೧೫೬ ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್‌ಎಸ್

KannadaprabhaNewsNetwork | Published : Jan 9, 2025 12:45 AM

ಸಾರಾಂಶ

ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಕೃಷ್ಣರಾಜಸಾಗರ ಜಲಾಶಯ ನಿರ್ಮಾಣವಾದ ನಂತರದಲ್ಲಿ ೧೫೬ ದಿನಗಳ ಸುದೀರ್ಘ ಅವಧಿಯವರೆಗೆ ಅಣೆಕಟ್ಟೆಯಲ್ಲಿ ೧೨೪ ಅಡಿಯಷ್ಟು ನೀರು ಕಾಯ್ದುಕೊಳ್ಳುವುದರೊಂದಿಗೆ ಇದೇ ಮೊದಲ ಬಾರಿಗೆ ಚರಿತ್ರಾರ್ಹ ದಾಖಲೆ ಸೃಷ್ಟಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ರೈತರ ಜೀವನಾಡಿ ಕೃಷ್ಣರಾಜಸಾಗರ ಜಲಾಶಯ ನಿರ್ಮಾಣವಾದ ನಂತರದಲ್ಲಿ ೧೫೬ ದಿನಗಳ ಸುದೀರ್ಘ ಅವಧಿಯವರೆಗೆ ಅಣೆಕಟ್ಟೆಯಲ್ಲಿ ೧೨೪ ಅಡಿಯಷ್ಟು ನೀರು ಕಾಯ್ದುಕೊಳ್ಳುವುದರೊಂದಿಗೆ ಇದೇ ಮೊದಲ ಬಾರಿಗೆ ಚರಿತ್ರಾರ್ಹ ದಾಖಲೆ ಸೃಷ್ಟಿಸಿದೆ.

ಜಲಾಶಯದ ಗರಿಷ್ಠ ಮಟ್ಟ ೧೨೪.೮೦ ಅಡಿ ಇದ್ದು, ಸದ್ಯ ಅಣೆಕಟ್ಟೆಯಲ್ಲಿ ೧೨೪.೩೦ ಅಡಿಯಷ್ಟು ನೀರು ದಾಖಲಾಗಿದೆ. ೪೯.೪೫೨ ಟಿಎಂ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಸದ್ಯ ೪೮.೭೫೪ ಟಿಎಂಸಿ ನೀರು ಸಂಗ್ರಹವಾಗಿದೆ.

ಸಾಮಾನ್ಯವಾಗಿ ಜನವರಿ ತಿಂಗಳ ವೇಳೆಗೆ ಜಲಾಶಯದ ನೀರಿನ ಮಟ್ಟ ೧೧೦ ರಿಂದ ೧೦೨ ಅಡಿಯವರೆಗೆ ಇಳಿಮುಖವಾಗುತ್ತಿತ್ತು. ಬೇಸಿಗೆ ಬೆಳೆಗೆ ನೀರು ಒದಗಿಸುವುದಕ್ಕೂ ಕಷ್ಟವೆನಿಸುವಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ, ಈ ಬಾರಿ ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದರಿಂದ ಮತ್ತೊಂದು ಬೆಳೆ ಬೆಳೆಯುವುದಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಿರುವುದು ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ.

ಈಗಾಗಲೇ ಜ.೭ರಂದು ನೀರಾವರಿ ಸಲಹಾ ಸಮಿತಿ ಸಭೆಯನ್ನು ಧೈರ್ಯದಿಂದಲೇ ನಡೆಸಿರುವ ಸಚಿವ ಎನ್. ಚಲುವರಾಯಸ್ವಾಮಿ ಅವರು ಜ.೧೦ರಿಂದ ೧೮ ದಿನ ನಾಲೆಗಳಿಗೆ ನೀರು ಹರಿಸಿ ೧೨ ದಿನಗಳ ಕಾಲ ನಿಲ್ಲಿಸುವ ಬಗ್ಗೆ ನಿರ್ಧಾರವನ್ನೂ ಕೈಗೊಂಡಿದ್ದಾರೆ. ರೈತರು ಅಲ್ಪಾವಧಿ ಬೆಳೆಗಳನ್ನು ಬೆಳೆಯುವಂತೆಯೂ ಸಲಹೆ ನೀಡಿದ್ದಾರೆ. ನಾಲ್ಕು ಕಟ್ಟು ನೀರು ನೀಡುವುದಾಗಿ ಭರವಸೆ ನೀಡಿರುವುದರಿಂದ ರೈತರು ಕೆಆರ್‌ಎಸ್ ನೀರನ್ನು ನಂಬಿ ಬೆಳೆ ಬೆಳೆಯುವುದಕ್ಕೆ ಸಿದ್ಧತೆ ನಡೆಸಿದ್ದಾರೆ.

22 ದಿನ ಕಟ್ಟು ಪದ್ಧತಿಯಲ್ಲಿ ನೀರು ಹರಿಸುವಂತೆ ರೈತರ ಮನವಿ

ಮಂಡ್ಯ:

ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರು ಬೆಳೆಗೆ 22 ದಿನ ಕಟ್ಟು ಪದ್ಧತಿಯಲ್ಲಿ ನೀರು ಹರಿಸುವಂತೆ ಆಗ್ರಹಿಸಿ ನಗರದ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯುಂತರರಿಗೆ ರೈತರು ಮನವಿ ಸಲ್ಲಿಸಿದರು.

ರೈತ ಸಂಘದ ಅಧ್ಯಕ್ಷ ಇಂಡವಾಳು ಚಂದ್ರಶೇಖರ್ ಮಾತನಾಡಿ, ನೀರಾವರಿ ಸಲಹಾ ಸಮಿತಿ ಸಭೆ ಸೇರಿ ಜ.10 ರಿಂದ 18 ದಿನ ನಾಲೆಗೆ ನೀರು ಬಿಡುವುದು, 12 ದಿನ ನೀರು ನಿಲ್ಲಿಸುವುದು ಎಂದು ಚರ್ಚಿಸಿರುವುದು ಮಾಧ್ಯಮ ಮೂಲಕ ಗೊತ್ತಾಗಿದೆ. ಇದರಿಂದ ಕೊನೆಭಾಗದ ರೈತ ಬೆಳೆಗಳ ನೀರು ತಲುಪಲು ಸಾಧ್ಯವಿಲ್ಲ ಎಂದರು.

ಕೆ.ಆರ್.ಎಸ್ ಅಣೆಕಟ್ಟೆ ಭರ್ತಿಯಾಗಿದೆ. ಹಿಂಗಾರು ಬೆಳೆಗೆ ರೈತರು ಸಿದ್ದಗೊಳ್ಳುತ್ತಿದ್ದಾರೆ. ಬಿಸಿಲಬೇಗೆ ಹೆಚ್ಚಳವಾಗಿರುತ್ತದೆ. ನೀರಿನ ಅಭಾವ ಬೆಳೆಗೆ ಕಾಡದಿರಲಿ. ಕಡಿಮೆ ದಿನ ನೀರು ನಿಲ್ಲಿಸಿ ಕೊನೆ ಭಾಗದ ರೈತರ ಅನುಕೂಲಕ್ಕಾಗಿ 22 ದಿನ ನೀರು ಹರಿಸಬೇಕು ಎಂದು ಕೋರಿದರು.

ಈಗಾಗಾಲೇ 2 ವರ್ಷ ಬೆಳೆ ಬೆಳೆಯದೆ ರೈತರು ಬರಗಾಲ ಎದುರಿಸಿದ್ದಾರೆ. ಕೃತಕ ಬರಲಾಗವು ಸೃಷ್ಠಿಯಾಗಿ ರೈತರು ಆರ್ಥಿಕವಾಗಿ ನೊಂದಿದ್ದಾರೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ನಾಲೆಗಳು ಮತ್ತು ಕಿರುನಾಲೆಗಳನ್ನು ಅಭಿವೃದ್ದಿ ಪಡಿಸಲಿ. ಆಗ ಸಮರ್ಪಕವಾಗಿ ನೀರು ರೈತ ಬೆಳೆಗೆ ಬರುತ್ತದೆ. ಮದ್ದೂರು-ಮಳವಳ್ಳಿ ಕೊನೆ ಭಾಗದ ರೈತರಿಗೂ ಅನುಕೂಲವಾಗುತ್ತದೆ ಎಂದರು.

ಇದೇ ಸಂಧರ್ಭದಲ್ಲಿ ರೈತ ಮುಖಂಡರಾದ ಶಿವಳ್ಳಿ ಚಂದ್ರಶೇಖರ್, ಇಂಡವಾಳು ಸಿದ್ದೇಗೌಡ, ಪ್ರಕಾಶ್, ಸುರೇಶ್, ಮಹೇಂದ್ರ ಇದ್ದರು.

Share this article