ಕ್ಷೀರಭಾಗ್ಯ ಹಾಲಿನ ಪೌಡರ್ ಸಾಗಿಸುವಾಗ ಸಿಕ್ಕಿಬಿದ್ದ ಶಿಕ್ಷಕ

KannadaprabhaNewsNetwork | Published : Sep 13, 2024 1:37 AM

ಸಾರಾಂಶ

ಶಾಲಾ ಮಕ್ಕಳಿಗಾಗಿ ರಾಜ್ಯ ಸರ್ಕಾರ ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ಹಾಲಿನ ಪೌಡರ್ ಕಳುಹಿಸಿದ್ದನ್ನು ಬೇರೆಡೆ ಸಾಗಿಸುವಾಗ ಗ್ರಾಮಸ್ಥರು ಹೆಡ್‌ಮಾಸ್ಟರ್ ಅವರನ್ನು ಹಿಡಿದು ತರಾಟೆಗೆ ತೆಗೆದುಕೊಂಡ ಘಟನೆ ಅಫಜಲ್ಪುರ ತಾಲೂಕಿನ ಸ್ಟೇಷನ್ ಗಾಣಗಾಪೂರದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಚವಡಾಪುರ

ಶಾಲಾ ಮಕ್ಕಳಿಗಾಗಿ ರಾಜ್ಯ ಸರ್ಕಾರ ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ಹಾಲಿನ ಪೌಡರ್ ಕಳುಹಿಸಿದ್ದನ್ನು ಬೇರೆಡೆ ಸಾಗಿಸುವಾಗ ಗ್ರಾಮಸ್ಥರು ಹೆಡ್‌ಮಾಸ್ಟರ್ ಅವರನ್ನು ಹಿಡಿದು ತರಾಟೆಗೆ ತೆಗೆದುಕೊಂಡ ಘಟನೆ ಅಫಜಲ್ಪುರ ತಾಲೂಕಿನ ಸ್ಟೇಷನ್ ಗಾಣಗಾಪೂರದಲ್ಲಿ ನಡೆದಿದೆ.

ಅಪೌಷ್ಟಿಕತೆ ನಿರ್ಮೂಲನೆ ಮಾಡುವುದಕ್ಕಾಗಿ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಯ ಹಾಲಿನ ಪೌಡರ್ ಶಾಲಾ ಮಕ್ಕಳಿಗೆ ಕೊಡುವುದಕ್ಕಾಗಿ ಸರ್ಕಾರ ಶಾಲೆಗೆ ಹಾಲಿನ ಪೌಡರ್ ಕಳಿಸಿದರೆ ಸ್ಟೇಷನ್ ಗಾಣಗಾಪೂರ ಶಾಲೆಯ ಹೆಡ್‌ ಮಾಸ್ಟರ್ ಖಾಜಪ್ಪ ದೊಡ್ಮನಿ ಎನ್ನುವವರು ಚೀಲದಲ್ಲಿ ಕದ್ದು ಸಾಗಿಸುತ್ತಿದ್ದರೆನ್ನುವ ಆರೋಪದಡಿ ಗ್ರಾಮಸ್ಥರು ಮುಖ್ಯಗುರು ಖಾಜಪ್ಪ ದೊಡ್ಮನಿ ಅವರನ್ನು ನಿಲ್ಲಿಸಿ ಪ್ರಶ್ನಾವಳಿ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅಲ್ಲದೆ ಮಕ್ಕಳಿಗಾಗಿ ಬಂದಿರುವ ಹಾಲಿ ಪೌಡರ್ ಹೀಗೆ ಕದ್ದು ಮಾರಾಟ ಮಾಡುತ್ತಿರುವುದು ಎಷ್ಟು ಸರಿ? ಇಂತವರಿಗೆ ತಕ್ಕ ಪಾಠ ಕಲಿಸಬೇಕು, ಮುಖ್ಯಗುರು ಖಾಜಪ್ಪ ದೊಡ್ಮನಿ ಅವರ ಮೇಲೆ ಪ್ರಕರಣ ದಾಖಲಿಸಿ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಮುಖ್ಯಗುರು ವರ್ತನೆಗೆ ಆಕ್ರೋಶ: ಹಾಲಿನ ಪೌಡರ್ ಸಾಗಿಸುತ್ತಿದ್ದಾರೆಂದು ಮುಖ್ಯಗುರು ಖಾಜಪ್ಪ ಅವರನ್ನು ಗ್ರಾಮಸ್ಥರು ತಡೆದು ನಿಲ್ಲಿಸಿ ಪ್ರಶ್ನೆ ಕೇಳುತ್ತಿದ್ದಾಗ ಗ್ರಾಮಸ್ಥರನ್ನೇ ಅವಾಚ್ಯ ಶಬ್ದಗಳಿಂದ ಮುಖ್ಯಗುರು ಬೈದಿದ್ದಾರೆಂದು ಆರೋಪಿಸಲಾಗಿದೆ. ಈ ಕುರಿತು ತಾಲೂಕು ಶಿಕ್ಷಣ ಇಲಾಖೆ ಅಧಿಕಾರಿಗಳು, ಅಕ್ಷರ ದಾಸೋಹ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಮಾಹಿತಿ ಪಡೆದು ಶಿಸ್ತು ಕ್ರಮ ಜರುಗಿಸುವುದಾಗಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ಈ ಕುರಿತು ಶಾಸಕ ಎಂ.ವೈ ಪಾಟೀಲ್ ಮಾತನಾಡಿ ಸ್ಟೇಷನ್ ಗಾಣಗಾಪೂರ ಶಾಲೆಯ ಮುಖ್ಯಗುರು ಹಾಲಿನ ಪೌಡರ್ ಬೇರೆಡೆ ಸಾಗಿಸುತ್ತಿದ್ದಾರೆಂದು ವಿಡಿಯೋ ವೈರಲ್ ಆಗಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಮುಖ್ಯಗುರು ಮತ್ತು ಇದರಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದಿದ್ದಾರೆ.

Share this article