ಯಾವ ಉತ್ತಮ ಕವಿತೆಯೂ ಅನಾಯಾಸವಾಗಿ ಹುಟ್ಟುವುದಿಲ್ಲ

KannadaprabhaNewsNetwork | Published : Feb 24, 2025 12:32 AM

ಸಾರಾಂಶ

ಸಮಕಾಲಿನ ಕವಿಗಳ ಕವಿತೆಗಳನ್ನು ಓದಿ, ಅರ್ಥೈಸಿ ಮುಂದಿನ ತಲೆಮಾರಿಗೆ ತಲುಪಿಸುವುದು ನಾಗರೀಕ ಸಮಾಜದ ಜವಾಬ್ದಾರಿ

ಕನ್ನಡಪ್ರಭ ವಾರ್ತೆ ಮೈಸೂರು

ಯಾವ ಉತ್ತಮ ಕವಿತೆಯೂ ಅನಾಯಾಸವಾಗಿ ಹುಟ್ಟುವುದಿಲ್ಲ. ಒಂದು ಶ್ರೇಷ್ಠ ಕವಿತೆಯ ಹುಟ್ಟಿಗೆ ಕವಿಯೂ ಪ್ರಾಮಾಣಿಕನಾಗಿರಬೇಕು ಎಂದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ, ಸಾಹಿತಿ ಪ್ರೊ. ನೀಲಗಿರಿ ಎಂ. ತಳವಾರ ತಿಳಿಸಿದರು.

ಕ್ರಿಯಾ ಅಭಿವ್ಯಕ್ತಿ ಸಂಘಟನೆಯು ನಗರದ ಬೋಗಾದಿಯಲ್ಲಿರುವ ಕ್ರಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ನೀ.ಗೂ. ರಮೇಶ್ ಅವರ ‘ಗಾಂಧೀಮರ ಸಂಕಲನದ ಕವಿತೆಗಳ ಓದು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಮರ ಸಂಕಲನವು ಪ್ರಬುದ್ಧ ಕವಿತೆಗಳ ಸಂಕಲನವಾಗಿದ್ದು, ತನ್ನ ವೈಚಾರಿಕ ನಿಲುವುಗಳಿಂದಾಗಿ ವರ್ತಮಾನದ ಕಾವ್ಯದ ಸಂದರ್ಭದಲ್ಲಿ ಮಹತ್ವದ ಸ್ಥಾನ ಪಡೆದುಕೊಳ್ಳುತ್ತದೆ ಎಂದರು.

ಸಮಕಾಲಿನ ಕವಿಗಳ ಕವಿತೆಗಳನ್ನು ಓದಿ, ಅರ್ಥೈಸಿ ಮುಂದಿನ ತಲೆಮಾರಿಗೆ ತಲುಪಿಸುವುದು ನಾಗರೀಕ ಸಮಾಜದ ಜವಾಬ್ದಾರಿಯಾಗಿದೆ. ಒಂದು ಕವಿತೆಯ ಹುಟ್ಟಿನ ಹಿಂದೆ ಕವಿಯ ಮಹಾತಪಸ್ಸೇ ಇರುತ್ತದೆ. ಅಂತಹ ಕವಿತೆಗಳನ್ನು ಓದುವ ಪರಿಪಾಠವು ಸಾಹಿತ್ಯಕ್ಕೆ ಹೊಸ ದಿಕ್ಕನ್ನು ತೋರುತ್ತದೆ. ಕವಿತೆಯ ವಿಶೇಷ ಗುಣವೆಂದರೆ ಅದು ಕವಿ ಮತ್ತು ಓದುಗ ಇಬ್ಬರನ್ನೂ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು.

ಸಾಹಿತ್ಯದ ಬೇರೆಲ್ಲ ಪ್ರಕಾರಕ್ಕಿಂತ ಕಾವ್ಯ ಪ್ರಕಾರ ವಿಶೇಷವಾದುದು. ಆದ್ದರಿಂದ, ಕವಿತೆ ಬರೆಯುವಷ್ಟೇ ಧ್ಯಾನಸ್ಥ ಸ್ಥಿತಿ ಕವಿತೆಯ ಓದಿಗೂ ಬೇಕಾಗುತ್ತದೆ. ಹಾಗಾಗಿ, ಕವಿಗೆ ಇರುವ ಧ್ಯಾನಸ್ಥ ಮನಸ್ಸು ಓದಗನಿಗೂ ಇರಬೇಕಾದದ್ದು ಅಪೇಕ್ಷಣೀಯ ಎಂದರು.

ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ಹೊಸ ಕೃತಿಯ ಪ್ರಕಟಣೆಯ ಸಂಭ್ರಮ ಕೇವಲ ಅದರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಆ ಹೊಸ ಕೃತಿಯ ಓದು, ಚರ್ಚೆ, ಸಂವಾದಗಳ ಮೂಲಕ ಅದು ಜನರನ್ನು ತಲುಪಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಬಿ.ಸಿ. ದೊಡ್ಡೇಗೌಡ, ಪುನೀತ್ ಎಸ್. ಪಾಳೇಕರ್, ಮಂಜುಳಾ ಭದ್ರೇಗೌಡ, ರಶ್ಮಿ ಕೆ. ವಿಶ್ವನಾಥ್, ಎಂ.ಎಸ್. ಸಂಧ್ಯಾರಾಣಿ, ಕಿರಣ್ ಕುಮಾರ್ ದೇಸಾಯಿ, ಸ್ವಾಮಿ ಬಿ. ದಂಡಿನಕೆರೆ, ವಿ. ಶ್ರೀಧರ್, ಕೆ.ಜಿ. ಮನುಪ್ರಸಾದ್, ಆರ್. ಚಂದ್ರಿಕಾ, ಸಂಪತ್ ಕಟ್ಟಿ ಮೊದಲಾದವರು ಡಾ.ನೀ.ಗೂ. ರಮೇಶ್ ಅವರ ‘ಗಾಂಧೀಮರ’ ಸಂಕಲನದಲ್ಲಿನ ಕವಿತೆಗಳನ್ನು ಓದಿ ವಿಶ್ಲೇಷಿಸಿದರು.

ಕ್ರಿಯಾ ಸಂಸ್ಥೆಯ ಸಂಸ್ಥಾಪಕರಾದ ಪ್ರಸನ್ನಕುಮಾರ್ ಕೆರಗೋಡು, ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಸಾಹಿತಿ ಡಾ. ಪಳನಿಸ್ವಾನಿ ಮುಡಗೂರು, ಸಾಹಿತಿ ಡಾ.ನೀ.ಗೂ. ರಮೇಶ್, ಕ್ರಿಯಾ ಅಭಿವ್ಯಕ್ತಿ ಸಂಘಟನೆಯ ಕುಮಾರ್, ಸುಪ್ರಿಯಾ ಶಿವಣ್ಣ ಇದ್ದರು.

Share this article