ಕನ್ನಡಪ್ರಭ ವಾರ್ತೆ ಉಡುಪಿ
ಕೃಷ್ಣನ ಜನ್ಮಾಷ್ಟಮಿ ಪ್ರಯಕ್ತ ಕೃಷ್ಣ ಭಕ್ತರು ತಂತಮ್ಮ ಮನೆಗಳಲ್ಲಿ ದಿನವಿಡೀ ಉಪವಾಸವಿದ್ದು, ಕೃಷ್ಣನ ಭಜನೆ, ಪಾರಾಯಣಗಳನ್ನು ನಡೆಸಿದರು. ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರು ದಿನವಿಡೀ ಬಾಲಕೃಷ್ಣನಿಗೆ ವಿವಿಧ ಅಲಂಕಾರ, ಮಹಾಪೂಜೆ, ನೈವೇದ್ಯಗಳನ್ನು ನಡೆಸಿ, ಮಧ್ಯರಾತ್ರಿ ಅರ್ಘ್ಯಪ್ರದಾನ ಮಾಡುವುದರೊಂದಿಗೆ ಕೃಷ್ಣನ ಹುಟ್ಟುಹಬ್ಬದ ಆಚರಣೆ ಸಂಪ್ರದಾಯದಂತೆ ನೆರವೇರಿತು.
ಮುಂಜಾನೆಯಿಂದಲೇ ಸಾವಿರಾರು ಮಂದಿ ಭಕ್ತರು ಕೃಷ್ಣಮಠಕ್ಕೆ ಭೇಟಿ ನೀಡಿ, ಅಂಬೆಗಾಲಿಕ್ಕುವ ಮಗುವಿನ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಕೃಷ್ಣನ ದರ್ಶನ ಪಡೆದು ಪುನೀತರಾದರು.ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಬಾಲಕೃಷ್ಣನ ತೊಟ್ಟಿಲು ತೂಗುವ ಡೋಲೋತ್ಸವ ಆಯೋಜಿಸಿದ್ದರು. ಮಧ್ವಮಂಟದಲ್ಲಿ ತೊಟ್ಟಿಲಿನಲ್ಲಿ ಬಾಲಕೃಷ್ಣನಿಗೆ ಪೂಜೆ ನೆರವೇರಿಸಿ, ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥರೊಂದಿಗೆ ಕೃಷ್ಣನ ತೊಟ್ಟಿಲು ತೂಗಿ ಡೋಲೊತ್ಸವಕ್ಕೆ ಚಾಲನೆ ನೀಡಿದರು. ಸಾರ್ವಜನಿಕರಿಗೂ ಕೃಷ್ಣನ ತೊಟ್ಟಿಲು ತೂಗುವ ಸೇವೆಯ ಅಪೂರ್ವ ಅವಕಾಶವನ್ನು ಒದಗಿಸಲಾಗಿತ್ತು.
ಸೋಮವಾರ ಉಡುಪಿಯ ಬೀದಿಬೀದಿಗಳನ್ನು ಕೃಷ್ಣನ ದರ್ಶನವಾಗುತಿತ್ತು. ತಾಯಂದಿರುವ ತಮ್ಮ ಮಕ್ಕಳಿಗೆ ಮುದ್ದುಕೃಷ್ಣನ ನಾನಾಬಗೆಯ ವೇಷಗಳನ್ನು ಹಾಕಿ ಕೃಷ್ಣಮಠಕ್ಕೆ ಕರೆ ತಂದಿದ್ದರು.
* ನಗರವಿಡೀ ತಾಸೆಯ ಸದ್ದು:
ಈ ಬಾರಿಯೂ ದರ್ಪಣ ನೃತ್ಯ ಸಂಸ್ಥೆಯ ಬಾಲಕಿಯರು ಮತ್ತು ಯುವತಿಯರು ಹುಲಿವೇಷವನ್ನು ಧರಿಸಿದ್ದು, ಈ ಹೆಣ್ಣು ಹುಲಿಗಳು ಮೊಸರುಕುಡಿಕೆಯ ವಿಶೇಷ ಆಕರ್ಷಣೆಯಾಗಲಿವೆ...........................
ಕೃಷ್ಣ ಜನ್ಮಾಷ್ಟಮಿಯಂದು ಬಾಲಕೃಷ್ಣನಿಗೆ ಎಳ್ಳು, ಕಡಲೆ, ಹೆಸರು ಇತ್ಯಾದಿಗಳಿಂದ ತಯಾರಿಸಿದ ಲಡ್ಡುಗಳನ್ನು ಸಮರ್ಪಿಸಲಾಗುತ್ತದೆ. ಈ ಲಡ್ಡುಗಳನ್ನು ಸ್ವತಃ ಪರ್ಯಾಯ ಶ್ರೀಗಳೇ ಕೈಯಾರೆ ತಯಾರಿಸಿ, ಲಡ್ಡು ತಯಾರಿಸುವ ಸಂಪ್ರದಾಯಕ್ಕೆ ಚಾಲನೆ ನೀಡಿದರು.