ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕೆಎಸ್‌ಆರ್‌ಟಿಸಿಯ ಕೆಲ ನಿರ್ವಾಹಕರು ಮತ್ತು ಚಾಲಕರಿಗೆ ಸಭ್ಯತೆ ಕಲಿಸುವ ತರಬೇತಿ ಕಾರ್ಯಾಗಾರ ಅಯೋಜಿಸುವ ಅನಿವಾರ್ಯತೆ ಇದೆ ಎಂದು ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತಾರಾಜ್ ಹೇಳಿದ್ದಾರೆ.ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಯೋಜಿಸಿದ್ದ ಗ್ಯಾರಂಟಿ ಯೋಜನೆಯ ಮಾಸಿಕ ಸಭೆಯಲ್ಲಿ ಅಧ್ಯಕ್ಷರು ತಮಗಾದ ಅವಮಾನ ತೆರೆದಿಟ್ಟರು.
ಶಕ್ತಿ ಯೋಜನೆಯನ್ನು ಜನ ಟೀಕಿಸಲು ಕೆಲ ನಿರ್ವಾಹಕರೇ ಕಾರಣ ಎಂದು ದೂರಿದರು. ನನಗೂ ನಿರ್ವಾಹಕ ಅವಮಾನ ಮಾಡಿದ್ದ, ಹಿರಿಯ ನಾಗರಿಕರ ಗುರುತಿನ ಚೀಟಿ ತೋರಿಸುವ ಮೊದಲೆ ಪೂರ್ಣ ಪ್ರಮಾಣದ ಟಿಕೇಟ್ ಹರಿದಾಗ, ನಾನು ಗುರುತಿನ ಚೀಟಿ ತೋರಿಸಿದ ಸಂದರ್ಭ, ಬಸ್ ಹತ್ತುವಾಗಲೇ ಗುರುತಿನ ಚೀಟಿ ಹಿಡಿದುಕೊಂಡು ಬರಬೇಕು ಎಂದು ಅಸಭ್ಯವಾಗಿ ವರ್ತಿಸಿ ಮುಂದೆ ಹೋದ. ನಾನು ಪೂರ್ಣ ಪ್ರಮಾಣದ ಟಿಕೇಟ್ ಹಣವನ್ನು ನೀಡಿ ಪ್ರಯಾಣ ಮಾಡಿದೆ. ಕೊನೆಗೆ ಅವನಿಗೆ ತಪ್ಪು ಮನವರಿಕೆ ಆಗಿ, ಅರ್ಧ ಹಣವನ್ನು ವಾಪಾಸ್ಸು ನೀಡಿದ ಎಂದರು.ಹಿರಿಯ ನಾಗರಿಕರಿಗೆ ನೀಡುವ ರಿಯಾಯಿತಿ ಹಣವನ್ನು ಸರ್ಕಾರ ಕೆಎಸ್‌ಆರ್‌ಟಿಸಿಗೆ ಭರಿಸುತ್ತದೆ. ಅವರು ಭಿಕ್ಷೆ ಕೊಡುವುದಲ್ಲ ಎಂದು ಹೇಳಿದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪರಮೇಶ ಕುಮಾರ್ ತಮ್ಮ ಅನುಭವ ಹೇಳಿಕೊಂಡರು. ಬಸ್ ತಡವಾಗಿ ಬಂದಿದ್ದಕ್ಕೆ ಸಭ್ಯತೆಯಿಂದಲೇ ಪ್ರಶ್ನಿಸಿದಾಗ, ಇದೇನೂ ಮರ್ಸಿಡಿಸ್ ಬೆಂಜಾ, ಬೇಕಾದ್ರೆ ಹೋಗಿ ಕೂತ್ಕೊಳ್ಳಿ ಎಂದು ಅನಾಗರಿಕತೆ ಪ್ರದರ್ಶಿಸಿದ. ನಿರ್ವಾಹಕನೊಂದಿಗೆ ವಾಗ್ವಾದ ಮಾಡಲಿಲ್ಲ. ನೇರವಾಗಿ ಹಿರಿಯ ಅಧಿಕಾರಿಗೆ ಮೇಲ್ ಮೂಲಕ ದೂರು ನೀಡಿದೆ ಎಂದು ಅನುಭವ ಹೇಳಿಕೊಂಡರು.ಮಹಿಳೆಯರು ಬಸ್‌ಗೆ ಕೈ ಅಡ್ಡಹಾಕಿದರೆ ಅನೇಕ ಬಸ್ ಚಾಲಕರು ಬಸ್ ನಿಲ್ಲಿಸದೇ ಹೋಗುತ್ತಾರೆ ಎಂದು ಸದಸ್ಯ ವಿರೇಂದ್ರ ಕುಮಾರ್ ದೂರಿದರು. ಅಂತಹ ಬಸ್ ನಂಬರ್, ಮಾರ್ಗ, ಸಮಯವನ್ನು ಬರೆದು ದೂರು ನೀಡಿದರೆ, ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತಾರೆ ಎಂದು ಸಂಚಾರಿ ನಿಯಂತ್ರಕ ಶ್ರೀನಿವಾಸ್ ಭರವಸೆ ನೀಡಿದರು.
೨೦೨೩ರಿಂದ ನ.೨೪ರ ವರಗೆ ಸೋಮವಾರಪೇಟೆ ತಾಲೂಕಿನಲ್ಲಿ ೮೧,೨೨,೪೭೬ ಮಂದಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ. ಮಡಿಕೇರಿ ಡಿಪೋಗೆ ಪ್ರತಿ ದಿನ ೬.೦೫ ಲಕ್ಷ ರು. ಆದಾಯ ಬರುತ್ತಿದೆ ಎಂದು ಶ್ರೀನಿವಾಸ ಹೇಳಿದರು.೨೦೨೪ರ ನವೆಂಬರ್ ಅಂತ್ಯಕ್ಕೆ ಗೃಹಲಕ್ಷ್ಮೀ ಯೋಜನೆಯಲ್ಲಿ ತಾಲೂಕಿನಲ್ಲಿ ೨೫೨೩೨ ಫಲಾನುಭವಿಗಳ ನೊಂದಣಿಯಾಗಿದ್ದು, ೨೪,೮೦೨ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತಿದೆ. ಶೇ.೯೭.೦೬ ಸಾಧನೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸಾವಿತ್ರಮ್ಮ ತಿಳಿಸಿದರು. ಇನ್ನೆರಡು ತಿಂಗಳಲ್ಲಿ ಎಲ್ಲಾ ಸಮಸ್ಯೆ ಬಗೆಹರಿಸಿ, ಶೇ.೧೦೦ರಷ್ಟು ಪ್ರಗತಿ ಸಾಧಿಸುವ ಗುರಿಯಿದೆ ಎಂದು ಅಧ್ಯಕ್ಷರು ಸಭೆಯ ಗಮನಕ್ಕೆ ತಂದರು.
ಗೃಹಜ್ಯೋತಿ ಯೋಜನೆಯಲ್ಲಿ ತಾಲೂಕಿನಲ್ಲಿ ೨೬೪೧೮ ಮನೆಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಅಧಾರ್ ಸಂಖ್ಯೆ ಸರಿಹೊಂದದ ಹಾಗು ಇನ್ನಿತರ ತಾಂತ್ರಿಕ ಕಾರಣಗಳಿಂದ ೧೬೬ ಮನೆಗಳಿಗೆ ಸೌಲಭ್ಯ ಸಿಗುತ್ತಿಲ್ಲ ಶೇ.೯೯.೩೮ ಸಾಧನೆಯಾಗಿದೆ ಎಂದು ಎಇಇ ತಿಳಿಸಿದರು.ಅನ್ನಭಾಗ್ಯ ಯೋಜನೆಯಡಿ, ತಾಲೂಕಿನಲ್ಲಿ ೨೪,೪೧೦ ಫಲಾನುಭವಿಗಳಿದ್ದು, ೨೨,೮೮೯ ಫಲಾನುಭವಿಗಳಿಗೆ ಹಣ ಸಂದಾಯವಾಗಿದೆ. ಆರು ತಿಂಗಳಿನಿಂದ ಪಡಿತರ ತೆಗೆದುಕೊಳ್ಳದ ೬೦೬ ಕಾರ್ಡುಗಳು ಸ್ಥಗಿತಗೊಂಡಿವೆ. ಆದಾಯ ತೆರಿಗೆ ಕಟ್ಟುವ ೨೦೭ ಪಡಿತರ ಚೀಟಿಗಳು ಎಪಿಎಲ್ ಆಗಿ ಪರಿವರ್ತನೆಯಾಗಿವೆ. ೧.೨೦ ಲಕ್ಷ ರು.ಗಳಷ್ಟು ಮೇಲ್ಪಟ್ಟ ಆದಾಯ ಪ್ರಮಾಣ ಪತ್ರ ಪಡೆದಿರುವ ೨೪೧೧ ಪಡಿತರ ಚೀಟಿಗಳು ಪರಿಶೀಲನೆಯಲ್ಲಿವೆ ಎಂದು ಆಹಾರ ನಿರೀಕ್ಷಕಿ ಯಶಸ್ವಿನಿ ಸಭೆಗೆ ತಿಳಿಸಿದರು.
ಯುವನಿಧಿಯಲ್ಲಿ ಸೋಮವಾರಪೇಟೆ ತಾಲೂಕಿನಲ್ಲಿ ೩೮೫ ಮಂದಿ ನೊಂದಾವಣಿಯಾಗಿದ್ದು, ೨೮೫ ಮಂದಿಗೆ ಹಣ ಸಂದಾಯವಾಗುತ್ತಿದೆ. ೨೦೨೩ರಲ್ಲಿ ಪದವಿ ಮತ್ತು ಡಿಪ್ಲೋಮ ಪಡೆದವರು, ಯೋಜನೆಗೆ ಅರ್ಹರು ಎಂದು ಸಂಬಂಧಪಟ್ಟ ಅಧಿಕಾರಿ ಮಾಹಿತಿ ನೀಡಿದರು.