ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ತಹಸೀಲ್ದಾರ ಕಚೇರಿ, ಭೂಮಾಪನಾ ಇಲಾಖೆ ಹಾಗೂ ಪುರಸಭೆ ಕಚೇರಿಗಳಿಗೆ ಲೋಕಾಯುಕ್ತ ನಿಬಂಧಕ, ನಿವೃತ್ತ ನ್ಯಾ. ಎಸ್.ಎಲ್.ಪಾಟೀಲ ಹಾಗೂ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಕಾರ್ಯವೈಖರಿ ಪರಿಶೀಲಿಸಿದರು.ತಹಸೀಲ್ದಾರ ಕಚೇರಿಗೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಕರುಣೇಶಗೌಡ ಭೇಟಿ ನೀಡಿ ಸಿಬ್ಬಂದಿ ಏನು ಕೆಲಸ ಮಾಡುತ್ತಿದ್ದಾರೆ. ಇದುವರೆಗೂ ವಿಲೇವಾರಿ ಮಾಡಿರುವ ಕೆಲಸ, ಇನ್ನೂ ಮಾಡಬೇಕಾದ ಕಾರ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಯಾವುದೇ ಕಾರಣಕ್ಕೂ ಸಾರ್ವಜನಿಕರ ಕೆಲಸಗಳನ್ನು ವಿಳಂಬವಿಲ್ಲದೇ ಮಾಡಿಕೊಡುವಂತೆ ಸೂಚಿಸಿದರು.
ಭೂಮಾಪನಾ ಇಲಾಖೆ ಕಚೇರಿಗೆ ಭೇಟಿ ನೀಡಿದ್ದ ಲೋಕಾಯುಕ್ತ ನಿಬಂಧಕ, ನಿವೃತ್ತ ನ್ಯಾ. ಎಸ್.ಎಲ್.ಪಾಟೀಲ ಅವರು, ತಮ್ಮ ಇಲಾಖೆಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಹಾಕುವ ವ್ಯವಸ್ಥೆ ಇದೆ. ಆದರೂ ಮೊದಲು ಹಾಕಿದವರನ್ನು ಬಿಟ್ಟು ನಂತರ ಆನ್‌ಲೈನ್ ಅರ್ಜಿ ಹಾಕಿದವರ ಕೆಲಸ ಮಾಡಿಕೊಡಲಾಗುತ್ತದೆ. ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಅರ್ಜಿಗಳನ್ನು ಸಾಕಷ್ಟು ಬಾಕಿ ಇರಿಸಿಕೊಳ್ಳಲಾಗಿದೆ. ಜನರಿಗೆ ನಿಗದಿತ ಅವಧಿಯಲ್ಲಿ ಕೆಲಸ ಮಾಡಿಕೊಡುತ್ತಿಲ್ಲ ಎಂದು ದೂರು ಬಂದಿವೆ. ಇದರ ಬಗ್ಗೆ ಮಾಹಿತಿ ನೀಡುವಂತೆ ಭೂಮಾಪನಾ ಅಧಿಕಾರಿ ಜಿ.ಬಿ.ವಗ್ಗನ್ನವರ ಕೇಳಿದರು. ಆಗ ಅವರು ನಮ್ಮ ಇಲಾಖೆಯಲ್ಲಿ ೩೫ ಸಿಬ್ಬಂದಿಗಳ ಪೈಕಿ ೧೫ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಗಳ ಕೊರತೆಯಿದೆ. ಲಭ್ಯವಿರುವ ಸಿಬ್ಬಂದಿಗಳಿಂದ ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಡಿಸೆಂಬರ್-೨೦೨೨ ರಿಂದ ಇಲ್ಲಿವರೆಗೆ ಒಟ್ಟು ೧೧,೭೩೦ ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ೧೦,೩೩೨ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ೧,೩೯೮ ಅರ್ಜಿಗಳು ಬಾಕಿಯಿವೆ ಎಂದು ಮಾಹಿತಿ ನೀಡಿದರು. ಗೇಟ್ ಹತ್ತಿರ ಕುಳಿತಿದ್ದ ಮಸಬಿನಾಳದ ವೃದ್ಧೆ ಶಾಂತಮ್ಮ ಕುಂಬಾರನ್ನು ಲೋಕಾಯುಕ್ತ ಅಧಿಕಾರಿಗಳ ತಂಡ ಮಾತನಾಡಿಸಿದರು. ತಮ್ಮ ಜಮೀನಿಗೆ ಸಂಬಂಧಿಸಿದ ಶೀಟ್ ಪಡೆದುಕೊಳ್ಳಲು ಮಗನೊಂದಿಗೆ ಬಂದಿರುವುದಾಗಿ ತಿಳಿಸಿದಳು. ತಕ್ಷಣವೇ ಭೂಮಾಪನಾ ವಿಭಾಗಕ್ಕೆ ತೆರಳಿದ ಅಧಿಕಾರಿಗಳು ಇಂದೇ ವೃದ್ಧೆಯ ಕೆಲಸ ಮಾಡಿಕೊಡುವಂತೆ ಸೂಚಿಸಿದರು.ಇನ್ನು, ಪುರಸಭೆಗೆ ಭೇಟಿ ನೀಡಿದ ತಂಡ, ಸಿಬ್ಬಂದಿ ಮಾಹಿತಿ, ಹಾಜರಾತಿ ಮಾಹಿತಿ, ಹಣಕಾಸು ರಜಿಸ್ಟರ್, ಚಲನವಲನ ಸಹಿ, ಮಾಹಿತಿ ಹಕ್ಕು ಅಧಿನಿಯಮದಡಿ ಬಂದ ಅರ್ಜಿಗಳ ಕುರಿತು, ತೆರಿಗೆ ವಿವರ, ಕಾಮಗಾರಿಗಳ ಮಾಹಿತಿ, ನ್ಯಾಯಾಲಯದ ಪ್ರಕರಣಗಳ ಕುರಿತು ಮಾಹಿತಿ ಪಡೆದರು. ಅಲ್ಲದೇ, ಎಲ್ಲ ಸಿಬ್ಬಂದಿಗಳ ಪೋನ್ ಪೇ ವಿವರವನ್ನು ಪರಿಶೀಲಿಸಿದರು.