ಶ್ರೀ ಕ್ಷೇತ್ರ ಚುಂಚನಕಟ್ಟೆ ಶ್ರೀ ರಾಮ ದೇವಾಲಯದಲ್ಲಿ ವಿಶೇಷ ಪೂಜೆ - ಶ್ರೀರಾಮನ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

KannadaprabhaNewsNetwork |  
Published : Jan 23, 2024, 01:48 AM IST
63 | Kannada Prabha

ಸಾರಾಂಶ

ಶೃಂಗಾರಗೊಂಡಿದ್ದ ಶ್ರೀರಾಮ, ಲಕ್ಷ್ಮಣ ಹಾಗೂ ಸೀತಮ್ಮನ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿ ಮೂಲಕ ಭಕ್ತ ಸಮೂಹ ಗೋವಿಂದಾ ಗೋಪಾಲ ಎಂಬ ಮಂತ್ರ ಪಠಣದೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆ

ಕನ್ನಡಪ್ರಭ ವಾರ್ತೆ ಸಾಲಿಗ್ರಾಮ

ಅಯೋಧ್ಯೆ ದೇಗುಲದಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಇತಿಹಾಸ ಪ್ರಸಿದ್ದ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಚುಂಚನಕಟ್ಟೆ ಗ್ರಾಮದಲ್ಲಿನ ಶ್ರೀ ರಾಮ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಭಕ್ತ ಸಾಗರವೇ ಹರಿದು ಬಂದು, ದೇವರ ದರ್ಶನ ಪಡೆದು, ಭಕ್ತಿ ಭಾವದಲ್ಲಿ ಹರ್ಷೋದ್ಘಾರಿಸಿದರು.

ಮುಂಜಾನೆಯಿಂದಲೇ ಅರ್ಚಕ ವೃಂದ ಸುಪ್ರಭಾತ, ಹಾಲು-ಮೊಸರು, ಅರಿಶಿನ-ಕುಂಕುಮ, ಎಳನೀರು, ಪಂಚಾಮೃತಾಭಿಷೇಕ ಸೇರಿದಂತೆ ಪವಿತ್ರ ಕಾವೇರಿ ನೀರಿನಿಂದ ಶ್ರೀರಾಮ, ಲಕ್ಷ್ಮಣ ಹಾಗೂ ಸೀತಮ್ಮನ ಮೂಲ ಮೂರ್ತಿಗಳಿಗೆ ಜಲಾಭಿಷೇಕ ಮಾಡಿದರು. ನಂತರ ಹಲವು ಬಗೆಯ ಪುಷ್ಪಗಳ ತೋ ಮಾಲಾ ಅಲಂಕರಿಸಿ, ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು. ನಂತರ ಭಕ್ತಸಮೂಹ ಸಮ್ಮುಖದಲ್ಲಿ ದೇವರಿಗೆ ಮಹಾ ಮಂಗಳಾರತಿ ನೆರವೇರಿಸಿದ ಅರ್ಚಕರು ಬಳಿಕ ಬಂದಿದ್ದ ಭಕ್ತರಿಗೆ ತೀರ್ಥ, ಪ್ರಸಾದ ನೀಡಿದರು.

ಇನ್ನು ಶೃಂಗಾರಗೊಂಡಿದ್ದ ಶ್ರೀರಾಮ, ಲಕ್ಷ್ಮಣ ಹಾಗೂ ಸೀತಮ್ಮನ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿ ಮೂಲಕ ಭಕ್ತ ಸಮೂಹ ಗೋವಿಂದಾ ಗೋಪಾಲ ಎಂಬ ಮಂತ್ರ ಪಠಣದೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆ ನಡೆಸಲಾಯಿತು.

ಗ್ರಾಮಸ್ಥರು ಸೇರಿದಂತೆ ಜಿಲ್ಲೆ ಹಾಗೂ ರಾಜ್ಯದ ನಾನಾ ಭಾಗಗಳಿಂದ ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯ ಭಕ್ತರು ಸಂಜೆವರೆಗೂ ತಂಡೋಪತಂಡವಾಗಿ ದೇಗುಲಕ್ಕೆ ಆಗಮಿಸಿ ಸುಡುವ ಬಿಸಿಲನ್ನು ಲೆಕ್ಕಿಸಿದೆ ಮಹಿಳೆಯರು, ಮಕ್ಕಳು, ವೃದ್ಧರು ಸರತಿ ಸಾಲಿನಲ್ಲಿ ನಿಂತು ದೇವರಿಗೆ ಹಣ್ಣು, ಕಾಯಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

ಎಲ್ಲೆಡೆ ಪೂಜೆ- ಇನ್ನು ಅಯೋದ್ಯೆ ದೇಗುಲದಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಚುಂಚನಕಟ್ಟೆ ಹೋಬಳಿಯಾದ್ಯಂತ ಗ್ರಾಮಗಳ ದೇಗುಲ ಹಾಗೂ ಮುಖ್ಯರಸ್ತೆಗಳಲ್ಲಿ ಗ್ರಾಮದ ಮುಖಂಡರು ಹಾಗೂ ಯುವಕರು ಶ್ರೀರಾಮ ಭಾವಚಿತ್ರ ಇಟ್ಟು ಪೂಜಿಸಿ ದಾರಿ ಹೋಗಕರಿಗೆ ಮಜ್ಜಿಗೆ, ಪಾನಕ, ಕೋಸಂಬರಿ, ಬಾತ್ ಸೇರಿದಂತೆ ವಿವಿಧ ಬಗೆಯ ಪ್ರಸಾದವನ್ನು ನೀಡಿದರು.

ಶ್ರೀರಾಮ ದೇಗುಲಕ್ಕೆ ಶ್ರೀರಾಮ, ಲಕ್ಷ್ಮಣ ಹಾಗೂ ಸೀತೆ ವೇಷ ಧರಿಸಿ ದೇಗುಲಕ್ಕೆ ಆಗಮಿಸಿದ ಪುಟಾಣಿ ಮಕ್ಕಳು ಎಲ್ಲರ ಗಮನಸೆಳೆಯಿತು. ಅಷ್ಟೇ ಅಲ್ಲದೆ ಕೆಲವರು ಸೆಲ್ಫಿ ಫೋಟೋ ಗೆ ಮುಗಿಬಿದ್ದ ದೃಶ್ಯ ಕಂಡು ಬಂತು.

ದೇಗುಲದ ಇಒ ರಘು, ಪಾರುಪತ್ತೆದಾರ ಯತಿರಾಜು, ಅರ್ಚಕರಾದ ನಾರಾಯಣ ಅಯ್ಯಂಗಾರ್, ವಾಸುದೇವನ್, ನವೀನ್ ಭಟ್ಟರು, ಭವಾನಿ ಪ್ರಸಾದ್, ಶೇಷಾದ್ರಿ, ಸಿಬ್ಬಂದಿಗಳಾದ ಶಿವಣ್ಣ, ತಿಮ್ಮಣ್ಣ, ಚಂದ್ರನಾಯಕ, ಹರೀಶ್, ಮಣಿ ಕಮಲ ಕೃಷ್ಣ ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌