ಕೆಎಸ್ಆರ್‌ಟಿಸಿ ಸಂಸ್ಥೆಯ ಸೇವೆ ಶ್ಲಾಘನೀಯ: ಎಸ್.ಎ.ಚಿನ್ನೇಗೌಡ

KannadaprabhaNewsNetwork | Published : Nov 23, 2024 12:31 AM

ಸಾರಾಂಶ

ಕನ್ನಡದ ಕಂಪನ್ನು ನಾಡಿನಾದ್ಯಂತ ಪಸರಿಸುವಲ್ಲಿ ಕೆ.ಎಸ್.ಆರ್.ಟಿ.ಸಿ ನೌಕರರ ಪಾತ್ರ ಹೇಳಳಸಾಧ್ಯ ಎಂದು ಚಿನ್ನೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕನ್ನಡ ಭಾಷೆ ಉಳಿಸಿ ಬೆಳೆಸುವಲ್ಲಿ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ಸೇವೆ ಶ್ಲಾಘನೀಯವಾದದ್ದು ಎಂದು ಕನ್ನಡ ಚಲನಚಿತ್ರ ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ ಅಭಿಪ್ರಾಯಪಟ್ಟರು.

ನಗರದ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಬಳಗ ಚಿಕ್ಕಬಳ್ಳಾಪುರ ವಿಭಾಗದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಡಾ.ರಾಜ್ ಕುಮಾರ್ ಸಂಸ್ಮರಣಾ ಸಮಾರಂಭ ಹಾಗೂ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಡಾ.ರಾಜ್ ರಂಗ ಪ್ರಶಸ್ತಿ ವಿತರಿಸಿ ಮಾತನಾಡಿ, ನಾಡಿನಲ್ಲಿ ಪ್ರತಿ ವರ್ಷ ನವೆಂಬರ್ ತಿಂಗಳು ಪೂರ್ತಿ ಬಸ್‌ಗಳಿಗೆ ಅಲಂಕರಿಸಿ, ಪೂಜೆ ಸಲ್ಲಿಸಿ, ದಸರಾ, ದೀಪಾವಳಿ ಹಬ್ಬಗಳ ರೀತಿಯಲ್ಲಿ ಕನ್ನಡದ ಕಂಪನ್ನು ನಾಡಿನಾದ್ಯಂತ ಪಸರಿಸುವಲ್ಲಿ ಕೆ.ಎಸ್.ಆರ್.ಟಿ.ಸಿ ನೌಕರರ ಪಾತ್ರ ಹೇಳಳಸಾಧ್ಯ ಎಂದರು.

ನಾಡೋಜ ಡಾ. ಮನು ಬಳಿಗಾರ್ ಮಾತನಾಡಿ, ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸುಮಾರು 15 ಶತಮಾನಗಳಿಗೂ ಹೆಚ್ಚು ಪರಂಪರೆಯಿದ್ದು ಜಗತ್ತಿನ ಮುಂದುವರೆದಿರುವ ಹಲವು ರಾಷ್ಟ್ರಗಳು ಕಣ್ಣುಬಿಡುವ ಮೊದಲೆ ಕನ್ನಡನಾಡು ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿತ್ತು. ಆದಿಕವಿ ಪಂಪನು ನೀಡಿರುವ ಮಾನವ ಜಾತಿ ತಾನೊಂದೆ ವಲಂ ಎಂಬ ವಿಶ್ವ ಮಾನವ ಸಂದೇಶವನ್ನು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯು ನಿರಂತರ ಪೋಷಿಸಿಕೊಂಡು ಬಂದಿದ್ದು ಈ ಸಂದೇಶವನ್ನು ನಾವು ಗೌರವಿಸಿ ಪಾಲಿಸಬೇಕು ಎಂದರು.ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಾರತವು ನೂರಾರು ಭಾಗಗಳಾಗಿ ಹರಿದು ಹಂಚಿ ಹೋಗಿತ್ತು. ಕನ್ನಡಿಗರು ಬಾಳುತ್ತಿದ್ದ ಭೌಗೋಳಿಕ ಕ್ಷೇತ್ರಗಳನ್ನು ಒಂದುಗೂಡಿಸುವ ಏಕೀಕರಣ ಚಳವಳಿಯಲ್ಲಿ ಹಲವು ಹಿರಿಯ ಕವಿಗಳು, ಲೇಖಕರು, ಅಧಿಕಾರಿಗಳು, ಸಮಾಜ ಸುಧಾರಕರು, ರಾಜಕೀಯ ನಾಯಕರು ಹೋರಾಟ ನಡೆಸಿ ಕರ್ನಾಟಕ ಏಕೀಕರಣಗೊಳಿಸಿದರು. ಎಂಬತ್ತರ ದಶಕದಾರಂಭದಲ್ಲಿ ಕನ್ನಡದ ಅಸ್ಮಿತೆಗೆ ತೊಂದರೆಯಾದಾಗ ಡಾ.ರಾಜ್ ಕುಮಾರ್ ಗೋಕಾಕ ಚಳುವಳಿ ನಡೆಸಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಎಲ್ಲಾ ಮಹನೀಯರಿಗೆ ನಾಡಿನ ಜನತೆ ಋಣಿಯಾಗಿದ್ದು ಅವರ ಕನಸುಗಳನ್ನು ನನಸು ಮಾಡಬೇಕು ಎಂದು ತಿಳಿಸಿದರು.ಇಂದು ಕರ್ನಾಟಕ ಜಗತ್ತಿನಲ್ಲಿ ಗೌರವ ಹೊಂದಿದೆ. ಎಲ್ಲಾ ಕ್ಷೇತ್ರಗಳು ಅಭಿವೃದ್ಧಿಯಾಗಿವೆ, ಕನ್ನಡ ಯುವಕರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ವಿದೇಶಗಳಲ್ಲಿಯೂ ನಾಡಹಬ್ಬ ಆಚರಿಸುತ್ತಿರುವುದು ಸಂತಸದ ವಿಷಯ. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮಾಧ್ಯಮಕ್ಕೆ ಪ್ರೋತ್ಸಾಹ ಸಿಕ್ಕುತ್ತಿಲ್ಲ. ಆದರೆ ಮಾತೃಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಬೆಳೆಯದೆ ವ್ಯಕ್ತಿತ್ವ ಪೂರ್ಣವಾಗುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಕನ್ನಡ ಪುಸ್ತಕಗಳು, ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಓದುವ ಮೂಲಕ ಶೈಕ್ಷಣಿಕ ಉನ್ನತಿ ಹಾಗೂ ಉದ್ಯೋಗ ಗಳಿಕೆಯನ್ನು ಕಂಡುಕೊಳ್ಳಬೇಕೆಂದು ಸಲಹೆ ನೀಡಿದರು.

ಚಿಕ್ಕಬಳ್ಳಾಪುರದ ವಿಭಾಗೀಯ ನಿಯಂತ್ರಣಾಧಿಕಾರಿ ವಿ,ಬಸವರಾಜು ಮಾತನಾಡಿ, ಕೆ.ಎಸ್.ಆರ್.ಟಿ.ಸಿಯ 15 ವಿಭಾಗಗಳಲ್ಲಿ ಲಾಭದಲ್ಲಿ ಚಿಕ್ಕಬಳ್ಳಾಪುರ ವಿಭಾಗವು ಇದೆ ಎಂದು ಹೇಳಲು ಸಂತಸವಾಗುತ್ತಿದೆ. ಇದಕ್ಕೆ ಕಾರಣೀಭೂತರಾದ ಎಲ್ಲ ಸಿಬ್ಬಂದಿಗೂ ಧನ್ಯವಾದಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ಮಾಪಕ ಹಾಗೂ ನಟ ಶ್ರೀದರ್ಶನ್ ಸೇರಿದಂತೆ ಕೆ.ಎಸ್.ಆರ್.ಟಿ.ಸಿಯ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 12 ಮಂದಿಗೆ ಡಾ.ರಾಜ್ ರಂಗ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಈ ವೇಳೆ ಕರಾರಸಾ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾಸಮಿತಿಯ ಗೌರವ ಸಲಹೆಗಾರ ವ.ಚ.ಚನ್ನೇಗೌಡ,ಎನ್.ಶ್ರೀನಿವಾಸ್, ಆರ್.ಸುರೇಶ್ ಬಾಬು, ಕೆ.ಎಸ್.ಪ್ರಭುಸ್ವಾಮಿ, ಕೆ.ಎಸ್.ಎಂ.ಹುಸೇನ್, ಎಚ್.ಕೆ.ಸುರೇಶ, ವಿ.ರಮೇಶ್, ಕಾಂತಾಜು, ಡಿ.ಎಲ್.ರಮೇಶ,ಡಿಪೋ ಮೇನೆಜರ್ ಲಕ್ಷ್ಮೀಪತಿ ಮತ್ತಿತರರು ಇದ್ದರು. ಸಿಕೆಬಿ-1 ಚಿಕ್ಕಬಳ್ಳಾಪುರ ನಗರದ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಏರ್ಪಡಿಸಿದ್ದ ಡಾ.ರಾಜ್ ಕುಮಾರ್ ಸಂಸ್ಮರಣಾ ಸಮಾರಂಭ ಹಾಗೂ 69ನೇ ಕನ್ನಡ ರಾಜ್ಯೋತ್ಸವವನ್ನು ನಾಡೋಜ ಡಾ. ಮನು ಬಳಿಗಾರ್ ಉದ್ಘಾಟಿಸಿದರು.

Share this article