ಬರಿದಾಗುತ್ತಿರುವ ಕೃಷ್ಣೆಯ ಒಡಲು!

KannadaprabhaNewsNetwork |  
Published : Mar 12, 2024, 02:02 AM IST
್್್್್್‌ | Kannada Prabha

ಸಾರಾಂಶ

ಈ ಭಾಗದ ಜನ ಹಾಗೂ ಜಾನುವಾರುಗಳ ಜೀವನಾಡಿ ಆಗಿರುವ ಕೃಷ್ಣೆಯ ಒಡಲು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಜನತೆಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಸಿದ್ದಯ್ಯ ಹಿರೇಮಠ

ಕನ್ನಡಪ್ರಭ ವಾರ್ತೆ ಕಾಗವಾಡ

ಈ ಭಾಗದ ಜನ ಹಾಗೂ ಜಾನುವಾರುಗಳ ಜೀವನಾಡಿ ಆಗಿರುವ ಕೃಷ್ಣೆಯ ಒಡಲು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಜನತೆಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಮೊದಲೇ ಬರಗಾಲದ ಛಾಯೆ ಆವರಿಸುವ ಈ ಪ್ರದೇಶದಲ್ಲಿ ಕುಡಿಯುವ ನೀರಿನ ಮೂಲಾಧಾರವಾಗಿದ್ದ ಕೃಷ್ಣೆಯ ಒಡಲು ಬತ್ತುತ್ತಿರುವುದನ್ನು ಗಮನಿಸಿದರೇ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಲಕ್ಷಣಗಳು ಕಾಣುತ್ತಿವೆ. ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದರೆ ಹಿಪ್ಪರಗಿ ಆಣೆಕಟ್ಟೆಯ ಅಧಿಕಾರಿಗಳ ಅಂಕಿ ಅಂಶಗಳ ಪ್ರಕಾರ ಕೃಷ್ಣಾ ನದಿಯಲ್ಲಿ ಈಗ ಸುಮಾರು 1.5 ಟಿಎಂಸಿ ಅಡಿ ನೀರು ಲಭ್ಯವಿದ್ದು, ಜನರ ಬಳಕೆ ಹಾಗೂ ಬಿರು ಬಿಸಿಲಿನ ತಾಪದಿಂದಾಗಿ ಪ್ರತಿದಿನ ಸುಮಾರು ಅರ್ಧ ಅಡಿ ನೀರು ಇಳಿಕೆಯಾಗುತ್ತಿದೆ. ಒಂದು ವೇಳೆ ಇದೇ ಸ್ಥಿತಿ ಮುಂದುವರೆದಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಕೃಷ್ಣೆಯ ಒಡಲು ಬರಿದಾಗುವುದರಲ್ಲಿ ಸಂದೇಹವಿಲ್ಲ.

ಈ ನಿಟ್ಟಿನಲ್ಲಿ ನದಿಗೆ ಕೂಡಲೇ ಮಹಾರಾಷ್ಟ್ರದ ಡ್ಯಾಂಗಳಿಂದ ನೀರು ಬಿಡುವ ವ್ಯವಸ್ಥೆ ಮಾಡುವಂತೆ ಅಥಣಿ, ಚಿಕ್ಕೋಡಿ, ರಾಯಬಾಗ ಹಾಗೂ ಜಮಖಂಡಿ ಭಾಗದ ರೈತರು ಮತ್ತು ಜನಸಾಮಾನ್ಯರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.

ಮಹಾರಾಷ್ಟ್ರದ ಪ್ರಮುಖ ಡ್ಯಾಂಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದೆ. ಸದ್ಯ ಕೊಯ್ನಾ ಜಲಾಶಯದಲ್ಲಿ 60 ಟಿಎಂಸಿ ನೀರಿದೆ. ಕೊಯ್ನಾ, ಕಾಳಮ್ಮವಾಡಿ ಸೇರಿದಂತೆ ಅಗತ್ಯವಿರುವ ಎಲ್ಲ ಡ್ಯಾಂಗಳಿಂದ ನೀರು ಬಿಡಿಸುವಲ್ಲಿ ಜನಪ್ರತಿನಿಧಿಗಳು ಆಸಕ್ತಿ ತೋರಿಸಬೇಕಾಗಿದೆ.

ಮಾರ್ಚ್ ಕೊನೆಯೊಳಗಾಗಿ ಕೃಷ್ಣಾ ನದಿಗೆ 2 ಟಿಎಂಸಿ ಅಡಿ ನೀರು ಬಿಡುವ ವ್ಯವಸ್ಥೆ ಆಗಬೇಕಿದೆ. ಏಕೆಂದರೆ ಸಂಪೂರ್ಣ ಬರಿದಾದ ನಂತರ ನದಿಗೆ ನೀರು ಬಿಟ್ಟರೆ ಪ್ರಯೋಜನವಿಲ್ಲ ಎಂಬುವುದು ಈ ಭಾಗದ ಜನರ ಅಭಿಪ್ರಾಯ.

ನೀರು ಹರಿಯುತ್ತಿರುವ ಈ ಸಂದರ್ಭದಲ್ಲಿಯೇ ಜನಪ್ರತಿನಿಧಿಗಳು ನದಿಗೆ ನೀರು ಹರಿಸಿದರೆ ಉತ್ತಮ. ಇಲ್ಲವಾದಲ್ಲಿ ನದಿ ಬತ್ತಿದ ಮೇಲೆ ನೀರು ಹರಿಸಿದರೆ ಮರಳು ಮತ್ತು ತಗ್ಗು ಪ್ರದೇಶದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತು ಬಹಳಷ್ಟು ಪ್ರದೇಶಗಳ ಜನರಿಗೆ ನೀರು ಲಭ್ಯವಾಗುವುದಿಲ್ಲ. ಹೀಗಾಗಿ, ಜನಪ್ರತಿನಿಧಿಗಳು ಈಗಲೇ ಎಚ್ಚೆತ್ತು ತಮ್ಮ ಒಣ ಪ್ರತಿಷ್ಠೆಯನ್ನು ಬಿಟ್ಟು ಈ ಬಗ್ಗೆ ಯೋಚಿಸಿ, ಕೂಡಲೇ ಮಹಾರಾಷ್ಟ್ರದ ಡ್ಯಾಂಗಳಿಂದ ನೀರು ಬಿಡಿಸಿ ಈ ಭಾಗದ ಜನ ಹಾಗೂ ಜಾನುವಾರುಗಳನ್ನು ರಕ್ಷಿಸುವ ಕಾರ್ಯ ಆಗಬೇಕಿದೆ.ದಿನದಿಂದ ದಿಮಕ್ಕೆ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಿಂದ ಕೃಷ್ಣಾ ನದಿಯ ನೀರಿನ ಪಾತ್ರ ಇಳಿಕೆಯಾಗುತ್ತಿದ್ದು, ಏಪ್ರೀಲ ಮೊದಲ ವಾರದಲ್ಲಿ ಕೃಷ್ಣೆಯ ಒಡಲು ಬತ್ತುವ ಆತಂಕ ಎದುರಾಗಿದೆ. ಜಿಲ್ಲಾಡಳಿತ ಇತ್ತ ಗಮನ ಹರಿಸಿ ನದಿಯಲ್ಲಿಯ ನೀರು ಬತ್ತುವುದಕ್ಕಿಂತ ಮುಂಚೆ ಮಹಾರಾಷ್ಟ್ರದ ಕೊಯ್ನಾ ಇಲ್ಲವೇ ಬೇರೆ ಡ್ಯಾಂನಿಂದ ನೀರನ್ನು ಹರಿ ಬಿಡಬೇಕು. ನದಿ ಬತ್ತಿದ ಮೇಲೆ ಬಿಟ್ಟರೆ ಪ್ರಯೋಜನವಾಗುವುದಿಲ್ಲ.ಅದಕ್ಕಾಗಿ ಜಿಲ್ಲಾಡಳಿತ ಇತ್ತ ಗಮನ ಹರಿಸಿ ನೀರು ಬಿಡಿಸುವ ವ್ಯಸಸ್ಥೆ ಮಾಡಬೇಕು.

- ಅರುಣಕುಮಾರ ಯಲಗುದ್ರಿ, ನಿವೃತ್ತ ಇಂಜನಿಯರ್‌, ಜಲಸಂಪನ್ಮೂಲ ಇಲಾಖೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ