ಬೆಂಗಳೂರು : ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರು ತಮ್ಮ ಆಸ್ತಿ ವಿವರ ಘೋಷಿಸಬೇಕು ಎಂದು ಆಗ್ರಹಿಸಿ ಲೋಕಾಯುಕ್ತ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು.
ಇದೇ ವೇಳೆ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೇ, ಪೊಲೀಸರ ಕರ್ತವ್ಯಕ್ಕೆ ಅಡಿ ಪಡಿಸಲಾಗಿದೆ ಎಂದು ಆರೋಪಿಸಿ ಸಹ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಇಡೀ ದೇಶಕ್ಕೆ ಮಾದರಿಯಾಗಿದ್ದಂತಹ ಸಂಸ್ಥೆಯಾಗಿತ್ತು. ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗಡೆಯವರು ಲೋಕಾಯುಕ್ತರಾಗಿದ್ದ ವೇಳೆ ಬಹಳ ಉತ್ತಮ ಕೆಲಸ ಮಾಡಿದ ಹೆಗ್ಗಳಿಕೆ ಇತ್ತು. ಆದರೆ, ತದನಂತರ ನಡೆದ ಅನೇಕ ಬೆಳವಣಿಗೆಗಳಿಂದ ಲೋಕಾಯುಕ್ತ ಸಂಸ್ಥೆಯು ತನ್ನ ಘನತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ದಶಕದ ನಂತರವೂ ಆ ಘನತೆ ಮತ್ತು ಜನರ ವಿಶ್ವಾಸವನ್ನು ಮರುಗಳಿಸಲು ಸಾಧ್ಯವಾಗಿಲ್ಲ ಎಂದು ಪ್ರತಿಭಟನೆಕಾರರು ಆರೋಪಿಸಿದರು.
ಪಕ್ಷದ ಉಪಾಧ್ಯಕ್ಷ ರಘು ಜಾಣಗೆರೆ ಸೇರಿದಂತೆ ಇತರರು ಲೋಕಾಯುಕ್ತ ಕಚೇರಿಯೊಳಗೆ ಹೋಗಿ ಲೋಕಾಯುಕ್ತರಿಗೆ ಬರೆದಿರುವ ಪತ್ರವನ್ನು ರಿಜಿಸ್ಟ್ರಾರ್ ಅವರಿಗೆ ನೀಡಿ ವಿಚಾರವನ್ನು ತಿಳಿಸಿ ಹೊರಬರುವುದರಲ್ಲಿ ಲೋಕಾಯುಕ್ತ ಕಚೇರಿ ಹೊರಗೆ ಇದ್ದ ಪಕ್ಷದ ಕೆಲವು ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಧಾನಸೌಧದ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ. ಕಾನೂನುಬಾಹಿರ ಪ್ರತಿಭಟನೆ ಮಾಡಿದ ಕಾರಣಕ್ಕೆ ಮಾತ್ರ ಪ್ರಕರಣ ದಾಖಲಿಸಬಹುದಾಗಿತ್ತು. ಆದರೆ, ಕರ್ತವ್ಯಕ್ಕೆ ಅಡ್ಡಿ ಎಂದು ದಾಖಲಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್.ಜೀವನ್, ಸರ್ಕಾರದ ಪ್ರತಿಯೊಬ್ಬ ನೌಕರರು ಪ್ರತಿ ವರ್ಷ ತಮ್ಮ ಕುಟುಂಬದ ಆಸ್ತಿ ವಿವರಗಳನ್ನು ಇಲಾಖಾ ಮುಖ್ಯಸ್ಥರಿಗೆ ಸಲ್ಲಿಸಬೇಕಾಗಿದೆ. ಹಾಗೆಯೇ ರಾಜ್ಯದ ಎಲ್ಲಾ ಜನಪ್ರತಿನಿಧಿಗಳು ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತ ಸಂಸ್ಥೆಗೆ ಕಡ್ಡಾಯವಾಗಿ ಸಲ್ಲಿಸಬೇಕಾಗಿರುತ್ತದೆ. ಇತ್ತೀಚೆಗೆ ತಮ್ಮ ಆಸ್ತಿ ವಿವರ ಸಲ್ಲಿಸದ ಕೆಲವು ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆದರೆ ಈ ವಿವರಗಳನ್ನು ಕೇಳುವ ಲೋಕಾಯುಕ್ತರು ಹಾಗೂ ಉಪಲೋಕಾಯುಕ್ತರು ತಮ್ಮ ಆಸ್ತಿ ವಿವರಗಳನ್ನು ಘೋಷಿಸದೆ ಇರುವುದು ಜನರು ಲೋಕಾಯುಕ್ತ ಸಂಸ್ಥೆಯನ್ನು ಅನುಮಾನದಿಂದ ನೋಡುವಂತಾಗಿದೆ ಎಂದು ಕಿಡಿಕಾರಿದರು.
ದೇಶದ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರಗಳನ್ನು ಘೋಷಿಸಿಕೊಂಡು ಅದನ್ನು ಸಂಬಂಧಿಸಿದ ಜಾಲತಾಣಗಳಲ್ಲಿ ಪ್ರಕಟಿಸುವ ಕ್ರಮವನ್ನು ಸ್ವತಃ ನ್ಯಾಯಾಂಗವೇ ತೆಗೆದುಕೊಂಡು ಪಾಲಿಸಲಾಗುತ್ತಿದೆ. ಆದರೆ ಈ ಬಗ್ಗೆ ಕರ್ನಾಟಕ ಲೋಕಾಯುಕ್ತ ಕಾಯ್ದೆಯಲ್ಲಿ ಯಾವುದೇ ನಿಯಮಗಳು ಇಲ್ಲ ಎಂಬ ಕಾರಣಕ್ಕೆ ಆಸ್ತಿ ವಿವರ ಘೋಷಣೆ ಮಾಡುತ್ತಿಲ್ಲ. ಹೀಗಾಗಿ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಆಸ್ತಿ ವಿವರವನ್ನು ಘೋಷಣೆ ಮಾಡಬೇಕು ಮತ್ತು ಪಕ್ಷದ ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಸುಳ್ಳು ಮೊಕದ್ದಮೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.