ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಧರ್ಮವೆಂಬುದು ಮಾನವ ಹಿತ ಹಾಗೂ ಮಾನವೀಯತೆ, ಜೀವಕಾರುಣ್ಯದಿಂದ ತುಂಬಿದೆ. ಸಕಲ ಜೀವಾತ್ಮರಿಗೆ ಲೇಸ ಬಯಸುವ ಮನಸ್ಸು ಮಹಾಮಾನವತಾ ವಾದ ಆಗುತ್ತದೆ. ಮಾನವರ ನಡುವೆ ಸಾಮಾರಸ್ಯವಿರಬೇಕು. ಧರ್ಮಗಳ ಮಧ್ಯೆ ತಾತ್ವಿಕ ಸಂಘರ್ಷವಿರಬೇಕೇ ಹೊರತು ಯುದ್ಧೋನ್ಮಾದ, ಸಂಘರ್ಷ ಇರಬಾರದು. ಮಾನವ ಸರ್ವಾಂಗೀಣ ವಿಕಾಸವಾದ ಇರಬೇಕು. ಮಾನವನ ವಿನಾಶವಾದ ಇರಬಾರದು ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.ನಗರದ ಶ್ರೀ ಶರಣಬಸವಾಶ್ರಮದಲ್ಲಿ ಶರಣಬಸವ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು, ಜಗತ್ತಿನೆಲ್ಲೆಡೆ ಒಂದಲ್ಲ ಒಂದು ರೀತಿಯಲ್ಲಿ ಧಾರ್ಮಿಕ ಮೂಲಭೂತವೆನ್ನುವುದು ವಿಜೃಂಭಿಸುತ್ತಿರುವ ಇಂದಿನ ದಿನಗಳಲ್ಲಿ ಲೋಕದ ಎಲ್ಲ ಶ್ರೇಷ್ಠ ಚಿಂತನೆಯ ಕಿರಣಗಳು ಹಾದು ಎಲ್ಲರ ಹೃದಯದೊಳಗೆ ಘನೀಕರಿಸಿರುವ ತಮಂಧವನ್ನು ಪರಿಹರಿಸಬೇಕಾದ ಆವಶ್ಯಕತೆಯಿದೆ. ನಿತ್ಯ ಕುರುಕ್ಷೇತ್ರವಾಗಿರುವ ಈ ಸುಂದರ ಭೂಮಿಯನ್ನು ಸರ್ವಧರ್ಮ ಕ್ಷೇತ್ರವನ್ನಾಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಎಲ್ಲಿ ಒಳಿತಿದೆಯೋ ಅದನ್ನು ಓಲೈಸಿ ಎದೆಯ ಕದ ತೆರೆದು ಎಲ್ಲರ ಹೃದಯಗಳೂ ಅದನ್ನು ಆಹ್ವಾನಿಸಬೇಕಾಗಿದೆ. ಇಂತಹ ಪ್ರಕ್ರಿಯೆಗೆ ಪೂರಕ ವಿಚಾರಗಳನ್ನು ಒದಗಿಸುವುದೇ ಈ ಶ್ರಾವಣಮಾಸದ ಮೂಲ ಉದ್ದೇಶ. ಜಗತ್ತಿನ ಎಲ್ಲ ಧರ್ಮಗಳ, ಚಿಂತನೆಗಳ ಬಗ್ಗೆ ಭಕ್ತರ ಕಣ್ಣುಗಳನ್ನು ತೆರೆಸುವ ಸಾರಭೂತ ಚಿಂತನ ಮಂಥನದಲ್ಲಿ ಸಂಕಲಿತವಾಗಿವೆ ಎಂದು ಹೇಳಿದರು.
ಶಿವಮೊಗ್ಗದ ನಾರಾಯಾಣ ಗುರುಮಠ, ಈಡಿಗರ ಗುರುಪೀಠದ ಜಗದ್ಗುರು ರೇಣುಕಾನಂದ ಸ್ವಾಮೀಜಿ ಮಾತನಾಡಿ, ಸಮಸ್ತ ಧರ್ಮಗಳಿಗೂ ಕೇವಲ ಜ್ಞಾನಸ್ವರೂಪವುಳ್ಳ ಬ್ರಹ್ಮವೇ ಪರಮಾರ್ಥ. ಅದು ನಿತ್ಯ, ಶುದ್ಧ, ಬುದ್ಧ, ಮುಕ್ತ ಸ್ವಭಾವ ಉಳ್ಳದ್ದಾದರೂ ಜೀವಾತ್ಮನೊಡನೆ ಸಿದ್ಧವಾಗುತ್ತದೆ. ಆದ್ದರಿಂದಲೇ ಅದು ಬಂಧನಕ್ಕೊಳಗಾಗುತ್ತದೆ ಹಾಗೂ ಮುಕ್ತವೂ ಆಗುತ್ತದೆ. ಅಹಂಕಾರ ಬಿಡಿ. ಭಗವಂತ ಹಾಗೂ ಭಕ್ತರನ್ನು ಗೌರವಿಸಿ. ಭಗವಂತನ ಗುರುಹಿರಿಯರ ಅನಾಥ ಅಬಲೆಯರ ಸೇವೆ ಮಾಡಿ. ದೋಷಮಕ್ತ ಮಾನವ ದುರ್ಲಭ. ಇತರರನ್ನು ಹೀಗಳೆಯಬೇಡಿ. ಶುದ್ಧ ಮನಸ್ಸು. ಶುದ್ಧ ಆಚರಣೆ ಮುಖ್ಯ. ನಾವು ಭಕ್ತಿಯಿಂದ ಪೂಜಿಸಿದರೆ ದೇವರು ಒಲಿಯುತ್ತಾನೆ. ಜಾತಿ ಮತ ಬೇಧವಿಲ್ಲದೆ ಎಲ್ಲರನ್ನೂ ಪ್ರೀತಿಯಿಂದ ಕಾಣಿ. ಮನುಷ್ಯರೆಲ್ಲಾ ಒಂದೇ ಎಂದು ಸಂದೇಶ ನೀಡಿದರು.ಕೊರಟಗೆರೆಯ ಮಹಾಲಿಂಗ ಶ್ರೀಗಳು ಮಾತನಾಡಿ, ಜ್ಞಾನಿ ತಾನಾದೊಡೆ ಧನರಹಿತನಾದರೂ ಸದಾ ಸಂತುಷ್ಟನಾಗಿರುತ್ತಾನೆ. ಸಹಾಯವಿಲ್ಲದವನಾದರೂ ಮಹಾಬಲನಾಗಿರುತ್ತಾನೆ. ವಿಷಯ ಭೋಗಗಳನ್ನು ಅನುಭವಿಸದಿದ್ದರೂ ನಿತ್ಯತೃಪ್ತನಾಗಿರುತ್ತಾನೆ. ಅಸದೃಶ್ಯನಾಗಿದ್ದರೂ ಸಮದೃಷ್ಟಿಯುಳ್ಳವನಾಗಿರುತ್ತಾನೆ. ತನ್ನ ನಿಜವಾದ ಆತ್ಮಸ್ವರೂಪದ ಅನುಸಂಧಾನವೇ ಭಕ್ತಿಯೆನಿಸುವುದು. ಮೋಕ್ಷದ ದಿವ್ಯಪಥಕ್ಕೆ ಭಕ್ತಿಯೇ ಶ್ರೇಷ್ಠವಾದುದು ಎಂದು ಹೇಳಿದರು.
ಉತ್ಸವದಲ್ಲಿ ಪ್ರವಚನಕಾರರಾದ ರಾಚಯ್ಯ ಶಾಸ್ತ್ರಿಗಳು ಶ್ರೀಪೀಠದ ಧರ್ಮದರ್ಶಿಗಳು, ಅಕ್ಕನ ಬಳಗದವರು ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿವಿಧ ಜಾನಪದ ಕಲಾತಂಡಗಳ ಕಲರವ ಏರ್ಪಟ್ಚಿತ್ತು.ಅಡ್ಡಪಲ್ಲಕ್ಕಿ ಉತ್ಸವ ಶ್ರೀಮಠದಿಂದ, ಬಾಗವಾಡಿ ಕಿರಣಿ ಅಂಗಡಿ,ಪಲ್ಯಚಾಳ, ಹಳೇ ವೀರಭದ್ರೇಶ್ವರ ದೇವಸ್ಥಾನ, ಜಯನಗರ ಬಡಾವಣೆ, ಗುಜ್ಜಾರ್ ಲೇಔಟ್, ಪಂಚಮುಖಿ ಆಂಜನೇಯ ದೇವಸ್ಥಾನ ಕೆಂಪ್ ರೋಡ್, ಆಫೀಸ್ ಓಲ್ಡ್ ಎಂಪ್ಲಾಯಮೆಂಟ್ ಆಫೀಸ್ ಮೂಲಕ, ಶ್ರೀ ಶರಣಬಸವಾಶ್ರಮಕ್ಕೆ ತಲುಪಿತು.