆರ್‌.ಎನ್. ಫೌಂಡೇಶನ್ ವತಿಯಿಂದ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಆ.15 ರಂದು 79ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸ್ಮರಣೀಯ ಸೇವೆ ಸಲ್ಲಿಸಿದ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಗೌರವ ಸನ್ಮಾನ ಹಾಗೂ ಮಾಜಿ ಸಚಿವ ನಿರಾಣಿ ಅವರ ಜನ್ಮದಿನದ ನಿಮಿತ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕೃಷ್ಣಾ ಪುಣ್ಯ ಸ್ನಾನ-ಕೃಷ್ಣಾ ಆರತಿ:

ಕೃಷ್ಣಾ ನದಿ ಸಂಸ್ಕೃತಿ ಪುನರುತ್ಥಾನಕ್ಕಾಗಿ ಆ.16ರಂದು ಕುಂಭಮೇಳ ಮಾದರಿಯಲ್ಲಿ ಕೃಷ್ಣಾ ಪುಣ್ಯಸ್ನಾನ-ಕೃಷ್ಣಾ ಆರತಿ ಕಾರ್ಯಕ್ರಮವನ್ನು ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಸಂಗಮೇಶ್ವರ ಮಠದ ಆವರಣ ಕೃಷ್ಣಾ ತಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಘೋರಿಗಳು, ನಾಗಾ ಸಾಧುಗಳು ಭಾಗಿ:

ಕೃಷ್ಣಾ ಆರತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು 108 ಹಿಮಾಲಯದ ಅಘೋರಿಗಳು, ನಾಗಾ ಸಾಧುಗಳು ಸೇರಿದಂತೆ ನಾಡಿನ ವಿವಿಧ ಜಗದ್ಗುರುಗಳು ಕೃಷ್ಣೆಯ ತಟಕ್ಕೆ ಆಗಮಿಸಲಿದ್ದಾರೆ. 16ರಂದು ಬೆಳಗ್ಗೆ 10ಕ್ಕೆ 250 ದೇವರ ಪಲ್ಲಕ್ಕಿಗಳು, ವಾದ್ಯಮೇಳದೊಂದಿಗೆ ಮತ್ತು ಸುಮಂಗಲೆಯರ ಪೂರ್ಣಕುಂಭದೊಂದಿಗೆ ಶೋಭಾಯಾತ್ರೆ ಹಾಗೂ ಬಾಗಿನ ಅರ್ಪಣೆ ನಡೆಯಲಿದೆ.

ಬೆಳಗ್ಗೆ 11.30ಕ್ಕೆ ಅಘೋರಿ ಹಾಗೂ ನಾಗಾ ಸಾಧುಗಳ ನೇತೃತ್ವದಲ್ಲಿ ಕೃಷ್ಣಾ ಪುಣ್ಯಸ್ನಾನ ಜರುಗಲಿದೆ. ಮಧ್ಯಾಹ್ನ 3ಕ್ಕೆ ಹೋಮ-ಹವನ, ಸಂಜೆ 4 ರಿಂದ ಮಾಜಿ ಸಚಿವ ಮುರುಗೇಶ ನಿರಾಣಿ ಅವರ ಜನ್ಮದಿನದ ಕಾರ್ಯಕ್ರಮ, ಸಂಜೆ 6 ರಿಂದ ವಿಶ್ವ ಪ್ರಸಿದ್ಧ ಗಂಗಾರತಿ ಮಾದರಿಯಲ್ಲಿ ಕೃಷ್ಣಾ ಆರತಿ ಜರುಗಲಿದೆ. ರಾತ್ರಿ 8 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ರಾತ್ರಿ 12ಕ್ಕೆ ಹಿಪ್ಪರಗಿಯ ಸಂಗಮೇಶ್ವರ ಮಠದ ಭಕ್ತರ ಬಳಗದಿಂದ ಕೃಷ್ಣ ತೊಟ್ಟಿಲೋತ್ಸವ ಜರುಗಲಿದೆ.

ಈ ಕಾರ್ಯಕ್ರಮಗಳ ಜತೆಗೆ ಎಂ.ಆರ್.ಎನ್ ಸಮೂಹದ ವಿವಿಧ ಘಟಕಗಳ ಭೂಮಿಪೂಜೆ ಹಾಗೂ ಉದ್ಘಾಟನೆ ಕಾರ್ಯಕ್ರಮ, ಬೆಳಗ್ಗೆ 9ಕ್ಕೆ ಸಾವಳಗಿ, ಬೀಳಗಿ, ಬನಹಟ್ಟಿ, ಮುಧೋಳ ಹಾಗೂ ಜಮಖಂಡಿಯಲ್ಲಿ ಆರೋಗ್ಯ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಹಾಗೂ ಬಾದಾಮಿಯಲ್ಲಿ 19ರಂದು, ವಜ್ಜರಮಟ್ಟಿ, ಕೆರೂರು ಹಾಗೂ ಅಥಣಿ ತಾಲೂಕಿನ ನಂದೇಶ್ವರದಲ್ಲಿ 20ರಂದು, ಲೋಕಾಪುರದಲ್ಲಿ 21ರಂದು, ಯಂಡಿಗೇರಿಯಲ್ಲಿ 22 ರಂದು ಹಾಗೂ ಸಿದ್ದಾಪುರದಲ್ಲಿ 23 ರಂದು ಬೆಳಗ್ಗೆ 9 ಗಂಟೆಯಿಂದ ಕೃಷಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. 18ರಂದು ಸಿದ್ದಾಪುರದಲ್ಲಿ, 19ರಂದು ಒಂಟಗೋಡಿ, ಯಂಡಿಗೇರಿ ಹಾಗೂ ಹೂಲಗೇರಿಯಲ್ಲಿ, 21ರಂದು ಶಿರೋಳ, ಬೆಳಗಲಿ ಹಾಗೂ ಬಾದಾಮಿಯಲ್ಲಿ ಮತ್ತು 22ರಂದು ಕೆರೂರ ಹಾಗೂ ಕಮತಗಿಯಲ್ಲಿ ಬೆಳಗ್ಗೆ 9 ರಿಂದ ಉಚಿತ ಪಶು ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೃಷ್ಣಾ ತೀರದ ರೈತ ಬಾಂಧವರಾದ ಶಂಕರಗೌಡ ಪಾಟೀಲ, ಸೋಮನಾಥಗೌಡ ಪಾಟೀಲ, ಡಾ. ರವಿ ನಂದಗಾಂವ, ಸಂಗಮೇಶ ಮಾಳವಾಡ ಹಾಗೂ ವೆಂಕಟೇಶ ಜಂಬಗಿ ಸೇರಿ ಇತರರಿದ್ದರು.

ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಅಭಿಯಾನ: ಮುಧೋಳ ಹಾಗೂ ಬೀಳಗಿ ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳ ದತ್ತು ಪಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಮೂಲಕ 100 ವಿದ್ಯಾರ್ಥಿಗಳನ್ನು ದತ್ತು ಪಡೆದು, ಅವರನ್ನು ಡಿಗ್ರಿವರೆಗೂ ಓದಿಸುವ ಜವಾಬ್ದಾರಿಯನ್ನು ಎಂ.ಆರ್.ಎನ್ ಫೌಂಡೇಷನ್ ಹೊರಲಿದೆ ಎಂದು ಮುಧೋಳದ ನಿರಾಣಿ ಶುಗರ್ಸ್‌ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ತಿಳಿಸಿದರು.

ಉತ್ತರ ಕರ್ನಾಟಕದವರು ಒಗ್ಗಟ್ಟು ಪ್ರದರ್ಶಿಸುವಲ್ಲಿ ಹಿಂದೆ ಉಳಿದ ಕಾರಣದಿಂದಲೇ ಉತ್ತರ ಕರ್ನಾಟಕ ಎಲ್ಲ ದೃಷ್ಟಿಯಿಂದ ಹಿಂದೆ ಉಳಿಯಲು ಪ್ರಮುಖ ಕಾರಣ. ಏಳೆಂಟು ಜಿಲ್ಲೆಯ ಜನಪ್ರತಿನಿಧಿಗಳು ಕೃಷ್ಣೆಯ ಬಗ್ಗೆ ಧ್ವನಿ ಎತ್ತಲಿರುವುದು ನಮ್ಮ ದುರ್ದೈವ.

- ಸಂಗಮೇಶ ನಿರಾಣಿ, ಮುಧೋಳ ನಿರಾಣಿ ಶುಗರ್ಸ್‌ ಕಾರ್ಯನಿರ್ವಾಹಕ ನಿದರ್ದೇಶಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯಲ್ಲಿಲ್ಲ ಕೀಳರಿಮೆ, ತಾರತಮ್ಯ
ಶಿಕ್ಷಕರ ಅರ್ಹತಾ ಪರೀಕ್ಷೆ: 8304 ಅಭ್ಯರ್ಥಿಗಳು ಹಾಜರು