ಯುಪಿಎಸ್ಸಿಯಲ್ಲಿ 440ನೇ ರ್‍ಯಾಂಕ್‌ ಪಡೆದ ಕೃಪಾ ಜೈನ್‌!

KannadaprabhaNewsNetwork |  
Published : Apr 17, 2024, 01:17 AM IST
ಕೃಪಾ ಜೈನ | Kannada Prabha

ಸಾರಾಂಶ

ಯಾವುದೇ ಕೋಚಿಂಗ್‌ ಪಡೆಯದೇ ಮನೆಯಲ್ಲೇ ಸ್ವಂತ ತಯಾರಿ ಮಾಡಿಕೊಂಡು ಯುಪಿಎಸ್ಸಿಯಲ್ಲಿ 440 ರ್‍ಯಾಂಕ್‌ ಪಡೆದು ಸೈ ಎನಿಸಿಕೊಂಡಿದ್ದಾರೆ ಹುಬ್ಬಳ್ಳಿಯ ಕೃಪಾ ಜೈನ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಯಾವುದೇ ಕೋಚಿಂಗ್‌ ಪಡೆಯದೇ ಮನೆಯಲ್ಲೇ ಸ್ವಂತ ತಯಾರಿ ಮಾಡಿಕೊಂಡು ಯುಪಿಎಸ್ಸಿಯಲ್ಲಿ 440 ರ್‍ಯಾಂಕ್‌ ಪಡೆದು ಸೈ ಎನಿಸಿಕೊಂಡಿದ್ದಾರೆ ಹುಬ್ಬಳ್ಳಿಯ ಕೃಪಾ ಜೈನ.

ಕೃಪಾ ಜೈನ ವ್ಯಾಪಾರಸ್ಥರ ಮಗಳು. ಅವರ ತಂದೆ ಅಭಯ ಜೈನ ಎಪಿಎಂಸಿಯಲ್ಲಿ ಕಿರಾಣಿ ಅಂಗಡಿ ಹೊಂದಿದ್ದಾರೆ. ತಾಯಿ ಇಂದಿರಾ ಜೈನ ಗೃಹಿಣಿ. ಕೃಪಾ ಪ್ರೌಢಶಿಕ್ಷಣವನ್ನು ನಗರದ ಡಿ.ಕೆ. ಪಬ್ಲಿಕ್‌ ಸ್ಕೂಲ್‌ನಲ್ಲಿ ಪೂರೈಸಿದ್ದಾರೆ. ಪಿಯುಸಿಯನ್ನು ಕೆಎಲ್‌ಇ ಪ್ರೇರಣಾ ಕಾಲೇಜ್‌ನಲ್ಲಿ ಮಾಡಿದ್ದಾರೆ. ಪಿಯುಸಿಯಲ್ಲಿ ಜಿಲ್ಲೆಗೆ ಟಾಪರ್‌ ಆಗಿದ್ದವರು ಕೃಪಾ.

ಮುಂದೆ ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್‌ ಕಾಲೇಜ್‌ನಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ಮಾಡಿದ್ದಾರೆ. ಬಳಿಕ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಡೆವಲಪರ್‌ ಆಗಿ ಕೂಡ ಕೆಲಕಾಲ ಕೆಲಸ ಮಾಡಿದ್ದಾರೆ. ಆದರೆ ಚಿಕ್ಕವಯಸ್ಸಿನಿಂದಲೇ ಯುಪಿಎಸ್‌ಸಿ ಪರೀಕ್ಷೆಗೆ ಕುಳಿತು ಪಾಸಾಗಬೇಕು, ಉನ್ನತ ಅಧಿಕಾರಿಯಾಗಬೇಕು ಎಂಬ ಕನಸು ಕಟ್ಟಿಕೊಂಡವರು ಕೃಪಾ. ಹೀಗಾಗಿ ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ ಕೆಲಸ ಅಷ್ಟೊಂದು ರುಚಿಸಲಿಲ್ಲ. ಹೀಗಾಗಿ ಕೆಲಸಕ್ಕೆ ರಾಜೀನಾಮೆ ನೀಡಿ ಯುಪಿಎಸ್‌ಸಿ ತಯಾರಿ ಮಾಡಲು ಶುರು ಮಾಡಿದ್ದಾರೆ.

ಮೊದಲಿಗೆ ಕೋಚಿಂಗ್‌ ಪಡೆಯಬೇಕೆಂದು ಕೋಚಿಂಗ್‌ ಸೆಂಟರ್‌ನಲ್ಲಿ ಪ್ರವೇಶವನ್ನೂ ಪಡೆದಿದ್ದಾರೆ. ಆದರೆ ಅದೇಕೋ ಸ್ವಂತವಾಗಿಯೇ ತಯಾರಿ ಮಾಡಬೇಕು ಎಂದುಕೊಂಡು ಕೋಚಿಂಗ್‌ ಪಡೆಯುವ ಗೋಜಿಗೆ ಹೋಗಲಿಲ್ಲ. ಮನೆಯಲ್ಲೇ ಕುಳಿತು ದಿನಕ್ಕೆ 14- 15 ಗಂಟೆ ನಿರಂತರ ಅಧ್ಯಯನ ನಡೆಸುತ್ತಾ ತಯಾರಿ ಮಾಡಿಕೊಂಡಿದ್ದಾರೆ. ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್‌ನಲ್ಲೂ ಪಾಸಾಗಲಿಲ್ಲ. ಆದರೂ ಧೃತಿಗೆಡದೇ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.

ಎರಡನೆಯ ಪ್ರಯತ್ನದಲ್ಲಿ ಮೊದಲ ಪಟ್ಟಿಯಲ್ಲೇನೂ ಆಯ್ಕೆಯಾಗಲಿಲ್ಲ. ಆದರೆ ಮೀಸಲು ಪಟ್ಟಿಯಲ್ಲಿ ಐಆರ್‌ಎಂಎಸ್‌ (ಇಂಡಿಯನ್‌ ರೈಲ್ವೆ ಮ್ಯಾನೇಜ್‌ಮೆಂಟ್‌ ಸರ್ವೀಸ್‌)ಗೆ ಆಯ್ಕೆಯಾಗಿದ್ದಾರೆ. ಅಲ್ಲಿ ಮತ್ತೆ ಒಂದು ವರ್ಷ ರಜೆ ಹಾಕಿ ಮತ್ತೊಮ್ಮೆ ಯುಪಿಎಸ್‌ಸಿ ತಯಾರಿ ನಡೆಸಿ ಮೂರನೆಯ ಸಲ ಪರೀಕ್ಷೆ ಕುಳಿತಿದ್ದಾರೆ. ಮೂರನೆಯ ಪ್ರಯತ್ನದಲ್ಲಿ ಯುಪಿಎಸ್‌ಸಿಗೆ 440ನೆಯ ರ್‍ಯಾಂಕ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ತಾವು ಅಂದುಕೊಂಡಿದ್ದನ್ನು ಸಾಧಿಸಿದ ಖುಷಿ ಅವರ ಮೊಗದಲ್ಲಿ ಎದ್ದು ಕಾಣುತ್ತಿದೆ.

ತಂದೆ - ತಾಯಿ ಸಹಕಾರ: ತಂದೆ ಅಭಯ ವ್ಯಾಪಾರಸ್ಥರು. ಮಕ್ಕಳ ಶಿಕ್ಷಣಕ್ಕೆ ಯಾವುದೇ ಕೊರತೆಯಾಗದಂತೆ, ಅವರ ಕನಸು ನನಸಾಗಿಸಲು ಪ್ರೋತ್ಸಾಹ ನೀಡುತ್ತಾ ಬಂದವರು. ಇದೀಗ ಮಗಳು ಯುಪಿಎಸ್‌ಸಿಯಲ್ಲಿ ಪಾಸಾಗಿದ್ದಕ್ಕೆ ಮನೆಯಲ್ಲಿ ಹಬ್ಬದ ಸಂಭ್ರಮ. ಮನೆ ಮಂದಿಯೆಲ್ಲ ಪರಸ್ಪರ ಸಿಹಿ ತಿನ್ನಿಸಿ ಸಂತಸ ಹಂಚಿಕೊಳ್ಳುತ್ತಿದ್ದಾರೆ. ಮಗಳು ಯುಪಿಎಸ್‌ಸಿ ಪಾಸಾಗಿದ್ದು ಖುಷಿ ತಂದಿದೆ. ಕೊನೆಗೆ ಅವಳ ಕನಸು ನನಸು ಮಾಡಿಕೊಂಡಳು. ಇದು ಹೆಮ್ಮೆಯ ಕ್ಷಣ ಎಂದು ತಾಯಿ ಇಂದಿರಾ ಜೈನ ಹೇಳುತ್ತಾರೆ.

ಒಟ್ಟಿನಲ್ಲಿ ಕೋಚಿಂಗ್‌ ಇಲ್ಲದೇ ಕೃಪಾ ಯುಪಿಎಸ್‌ಸಿಯಲ್ಲಿ ಪಾಸಾಗುವ ಮೂಲಕ ಯುಪಿಎಸ್‌ಸಿ ಮಾಡಬೇಕೆನ್ನುವ ಯುವಸಮೂಹಕ್ಕೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.

ಚಿಕ್ಕವಯಸ್ಸಿನಿಂದಲೂ ನನಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಬೇಕೆಂಬ ಕನಸಿತ್ತು. ಕಳೆದ ಸಲ ಮೊದಲ ಪಟ್ಟಿಯಲ್ಲಿ ಹೆಸರು ಇರಲಿಲ್ಲ. ಆದರೆ ರಿಸರ್ವ್‌ ಲಿಸ್ಟ್‌ನಲ್ಲಿ ಐಆರ್‌ಎಂಎಸ್‌ನಲ್ಲಿ ಸೆಲೆಕ್ಟ್‌ ಆಗಿದ್ದೆ. ಮತ್ತೆ 3ನೆಯ ಸಲ ಪರೀಕ್ಷೆಯಲ್ಲಿ ಕುಳಿತಿದ್ದೆ. ಇದೀಗ 440ನೆಯ ರ್‍ಯಾಂಕ್‌ ಬಂದಿದೆ. ಖುಷಿ ಎನಿಸಿದೆ. ತಂದೆ- ತಾಯಿ ಸಹಕಾರ, ಪ್ರೋತ್ಸಾಹವೇ ಈ ಸಾಧನೆಗೆ ಕಾರಣ ಎಂದು ಕೃಪಾ ಜೈನ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ