- ದಾವಣಗೆರೆ ನಿಲ್ದಾಣದಲ್ಲಿ ಚಾಲಕನಿಗೆ ಅಡ್ಡಿಪಡಿಸಿದ ಸಂಘಟನೆ ಮುಖಂಡ ಪೊಲೀಸ್ ವಶಕ್ಕೆ
- ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೋಗಿಗಳು, ವೃದ್ಧರು, ಗರ್ಭಿಣಿ-ಬಾಣಂತಿಯರಿಗೆ ತೀವ್ರ ಕಷ್ಟ
- ರೈಲ್ವೆ ನಿಲ್ದಾಣಕ್ಕೆ ತೆರಳಿ ಉತ್ತರ ಕರ್ನಾಟಕ, ಹಳೇ ಮೈಸೂರಿನ ಭಾಗಕ್ಕೆ ಜನರ ಪಯಣ- - -
ತಮ್ಮ 38 ತಿಂಗಳ ಬಾಕಿ ವೇತನ ಬಿಡುಗಡೆ, ವೇತನ ಪರಿಷ್ಕರಣೆ, ಕಾರ್ಮಿಕರ ಮೇಲಿನ ಕಿರುಕುಳ ನಿಲ್ಲಬೇಕು ಎಂಬುದು ಸೇರಿದಂತೆ ಕೆಎಸ್ಸಾರ್ಟಿಸಿ ಸ್ಟ್ಯಾಫ್ ಅಂಡ್ ವರ್ಕರ್ಸ್ ಫೆಡರೇಷನ್ ನೇತೃತ್ವದಲ್ಲಿ ಕರೆ ನೀಡಿದ್ದ ಕೆಎಸ್ಸಾರ್ಟಿಸಿ ನೌಕರರ ಮುಷ್ಕರವೇನೋ ಯಶಸ್ವಿಯಾಯಿತು. ಆದರೂ, ಪ್ರಯಾಣಿಕರಿಗೆ ತೊಂದರೆ ಆಗದಂತೆ ಖಾಸಗಿ ಬಸ್‌ಗಳು, ಮಿನಿ ಬಸ್‌ಗಳ ಸೇವೆ ಒದಗಿಸಿ, ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು.
ಅನಕ್ಷರಸ್ಥರು, ವೃದ್ಧರು, ವಿಕಲಚೇತನರು, ಗರ್ಭಿಣಿ, ಬಾಣಂತಿಯರು, ದೂರದ ಪರ ಊರುಗಳಿಂದ ಬಂದವರಿಗೆ ದಾವಣಗೆರೆಯಿಂದ ಮುಂದೆ ಹೋಗಲು ಸರ್ಕಾರಿ ಬಸ್‌ಗಳ ಸೇವೆ ಸಿಗದೇ ಪರದಾಡಿದರು. ಅನೇಕರು ನಿಲ್ದಾಣದಲ್ಲೇ ಈಗ ಬಸ್ಸು ಬರಬಹುದು, ನಂತರ ಬರಬಹುದೆಂದು ಕಾಯುತ್ತಿದ್ದರು. ಆಯಾ ಫ್ಲಾಟ್ ಫಾರಂಗಳಲ್ಲಿ ಖಾಸಗಿ ಬಸ್, ಮಿನಿ ಬಸ್, ಟ್ರಾವೆಲ್ಸ್ ಬಸ್‌ಗಳು ಬಂದು ನಿಂತಾಗ ಅದೇ ಕೆಎಸ್ಸಾರ್ಟಿಸಿ ಅಧಿಕಾರಿಗಳು, ಸಿಬ್ಬಂದಿ ಧ್ವನಿವರ್ಧಕ ಮೂಲಕ ಖಾಸಗಿ ಬಸ್ಸುಗಳನ್ನು ಹತ್ತಿ, ಪ್ರಯಾಣ ಮಾಡುವಂತೆ ಜನರಿಗೆ ಸಲಹೆ-ಸೂಚನೆ ನೀಡಿ, ಪ್ರಯಾಣಿಕರಿಗೆ ನೆರವಾದರು.
ಕೆಎಸ್ಸಾರ್ಟಿಸಿ ನಿಲ್ದಾಣದ ನಿಯಂತ್ರಣಾಧಿಕಾರಿಗಳ ವಿರುದ್ಧವೂ ಜನ ಆಕ್ರೋಶ ಹೊರಹಾಕಿದರು. ಅದರಲ್ಲೂ ಉಚಿತ ಪ್ರಯಾಣ ಮಾಡುವ ಮಹಿಳೆಯರ ಆಕ್ರೋಶಕ್ಕೆ ಕಡಿವಾಣವೇ ಇರದಂತಾಗಿತ್ತು. ಬಸ್‌ಗಳಲ್ಲಿ ಪ್ರಯಾಣಕ್ಕೆ ಟಿಕೆಟ್ ಪಾವತಿಸಿ ಬಂದಿದ್ದೇವೆ. ಬಸ್ ಸಂಚಾರ ಇಲ್ಲ ಎಂದಿದ್ದರೆ ಆನ್ ಲೈನ್‌ನಲ್ಲಿ ಟಿಕೆಟ್ ಯಾಕೆ ಬುಕ್ಕಿಂಗ್ ಮಾಡಿಕೊಂಡಿದ್ದೀರಿ? ನಾವು ವೋಲ್ವೋ, ಐರಾವತಾ, ಎಲೆಕ್ಟ್ರಿಕ್ ಬಸ್‌ಗಳಲ್ಲಿ ಬುಕ್ ಮಾಡಿದ್ದೇವೆ. ಇಲ್ಲಿ ನೋಡಿದರೆ ಯಾವುದೇ ಖಾಸಗಿ ಬಸ್‌ಗಳನ್ನು ಹತ್ತು ಎಂದರೆ ಏನರ್ಥ? ನಾವು ಈಗ ಊರಿಗೆ ಹೋಗುವುದು ಹೇಗೆಂದು ಕಂಟ್ರೋಲರ್ ವಿರುದ್ಧ ಜನರು ಹರಿಹಾಯುತ್ತಿದ್ದರು.
ಜಿಲ್ಲಾಡಳಿತವೇ ಖಾಸಗಿ ಬಸ್‌ಗಳ ಸಂಚಾರ ವ್ಯವಸ್ಥೆ ಮಾಡಿತ್ತಾದರೂ, ನಿತ್ಯವೂ ಸುಮಾರು 411ಕ್ಕಿಂತಲೂ ಹೆಚ್ಚು ಬಸ್‌ಗಳು ಕಾರ್ಯಾಚರಿಸುವ ನಿಲ್ದಾಣ ಮಾತ್ರ ತನ್ನದೇ ಬಸ್‌ಗಳ ಸೇವೆ ಇಲ್ಲದೇ ಬಿಕೋ ಎನ್ನುತ್ತಿತ್ತು. ಸ್ವತಃ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ ಬಸಾಪುರ ಡಿಪೋದಲ್ಲಿ ಮೊಕ್ಕಾಂ ಹೂಡಿ, ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಮನವೊಲಿಸುವ ಕೆಲಸದಲ್ಲಿ ತೊಡಗಿದ್ದರು. ಆದರೆ, ಅಲ್ಲೇ ಇದ್ದ ಚಾಲಕರು, ನಿರ್ವಾಹಕರು ಮಾತ್ರ ತಮ್ಮ ಸಂಘಟನೆ ಕರೆ ಮೇರೆಗೆ ಮುಷ್ಕರದಲ್ಲಿ ಭಾಗಿಯಾಗಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರ ನಿರಂತರ ಇರುತ್ತದೆಂದು ಹೇಳಿದರು.
ದಾವಣಗೆರೆಯಿಂದ ಚಿತ್ರದುರ್ಗ, ಬೆಂಗಳೂರು, ಚನ್ನಗಿರಿ, ಚಿಕ್ಕಮಗಳೂರು, ಹೊನ್ನಾಳಿ, ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ- ಧಾರವಾಡ, ಹೊಸಪೇಟೆ, ಬಳ್ಳಾರಿ ಭಾಗಕ್ಕೆ ಬಸ್ಸುಗಳು ಇಲ್ಲದೇ ಜನರ ಪರದಾಟ ರಾತ್ರಿಯೂ ಮುಂದುವರಿದಿತ್ತು.
(ಬಾಕ್ಸ್)
* ಖಾಸಗಿ-ಮಿನಿ ಬಸ್ಸು, ಆಟೋ, ಅಪೆ ಆಟೋ ಗತಿ ದಾವಣಗೆರೆ: ದಾವಣಗೆರೆ ನಗರ, ಜಿಲ್ಲಾದ್ಯಂತ ಕೆಎಸ್ಸಾರ್ಟಿಸಿ ನೌಕರರ ಮುಷ್ಕರದ ಬಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸರ್ಕಾರಿ- ಖಾಸಗಿ ನೌಕರರು, ಹಿರಿಯ ನಾಗರೀಕವರೆಗೆ ಎಲ್ಲರಿಗೂ ಎಲ್ಲಿಲ್ಲದಂತೆ ತಟ್ಟಿದ್ದು ಸುಳ್ಳಲ್ಲ.ಎಂದಿನಂತೆ ಶಾಲಾ-ಕಾಲೇಜಿಗೆ ನಗರ ಪ್ರದೇಶದ ದೂರದ ಸ್ಥಳ, ಗ್ರಾಮೀಣ ಪ್ರದೇಶದಿಂದ ನಗರ, ತಾಲೂಕು, ಜಿಲ್ಲಾ ಕೇಂದ್ರಕ್ಕೆ ಬಂದು ಹೋಗಲು ಬಸ್ಸು ಇಲ್ಲದೇ ವಿದ್ಯಾರ್ಥಿಗಳು ಪರದಾಡಿದರು. ಆಸ್ಪತ್ರೆ, ಸರ್ಕಾರಿ ಕೆಲಸ, ಕಾರ್ಯಕ್ಕೆ ಬರಲು, ವಾಪಾಸ್ಸಾಗಲು ಸರ್ಕಾರಿ ಬಸ್, ನಗರ ಸಾರಿಗೆ ಬಸ್‌ಗಳು ಇಲ್ಲದೇ, ತುಂಬಿದ ಖಾಸಗಿ ಬಸ್, ಖಾಸಗಿ ಸಿಟಿ ಬಸ್, ಆಟೋ ರಿಕ್ಷಾ, ಅಪೆ ಆಟೋಗಳಿಗೆ ಮೊರೆ ಹೋಗಬೇಕಾಯಿತು.
ಸರ್ಕಾರಿ ಬಸ್ ನೌಕರರ ಮುಷ್ಕರದಿಂದಾಗಿ ಪ್ರಯಾಣಿಕರು ರೈಲು ಬಳಕೆಗೂ ಮೊರೆಹೋದರು. ಹರಿಹರ, ದಾವಣಗೆರೆ ರೈಲ್ವೆ ನಿಲ್ದಾಣಗಳಲ್ಲಿ ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಹರಪನಹಳ್ಳಿ, ಕೊಟ್ಟೂರು, ಇತ್ತ ಬೀರೂರು, ಕಡೂರು, ತಿಪಟೂರು, ತುಮಕೂರು, ಬೆಂಗಳೂರು, ಮೈಸೂರು ಕಡೆ ಹೋಗುವ ಪ್ರಯಾಣಿಕರು ಸಹ ರೈಲಿನಲ್ಲಿ ಪ್ರಯಾಣಿಸಿದರು. ಎಂದಿಗಿಂತಲೂ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಹೆಚ್ಚು ಪ್ರಯಾಣಿಕರು ಕಂಡುಬಂದರು.- - -
(ಬಾಕ್ಸ್-2)* ಸರ್ಕಾರಿ ಬಸ್ ಸಂಚಾರಕ್ಕೆ ಅಡ್ಡಿ: ಆವರಗೆರೆ ಉಮೇಶ ವಶ ಕನ್ನಡಪ್ರಭ ವಾರ್ತೆ ದಾವಣಗೆರೆ
ತಮ್ಮ ಮುಷ್ಕರ ಮಧ್ಯೆಯೂ ಸರ್ಕಾರಿ ಬಸ್‌ಗಳಿಗೆ ಕೆಲ ಚಾಲಕರು ಚಾಲನೆಗೆ ಮುಂದಾಗಿದ್ದರು. ಖಾಸಗಿ ಬಸ್‌ಗಳ ಸೇವೆ ಆರಂಭಿಸಿದ್ದರಿಂದ ಬಸ್ ಚಾಲನೆ ಮಾಡುತ್ತಿದ್ದ ಚಾಲಕ ಹಾಗೂ ಮುಷ್ಕರನಿರತ ಕೆಎಸ್ಸಾರ್ಟಿಸಿ ನೌಕರರು, ಸಂಘಟನೆ ಮುಖಂಡರ ಮಧ್ಯೆ ತೀವ್ರ ಮಾತಿನ ಚಕಮಕಿ ಏರ್ಪಟ್ಟಿತು.ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಸರ್ಕಾರಿ ಬಸ್ಸೊಂದನ್ನು ಚಾಲಕ ಚಾಲನೆ ಮಾಡಿಕೊಂಡು ಬಂದಿದ್ದರಿಂದ ಸಹಜವಾಗಿಯೇ ಮುಷ್ಕರನಿರತ ನೌಕರರು, ಸಂಘಟನೆ ಮುಖಂಡ ಆವರಗೆರೆ ಎಚ್.ಜಿ.ಉಮೇಶ ಇತರರು ಚಾಲಕನಿಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಸರ್ಕಾರಿ ಬಸ್ ಚಾಲನೆ ಮಾಡುತ್ತಿದ್ದ ಚಾಲಕ ತಾನು ಮುಷ್ಕರಕ್ಕೆ ಬೆಂಬಲ ನೀಡಿಲ್ಲವೆಂದು ಹೇಳಿದ್ದರಿಂದ ಆಕ್ರೋಶಗೊಂಡ ಎಚ್.ಜಿ.ಉಮೇಶ, ತೀವ್ರ ಅಸಮಾಧಾನ ತೋರಿದರು. ಇಬ್ಬರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಒಂದು ಹಂತದಲ್ಲಿ ಸರ್ಕಾರಿ ಬಸ್ ಮುಂದೆ ಸಾಗಲು ಅಡ್ಡಿಪಡಿಸಿದ ಆವರೆಗೆರೆ ಉಮೇಶ ಅವರನ್ನು ಬಂಧಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಸೂಚಿಸಿದರು.
ಆಗ ತಕ್ಷಣವೇ ಆವರಗೆರೆ ಉಮೇಶ ಅವರನ್ನು ವಶಕ್ಕೆ ಪಡೆದ ಪೊಲೀಸರು, ಆಟೋ ರಿಕ್ಷಾವೊಂದರಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಗೆ ಕರೆದೊಯ್ದರು. ರಾಜ್ಯ ಸರ್ಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಆವರಗೆರೆ ಉಮೇಶ ಅವರನ್ನು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ಯಲಾಯಿತು.- - -
-(ಫೋಟೋಗಳಿವೆ).