ಶಿವಾನಂದ ಮಹಾಬಲಶೆಟ್ಟಿ
ಶತಮಾನದ ಇತಿಹಾಸವಿರುವ ಕುಡಚಿ-ಬಾಗಲಕೋಟೆ ರೈಲು ಮಾರ್ಗ (೧೪೨ ಕಿ.ಮೀ) ಕಾಮಗಾರಿ ೨೦೦೮ರಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ಪ್ರತಿಧ್ವನಿಸಿದ್ದರ ಪರಿಣಾಮ ೨೦೧೦ರಲ್ಲಿ ಪುನಃ ಕಾರ್ಯಾರಂಭಗೊಂಡ ಯೋಜನೆ ಆಮೆಗತಿಯಲ್ಲಿಯೇ ಮುನ್ನಡೆದು ಇದೀಗ ಮತ್ತೇ ನೇಪಥ್ಯಕ್ಕೆ ಸರಿಯುವಂತಾಗಿದೆ.
2012ರಲ್ಲಿ ಶುರುವಾದ ರೈಲು ಮಾರ್ಗ ಕಾರ್ಯ 142 ಕಿಮೀ ಪೈಕಿ ಈವರೆಗೆ ಕೇವಲ 41 ಕಿಮೀನಷ್ಟು ಕಾಮಗಾರಿ ನಡೆದಿದೆ. ಇನ್ನುಳಿದ 101 ಕಿಮೀನಷ್ಟು ಕಾರ್ಯದಲ್ಲಿ ಲೋಕಾಪುರದಿಂದ ಯಾದವಾಡವರೆಗೆ 22 ಕಿಮೀನಷ್ಟು ಕಾಮಗಾರಿ ಪ್ರಗತಿಯಲ್ಲಿದ್ದರೆ ಯಾದವಾಡದಿಂದ ಜಮಖಂಡಿವರೆಗಿನ 28 ಕಿ.ಮೀ.ನಷ್ಟು ಕಾರ್ಯ ಇನ್ನೂ ನಡೆದಿಲ್ಲ. ಕಳೆದ ತಿಂಗಳಷ್ಟೇ ಹೋರಾಟ ಸಮಿತಿಯಿಂದ ಕುಡಚಿಯಲ್ಲಿ ಸತ್ಯಾಗ್ರಹ ನಡೆಸಿದ್ದರ ಫಲವಾಗಿ ಕುಡಚಿಯಿಂದ-ಜಮಖಂಡಿವರೆಗಿನ ೫೧ ಕಿ.ಮೀ. ಕೆಲಸ ಪ್ರಾರಂಭಿಸುವುದಾಗಿ ಜನಪ್ರತಿನಿಧಿಗಳ ಆಶ್ವಾಸನೆಯಿಂದ ಸತ್ಯಾಗ್ರಹ ಕೈ ಬಿಡಲಾಗಿತ್ತು. ಆದರೆ ಆ ಕಾರ್ಯವೂ ಮಂದಗತಿಯಲ್ಲಿಯೇ ಸಾಗುತ್ತಿದೆ.೨ ವರ್ಷಗಳ ಹಿಂದೆಯೇ ಕುಡಚಿ-ಜಮಖಂಡಿವರೆಗಿನ ಭೂಸ್ವಾಧೀನ ಪ್ರದೇಶದ ಸ್ವಚ್ಛತೆ ಹಾಗೂ ಜಾಗ ಗುರುತು ಬಗ್ಗೆ ₹೬.೫ ಕೋಟಿ ವೆಚ್ಚದಲ್ಲಿ ಟೆಂಡರ್ ಆಗಿದ್ದರೂ ಗುತ್ತಿಗೆದಾರ ಮಾತ್ರ ಇನ್ನೂ ಕಾರ್ಯ ನಡೆಸಿಲ್ಲ.
ಸಮಿತಿ ಸುಸ್ತು, ಜನಬೆಂಬಲದ ಕೊರತೆ: ರೈಲ್ವೆ ಹೋರಾಟ ಸಮಿತಿ ಕಳೆದೆರಡು ದಶಕಗಳಿಂದ ಹೋರಾಟ ನಡೆಸುತ್ತ ಇದೀಗ ಸುಸ್ತಿನ ಹಾದಿ ತುಳಿಯುತ್ತಿದೆ. ಆಯಾ ತಾಲೂಕಾಧ್ಯಕ್ಷರ ನೇತೃತ್ವದಲ್ಲಿ ಭಾರೀ ಪ್ರಮಾಣದಲ್ಲಿ ಬೆಂಬಲ ಸೂಚಿಸಿದ ಕಾರಣ ಇಂದು ರೈಲು ಮಾರ್ಗ ಚುರುಕು ಪಡೆದುಕೊಂಡಿತ್ತು. ಕಳೆದೆರಡು ವರ್ಷಗಳಿಂದ ಹೋರಾಟದ ಬಿಸಿ ಕಡಿಮೆಯಾಗಿದ್ದಲ್ಲದೆ ಹೋರಾಟಗಾರರಿಗೆ ಜನತೆಯ ಬೆಂಬಲ ಕಡಿಮೆಯಾಗಿರುವುದು ಕಾಮಗಾರಿ ಹಿನ್ನೆಡೆಗೆ ಕಾರಣ ಎನ್ನಲಾಗುತ್ತಿದೆ.
ಹೋರಾಟ ಸಮಿತಿಗೆ ನಾಗರಿಕರ ಬೆಂಬಲ ಕಡಿಮೆಯಾಗುತ್ತಿರುವುದು ಬೇಸರ ತಂದಿದೆ. ಆದರೂ ರೈಲು ಮಾರ್ಗ ಶೀಘ್ರ ಮುಕ್ತಾಯಗೊಳ್ಳಬೇಕು. ಅಲ್ಲಿಯವರೆಗೂ ಹೋರಾಟ ಸಮಿತಿ ಹೋರಾಟದ ಕಾವು ಇರಲಿದೆ.