-ಚಿತ್ರದುರ್ಗದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಸಂಘದ ಚಿತ್ರದುರ್ಗ ವಿಭಾಗದ ಸಮಾವೇಶ । ಸಿಐಟಿ ಕೆ.ಪ್ರಕಾಶ್ ಕಿವಿ ಮಾತು
-----ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಹಿತವನ್ನು ಕಾಯುವ ಕಾರ್ಯವನ್ನು ಮಾಡಬೇಕಿದೆ. ಇದು ಬಿಟ್ಟು ಅವರಲ್ಲಿ ಗೊಂದಲ, ಸುಳ್ಳನ್ನು ಹೇಳುವಂತ ಕಾರ್ಯವನ್ನು ಮಾಡಬಾರದು ಎಂದು ಸಿಐಟಿಯುನ ರಾಜ್ಯ ಉಪಾಧ್ಯಕ್ಷ ಕೆ.ಪ್ರಕಾಶ್ ಕಿವಿ ಮಾತು ಹೇಳಿದ್ದಾರೆ.ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಸಂಘದ ಚಿತ್ರದುರ್ಗ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಚಿತ್ರದುರ್ಗ ವಿಭಾಗದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿಐಟಿಯು ಸಂಘಟನೆಯು ಕಾರ್ಮಿಕರ ಹಿತವನ್ನು ಕಾಯುವ ಕೆಲಸವನ್ನು ಮಾಡುತ್ತಿದೆ. ಇವರ ಬಗ್ಗೆ ಹೋರಾಟವನ್ನು ಮಾಡುವುದರ ಮೂಲಕ ಅಂದಿನ ಸರ್ಕಾರದಲ್ಲಿ ಮಾತುಕತೆಯನ್ನು ನಡೆಸುವುದರ ಮೂಲಕ ಸಮಸ್ಯೆಯನ್ನು ಇತ್ಯರ್ಥ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ನಮ್ಮ ಸಂಘಟನೆ ಬೇರೆ ಸಂಘಟನೆಯೊಂದಿಗೆ ಕೈಜೋಡಿಸುವುದರ ಮೂಲಕ ಕಾರ್ಮಿಕರಿಗೆ ಸೌಲಭ್ಯಗಳನ್ನು ಕೊಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.
ಕಾರ್ಮಿಕರ ಪರವಾಗಿ ಸಂಘಟನೆಗಳು ಕೆಲಸ ಮಾಡಬೇಕಿದೆ. ಇಲ್ಲಿ ವ್ಯಕ್ತಿಗಿಂತ ಸಂಘಟನೆ ದೃಷ್ಟಿಯಿಂದ ಕಾರ್ಮಿಕರ ಸರ್ವಾಂಗೀಣ ಅಭೀವೃದ್ಧಿಗೆ ಪಣ ತೊಡಬೇಕಿದೆ. ಕೆಲವು ದಿನಗಳ ಹಿಂದೆ ಸಾರಿಗೆ ನಿಗಮ ಲಾಭದಲ್ಲಿ ಇದೆ ಎಂದ ನಿಗಮದ ಅಧ್ಯಕ್ಷರು, ನಂತರ ನಿಗಮ ನಷ್ಠದಲ್ಲಿದೆ ಎಂದು ಹೇಳುವುದರ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದೆಲ್ಲ ಸಾರಿಗೆ ದರ ಹೆಚ್ಚಳ ಮಾಡುವುದಕ್ಕೆ ನಾಟಕವಾಗಿದೆ. ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ನಷ್ಠವಾಗಿಲ್ಲ, ಲಾಭದ ಹಾದಿಯಲ್ಲಿದೆ. ಆದರೆ, ಇದನ್ನು ಮುಚ್ಚಿಡುವ ಕಾರ್ಯವನ್ನು ನಿಗಮದ ವತಿಯಿಂದ ನಡೆಯುತ್ತಿದೆ. ಸರ್ಕಾರದ ವತಿಯಿಂದ ನಿಗಮದ ವಾಹನಗಳಿಗೆ ಸಹಾಯ ಧನದಡಿ ಡೀಸೆಲ್ ನೀಡುವುದರ ಮೂಲಕ ನಿಗಮವನ್ನು ಕಾಪಾಡಬೇಕಿದೆ. ಡಿಸೇಲ್ ಏರಿಕೆಯಿಂದಾಗಿ ನಿಗಮ ಆರ್ಥಿಕವಾಗಿ ತೊಂದರೆ ಅನುಭವಿಸುತ್ತದೆ. ಇದ್ದಲ್ಲದೆ ಈಗ ಇ.ವಿ.ಬಸ್‍ಗಳನ್ನು ಓಡಿಸುವುದರ ಮೂಲಕ ಸಾರಿಗೆ ಸಂಸ್ಥೆಯನ್ನು ನಷ್ಠದಲ್ಲಿ ಅನುಭವಿಸುವಂತೆ ಮಾಡಲಾಗಿದೆ ಎಂದು ದೂರಿದರು.ಕೇಂದ್ರ ಸರ್ಕಾರ ರಾಜ್ಯಕ್ಕೆ ಜಿಎಸ್.ಟಿ. ಹಣ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ, ಇದ್ದಲ್ಲದೆ ಇ.ವಿ.ಬಸ್ ಗಳನ್ನು ಓಡಿಸುವ ಖಾಸಗಿಯವರಿಗೆ 50 ಲಕ್ಷ ರೂ.ಗಳ ಸಹಾಯಧನ ನೀಡಲು ಮುಂದಾಗಿದೆ ಆದರೆ ಇದನ್ನು ನಮ್ಮ ಸಾರಿಗೆ ಸಂಸ್ಥೆಗೆ ನೀಡುವಂತೆ ಮನವಿ ಮಾಡಲಾಗಿದೆ ಆದರೆ ಸರ್ಕಾರ ಇದರ ಬಗ್ಗೆ ಗಮನ ನೀಡಿಲ್ಲ ಎಂದ ಅವರು, ನಿಗಮದಲ್ಲಿ ಈಗ ಖಾಯಂ ನೌಕರರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ, ಹೂರ ಗುತ್ತಿಗೆ ನೌಕರರನ್ನು ತೆಗೆದುಕೊಳ್ಳುವುದರ ಮೂಲಕ ಖಾಯಂ ನೌಕರರನ್ನು ಕಡಿಮೆ ಮಾಡುತ್ತಿದೆ. ದೇಶದಲ್ಲಿ ನಮ್ಮ ರಾಜ್ಯದಲ್ಲಿ ಮಾತ್ರ ಸಾರಿಗೆ ಇಲಾಖೆಯ ಬಸ್‍ಗಳು ಹೆಚ್ಚಾಗಿ ಇವೆ ಆದರೆ ಬೇರೆ ರಾಜ್ಯಗಳಲ್ಲಿ 50ಕ್ಕಿಂತ ಕಡಿಮೆ ಬಸ್‍ಗಳು ಮಾತ್ರ ಓಡುತ್ತಿವೆ. ಇದರೊಂದಿಗೆ ಸರ್ಕಾರದ ನೀತಿಗಳು ಸಹಾ ನಿಗಮ ತೊಂದರೆಯನ್ನು ಅನುಭವಿಸುವಂತೆ ಆಗುತ್ತಿದೆ ಎಂದರು.
ರಾಜ್ಯ ಸಾರಿಗೆ ಸಂಸ್ಥೆಗಳ ನಿಗಮದ ಅಧ್ಯಕ್ಷ ಹೆಚ್.ಡಿ.ರೇವಪ್ಪ ಮಾತನಾಡಿ, ಸರ್ಕಾರ ಇಂದಿನ ದಿನಮಾನದಲ್ಲಿ ಬಸ್‍ಗಳಲ್ಲಿನ ಕಂಡಕ್ಟರ್ ಹುದ್ದೆಗಳನ್ನು ತೆಗೆಯುವುದರ ಮೂಲಕ ಚಾಲಕನೇ ಎರಡು ಹುದ್ದೆ ನಿಭಾಯಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದರಿಂದ ನಿಗಮಕ್ಕೆ ಲಾಭವಾಗುತ್ತಿದೆ. ಕಾರ್ಮಿಕರ ಸಂಘಟನೆಯಾದ ಸಿಐಯುಟಿ ಸಂಘಟನೆಯು ಕಾರ್ಮಿಕರ ಹಿತವನ್ನು ಕಾಯುವ ಕಾರ್ಯವನ್ನು ಮಾಡಲಾಗುತ್ತಿದೆ. ಕಾರ್ಮಿಕರಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.ರಾಜ್ಯ ಸಾರಿಗೆ ಸಂಸ್ಥೆಗಳ ನಿಗಮದ ಮಹಿಳಾ ನೌಕರರ ಒಕ್ಕೂಟದ ಪ್ರ.ಕಾ ಕುಸುಮ ಓಂ.ಪ್ರಕಾಶ್, ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮಾಡುವುದರ ಮೂಲಕ ಅವರ ಸಮಸ್ಯೆಗಳನ್ನು ಪರಿಹಾರ ಮಾಡಬಹುದಾಗಿದೆ. ಕಾರ್ಮಿಕರಲ್ಲಿ ವಿಷ ಬಿತ್ತುವ ಕೆಲಸವನ್ನು ಬೇರೆ ಸಂಘಟನೆಗಳು ಮಾಡುತ್ತಿವೆ. ಇದರ ಬಗ್ಗೆ ಎಚ್ಚರದಿಂದ ಇರಬೇಕಿದೆ ಎಂದರು.
ಸಿಐಟಿಯುನ ಜಿಲ್ಲಾ ಸಂಚಾಲಕ ಸಿ.ಕೆ.ಗೌಸ್‍ಪೀರ್, ಸರ್ಕಾರ ಮತ್ತು ಕಾರ್ಮಿಕರು ಸೇರಿ ಸಾರಿಗೆ ನಿಗಮವನ್ನು ಉಳಿಸಬೇಕಿದೆ. ತಮ್ಮ ಹೋರಾಟದ ಮೂಲಕ ಸೌಲಭ್ಯವನ್ನು ಪಡೆಯಬೇಕಿದೆ ಎಂದರು.ಮಾಧ್ಯಮ ಅಕಾಡೆಮಿಯ ಸದಸ್ಯ ಹಿರಿಯ ಪತ್ರಕರ್ತ ಆಹೋಬಲಪತಿಯವರನ್ನು ಸನ್ಮಾನಿಸಲಾಯಿತು. ರಾಜ್ಯ ಸಾರಿಗೆ ಸಂಸ್ಥೆಗಳ ನಿಗಮದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಮಂಜುನಾಥ್, ಸಿಐಟಿಯುನ ರಾಜ್ಯ ಸಮಿತಿ ಸದಸ್ಯ ನಿಂಗಪ್ಪ, ಪ.ಜಾ.ಪ.ಪಂ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಆರ್.ಬಾಬುರಾವ್ ದಾವಣಗೆರೆ ವಿಭಾಗದ ಮುಖಂಡ ಎಂ.ಆರ್.ತಿಪ್ಪೇಸ್ವಾಮಿ ಸಿಐಟಿಯುನ ಪ್ರ.ಕಾ ಹನುಮಂತಪ್ಪ, ಸಂಘಟನಾ ಕಾರ್ಯದರ್ಶಿ ಎಸ್.ರವಿ ಭಾಗವಹಿಸಿದ್ದರು.
ಸಮಾವೇಶದಲ್ಲಿ ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ವಿಭಾಗದ ಅದ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಚಿತ್ರದುರ್ಗ ವಿಭಾಗದ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಪಾವಗಡ, ಘಟಕದ ಸಿಐಟಿಯುನ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಭಾಗವಹಿಸಿದ್ದರು.-----
ಫೋಟೊ: ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಸಂಘದ ಚಿತ್ರದುರ್ಗ ವಿಭಾಗದ ಸಮಾವೇಶ ನಡೆಯಿತು.