ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ
ಪಟ್ಟಣದ ಆರಾಧ್ಯದೈವ ಬಸವೇಶ್ವರ ಜಾತ್ರಾಮಹೋತ್ಸವ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಐತಿಹಾಸಿಕ ಹೋರಿಮಟ್ಟಿ ಗುಡ್ಡಕ್ಕೆ ತೆರಳಿದ್ದ ಅಲಂಕೃತ ಮೂಲನಂದೀಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವ ಸಂಪನ್ನಗೊಂಡಿತು. ದೇವಸ್ಥಾನದ ಆವರಣದಲ್ಲಿ ಮಂಗಳವಾರ ಭಕ್ತರ ಜಯಘೋಷ, ಬಸವಣ್ಣನ ಕುದರಿ ಶಿವಾನಂದ ಈರಕಾರಮುತ್ಯಾ ಅವರ ಹೇಳಿಕೆ ನಂತರ ದೇವಸ್ಥಾನದಲ್ಲಿನ ಬೆಳ್ಳಿ ಪಲ್ಲಕ್ಕಿಯನ್ನು ಕಟ್ಟೆಗೆ ಪ್ರತಿಷ್ಠಾಪಿಸುವ ಮೂಲಕ ಉತ್ಸವವನ್ನು ಸಂಪನ್ನಗೊಳಿಸಲಾಯಿತು.ಐತಿಹಾಸಿಕ ಹೋರಿಮಟ್ಟಿ ಗುಡ್ಡಕ್ಕೆ ಸೋಮವಾರ ತೆರಳಿದ್ದ ಮೂಲನಂದೀಶ್ವರ ದೇವರ ಬೆಳ್ಳಿ ಪಲ್ಲಕ್ಕಿ ಉತ್ಸವ ಸಂಜೆ ಆಕರ್ಷಕ ಸಿಡಿಮದ್ದು, ವಿವಿಧ ಕಲಾ ತಂಡಗಳ ಮೆರವಣಿಗೆ, ವಿವಿಧ ವಾದ್ಯಮೇಳದೊಂದಿಗೆ ಭಕ್ತರ ಜಯಘೋಷದೊಂದಿಗೆ ಪುರ ಪ್ರವೇಶ ಮಾಡಿತು. ನಂತರ ಅದ್ದೂರಿ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತಲುಪಿದ ನಂತರ ರಾತ್ರಿ ಪಲ್ಲಕ್ಕಿ ಕಟ್ಟೆಗೆ ಮರಳಿತು. ಮಂಗಳವಾರ ನಸುಕಿನ ಜಾವ ಬಸವಣ್ಣನ ಕುದರಿ ಶಿವಾನಂದ ಈರಕಾರಮುತ್ಯಾ ಪ್ರಾಂಗಣದಲ್ಲಿ ಪ್ರದಕ್ಷಿಣೆ ಬಳಿಕ ವರ್ಷದ ಭವಿಷ್ಯವನ್ನು ನುಡಿದರು. ಹೇಳಿಕೆ ನಂತರ ಪಲ್ಲಕ್ಕಿಯು ಇನ್ನೊಂದು ಪ್ರದಕ್ಷಿಣೆ ಬಳಿಕ ಸ್ವಸ್ಥಾನಕ್ಕೆ ಆಗಮಿಸುವ ಮೂಲಕ ಪಲ್ಲಕ್ಕಿ ಉತ್ಸವ ಸಂಪನ್ನಗೊಂಡಿತ್ತು. ಪಲ್ಲಕ್ಕಿ ಉತ್ಸವದಲ್ಲಿ ಬಸವರಾಜ ಹಾರಿವಾಳ, ಸಂಗಪ್ಪ ಡಂಬಳ, ಚಂದ್ರಶೇಖರ ಮುರಾಳ, ಪಾವಡೆಪ್ಪ ಕರಮಳಕರ, ಶರಣಪ್ಪ ಕೂಡಗಿ, ನಾಗಪ್ಪ ಬಾಡಗಿ, ಸಿದ್ದಲಿಂಗ ಪೂಜಾರಿ, ಗಿರೀಶ ಬಿರಾದಾರ, ಪುಟ್ಟು ಪಟ್ಟಣಶೆಟ್ಟಿ, ಶಿವು ಸಿಂದಗಿ, ಕುಮಾರ ಒಣರೊಟ್ಟಿ, ಪರಶುರಾಮ ದೇವಕರ, ಸಿದ್ದು ಚವ್ಹಾಣ, ಪ್ರಭು ಮಾಲಗಾರ, ಮಂಜು ಹಾರಿವಾಳ, ಭೀಮು ನಿಕ್ಕಂ, ಮಲ್ಲು ಡೋಣೂರ, ಸಂತೋಷ ಕೂಡಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಬಾಕ್ಸ್:ನಂದೀಶನ ಪ್ರಸಾದದಿಂದ ಬಸವನ ಜನನ
ಮೂಲನಂದೀಶ್ವರನ ವರಪ್ರಸಾದದಿಂದ ಬಸವೇಶ್ವರರ ತಾಯಿ ಮಾದಲಾಂಬಿಕೆಯು ಬಸವೇಶ್ವರರಿಗೆ ಜನ್ಮ ನೀಡಿದಳು ಎಂಬ ಪ್ರತೀತಿಯಿದೆ. ಬಸವೇಶ್ವರರು ಬಾಲ್ಯದಲ್ಲಿ ಮೂಲನಂದೀಶ್ವರ ದೇವಸ್ಥಾನ ಪ್ರಾಂಗಣ, ಬಾವಿಯ ಸುತ್ತಮುತ್ತ ತನ್ನ ಗೆಳೆಯರರೊಂದಿಗೆ ಆಟ ಆಡುವ ಜೊತೆಗೆ ಸಮೀಪದ ಹೋರಿಮಟ್ಟಿ ಗುಡ್ಡದಲ್ಲಿಯೂ ತನ್ನ ಬಾಲ್ಯದ ಆಟ, ಪೂಜೆ ಪುನಸ್ಕಾರ ಮಾಡಿದ್ದರು. ಇದರ ಸವಿನೆನಪಿಗಾಗಿ ಪಲ್ಲಕ್ಕಿ ಉತ್ಸವವು ಹೋರಿಮಟ್ಟಿ ಗುಡ್ಡಕ್ಕೆ ತೆರಳಿ ಮರಳಿ ದೇವಸ್ಥಾನಕ್ಕೆ ಬರುತ್ತದೆ ಎಂಬ ಪ್ರತೀತಿ ಇದೆ. ಇದರ ಬಗ್ಗೆ ಹೆಚ್ಚು ಬೆಳಕು ಚೆಲ್ಲುವ ಅಗತ್ಯವಿದೆ.