ಮಂಗಳೂರು: ತುಳು ಭಾಷೆ ಪಂಚ ದ್ರಾವಿಡ ಭಾಷೆಗಳಲ್ಲಿ ಹಳೆಯ ಭಾಷೆಯಾಗಿದ್ದರೂ ರಾಜ್ಯದ ಅಧಿಕೃತ ಸ್ಥಾನಮಾನ ಇನ್ನೂ ದೊರಕದಿರುವುದು ವಿಷಾದನೀಯ. ಶೀಘ್ರವಾಗಿ ತುಳು ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ಲಭಿಸಲಿ ಎಂದು ಹಿರಿಯ ಲೇಖಕಿ ಹಾಗೂ ವಿಶ್ರಾಂತ ಪ್ರಾಂಶುಪಾಲೆ ಚಂದ್ರಕಲಾ ನಂದಾವರ ಹೇಳಿದ್ದಾರೆ.
ಎಲ್ಲರೂ ವ್ಯಾವಹಾರಿಕವಾಗಿ ತುಳು ಮಾತಾಡಬೇಕು, ಸರ್ಕಾರಿ ಕಚೇರಿಗಳಲ್ಲೂ ತುಳು ಬಳಸಬೇಕು. ಯಾವ ಭಾಷೆಯೂ ಮೇಲಲ್ಲ, ಕೀಳಲ್ಲ ಎನ್ನುವ ಭಾವನೆ ರೂಪಿಸಿಕೊಳ್ಳಬೇಕು. ಹಾಗೆಯೇ ಭಾಷೆಗಳು ಇರುವುದು ಸಾಮರಸ್ಯಕ್ಕಾಗಿ, ದ್ವೇಷಕ್ಕಾಗಿ ಅಲ್ಲ ಎಂದು ಅವರು ಹೇಳಿದರು.
ತುಳು ಭಾಷೆಯಲ್ಲಿ ಅಗಾಧವಾದ ಪಾಂಡಿತ್ಯಪೂರ್ಣ ಸಾಹಿತ್ಯ ಕೃತಿಗಳಿವೆ, ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ತುಳು ಸಾಹಿತ್ಯದ ಪರಿಚಯವಾಗಲಿ ಎಂದು ಚಂದ್ರಕಲಾ ನಂದಾವರ ಆಶಯ ವ್ಯಕ್ತಪಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳುವಿನಲ್ಲಿ ಹಾಗೂ ಅನ್ಯ ಭಾಷೆಗಳಲ್ಲಿ ತುಳುವಿನ ಬಗ್ಗೆ ಸಾವಿರಾರು ಪುಸ್ತಕಗಳಿವೆ. ಹೊಸ ತಲೆಮಾರಿನವರಿಗೆ ತುಳುನಾಡು ಹಾಗೂ ತುಳು ಸಾಹಿತ್ಯದ ಆಳ, ವಿಸ್ತಾರ ತಿಳಿಯಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.